ಜಗತ್ತಿನಲ್ಲೇ ಸುಂದರ ಅರ್ಥ, ಲಿಪಿ ಹೊಂದಿರುವ ಭಾಷೆ ಕನ್ನಡ

KannadaprabhaNewsNetwork | Published : Dec 25, 2023 1:32 AM

ಸಾರಾಂಶ

ಇಂಗ್ಲಿಷ್‌ ಸೇರಿದಂತೆ ಪ್ರಪಂಚದ ಇತರ ಭಾಷೆಗಳ ಲಿಪಿಗಳಿಗಿಂತಲೂ ಕನ್ನಡ ಭಾಷೆಯ ಲಿಪಿ ಅತ್ಯಮತ ಸುಂದರವಾಗಿದೆ. ಭಾವನೆಗಳನ್ನು ವ್ಯಕ್ತಪಡಿಸಲು, ವಿಶಾಲ ಅರ್ಥವುಳ್ಳ ಹಾಗೂ ಅಂತಃಕರಣ ಪದಪುಂಜವನ್ನು ಕನ್ನಡ ಭಾಷೆ ಹೊಂದಿದೆ ಎಂದು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಆರ್.ವೈಷ್ಣವಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಆನವಟ್ಟಿ

ಕನ್ನಡ ಲಿಪಿಯು, ಇಂಗ್ಲಿಷ್‌ ಸೇರಿದಂತೆ ಪ್ರಪಂಚದ ಇತರ ಭಾಷೆಗಳ ಲಿಪಿಗಳಿಗಿಂತಲೂ ಸುಂದರವಾಗಿದೆ. ಸಂದರ್ಭ ಅನುಸಾರವಾಗಿ ಮನುಷ್ಯನ ಭಾವನೆಗಳನ್ನು ವ್ಯಕ್ತಪಡಿಸಲು, ವಿಶಾಲ ಅರ್ಥವುಳ್ಳ ಹಾಗೂ ಅಂತಃಕರಣ ಪದಪುಂಜವನ್ನು ಕನ್ನಡ ಭಾಷೆ ಹೊಂದಿದೆ ಎಂದು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಆರ್.ವೈಷ್ಣವಿ ಅಭಿಪ್ರಾಯಿಸಿದರು.

ಆನವಟ್ಟಿಯ ಕೋಟಿಪುರ ಗ್ರಾಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಾಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತುಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳು ಹಾಗೂ ಯುವಸಮೂಹ ಮೊಬೈಲ್ ಗೀಳಿನಿಂದ ಹೊರಬಂದು ಸಾಹಿತ್ಯ ಪುಸ್ತಕಗಳ ಓದು, ಅಧ್ಯಯನ ಕಡೆಗೆ ಒಲವು ತೋರಬೇಕಿದೆ. ಕೀರ್ತನೆಗಳು, ಜಾನಪದಗಳು, ಶರಣರ ಸಾಹಿತ್ಯ, ರತ್ನತ್ರಯರಾದ ರನ್ನ, ಪೊನ್ನ, ಪಂಪ, ಆಧುನಿಕ ಸಾಹಿತ್ಯದ ಕುವೆಂಪು, ದ.ರಾ. ಬೇಂದ್ರೆ ಸೇರಿದಂತೆ ಇನ್ನೂ ಅನೇಕ ಕವಿಗಳು ಸುಜ್ಞಾನ ನೀಡುವ ಮಹತ್ವವಾದ ಕೃತಿಗಳನ್ನು ರಚಿಸಿ, ಮನುಕುಲಕ್ಕೆ ಕೊಡುಗೆ ನೀಡಿದ್ದಾರೆ. ಅಂತಹ ಸಾಹಿತ್ಯಗಳನ್ನು ಓದುವುದರಿಂದ ಮನುಸ್ಸು ಒಳ್ಳೆಯ ಅಲೋಚನೆಗಳನ್ನು ಮಾಡುವ ಜೊತೆಗೆ ನಮ್ಮ ಭಾಷೆಯ ಆಳ, ನಾಡಿನ ಪ್ರಕೃತಿ, ಸಂಸ್ಕೃತಿಯ ಸೊಬಗಿನ ಜೊತೆಗೆ ಸಂಸ್ಕಾರದ ಅರಿವು ಉಂಟು ಮಾಡುತ್ತವೆ ಎಂದರು.

ಪರಿಷತ್ತು ಸೊರಬ ತಾಲೂಕು ಅಧ್ಯಕ್ಷ ಡಾ. ವಿ.ಉಮೇಶ್ ಭದ್ರಾಪುರ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಮತ್ತು ಸೃಜನಾಶೀಲತೆ ಜೊತೆಗೆ ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸಲು ಇಂತಹ ಸಮ್ಮೆಳನಗಳ ವೇದಿಕೆ ಸಹಕಾರಿ. ಸಾಹಿತ್ಯ ಅಧ್ಯಯನದ ಜೊತೆ-ಜೊತೆಗೆ ಮಕ್ಕಳಲ್ಲಿ ಅಡಗಿರುವ ಬರವಣಿಗೆ ಹೆಚ್ಚಾಗುತ್ತದೆ ಮತ್ತು ಹೊಸ ತಲೆಮಾರಿಗೆ ಸಾಹಿತ್ಯ ರಚನೆಗೆ ಹಾಗೂ ಉದಯೋನ್ಮುಖ ಬರಹಗಾರರಿಗೆ ಸ್ಫೂರ್ತಿ ಆಗಲಿದೆ ಈ ಮಕ್ಕಳ ಸಾಹಿತ್ಯ ಸಮ್ಮೇಳನ ಎಂದರು.

ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು:

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಬಹಳಷ್ಟು ಮಕ್ಕಳಿಗೆ ಇಂದು ಸಾಹಿತ್ಯ ಓದಲು ಬರುತ್ತಿಲ್ಲ ಎಂಬುವುದು ಆಂತಕದ ವಿಷಯ. ಈ ಬಗ್ಗೆ ಎಲ್ಲ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾಹಿತ್ಯ ಕೆಲವೇ ಜನರ ಸ್ವತ್ತಾಲ್ಲ. ಎಲ್ಲರು ಸಾಹಿತ್ಯವನ್ನು ಆಸ್ವಾದಿಸುವಂತೆ ಆಗಬೇಕು. ಪ್ರಪಂಚದಲ್ಲಿ ಎಂಟು ಸಾವಿರ ಭಾಷೆಗಳಿ ಇದ್ದರೂ, ಕನ್ನಡವನ್ನೇ ಹೆಚ್ಚು ಮಾತನಾಡುವವರು ಇದ್ದಾರೆ. ದೇಶದ ಚುಕ್ಕಾಣಿ ಹಿಡಿದವರು ಒಂದು ಭಾಷೆ, ಒಂದು ಧರ್ಮ ಮಾಡುತ್ತೇವೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸಮಜವಾಗುತ್ತದೆ ಎಂದು ಪ್ರಶ್ನೆ ಮಾಡಿದರು.

ಸಮ್ಮೇಳನದ ಸರ್ವಾಧ್ಯಕ್ಷೆ ಆರ್‌.ವೈಷ್ಣವಿ ಅವರನ್ನು ವಿವಿಧ ಕಲಾಮೇಳಗಳೊಂದಿಗೆ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ ಸತ್ಯನಾರಾಯಣ, ಬಸವನಗೌಡ ಮಲ್ಲಾಪುರ, ಮಾಲತೇಶ್ ಹೆಗಡಿಕಟ್ಟಿ, ಸುನೀತಾ ವಿಜಯಪ್ರಸಾದ್, ರೇಣುಕಮ್ಮ ಗೌಳಿ, ಸಂತೋಷ, ಟಿ.ಪಿ.ಅಜಿತ್‌ಕುಮಾರ್, ಡಿ.ಎಸ್. ಶಂಕರ್, ಕಾರ್ತಿಕ್ ಇದ್ದರು.

- - - -ಕೆಪಿ22ಎನ್‌ಟಿ1ಇಪಿ:

ಆನವಟ್ಟಿಯ ಕೋಟಿಪುರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೆಳನವನ್ನು ಸರ್ವಾಧ್ಯಕ್ಷೆ ಆರ್. ವೈಷ್ಣವಿ ಉದ್ಘಾಟಿಸಿದರು. -ಕೆಪಿ22ಎನ್‌ಟಿ2ಇಪಿ: ಸಮ್ಮೇಳನ ಸರ್ವಾಧ್ಯಕ್ಷೆ ಆರ್.ವೈಷ್ಣವಿ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

Share this article