ಕನ್ನಡಪ್ರಭ ವಾರ್ತೆ ರಾಯಚೂರು
ಕನ್ನಡವು ಜಗತ್ತಿನ ಅತ್ಯಂತ ಪುರಾತನ ಹಾಗೂ ಶ್ರೀಮಂತ ಭಾಷೆಯಾಗಿದೆ ಎಂದು ಶಿಕ್ಷಣ ತಜ್ಞ ರಾಮಣ್ಣ ಹವಳೆ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಕನ್ನಡ ಭವನದಲ್ಲಿ ಹೊಸಮನಿ ಪ್ರಕಾಶನದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ನೃಪತುಂಗ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರಿಸ್ತಪೂರ್ವ 4000 ವರ್ಷಗಳ ಹಿಂದೆ ಕನ್ನಡ ಜನ್ಮವೆತ್ತಿದೆ ಎಂದು ಡಿವಿ ಗುಂಡಪ್ಪ ಅವರು ಪ್ರತಿಪಾದಿಸಿದ್ದಾರೆ, ಕ್ರಿಸ್ತಶಕ 458 ಕನ್ನಡಕ್ಕೆ ಅಕ್ಷರರೂಪ ಬಂದಿದ್ದು, ಹಲ್ಮಿಡಿ ಶಾಸನದಿಂದ ಗೊತ್ತಾಗುತ್ತದೆ ಇವು ಕನ್ನಡ ಭಾಷೆಯು ನೆಲೆಸಿರುವುದಕ್ಕೆ ಪುರಾವೆಗಳಾಗಿವೆ ಎಂದರು.
ಕನ್ನಡ ನಾಡು, ನುಡಿ, ಜಲ ಹಾಗೂ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಾಧಕರನ್ನು ಸರ್ಕಾರ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು ಅಂತಹ ಕಾರ್ಯವನ್ನು ಹೊಸಮನಿ ಪ್ರಕಾಶನವು ಮಾಡಿಕೊಂಡು ಬರುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.ಅಖಿಲ ಕರ್ನಾಟಕ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಎಲ್.ಗೋಪಿ ಹಾಗೂ ಶಿಕ್ಷಕಿ ಷಂಷಾದಬೇಗಂ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಚಾಮರಸ ಮಾಲಿಪಾಟೀಲ್, ವೀರೇಂದ್ರ ಕುರ್ಡಿ, ಅಣ್ಣಪ್ಪ ಮೇಟಿಗೌಡ, ಎಚ್.ಪದ್ಮಾವತಿ, ಅಯ್ಯಪ್ಪಯ್ಯ ಹುಡಾ, ಸೈಯದ್ ಗೌಸ್‌ಮೋಹಿಯುದ್ದೀನ್ ಪೀರ್ಜಾದೆ, ಈರಣ್ಣ ಕೋಸಗಿ, ರಾಮಲಿಂಗಪ್ಪ ಕುಣ್ಸಿ, ಶಂಬುಜಿ, ರಘುನಾಥರೆಡ್ಡಿ, ಎಂ.ಆರ್.ಭೇರಿ, ವೇಣು, ಮೆಹಬೂಬ್ ಪಾಷಾ, ಸೋನಮ್ಮ ದುರ್ಗಪ್ಪ ಅವರಿಗೆ ನೃಪತುಂಗ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಇಷ್ಟೇ ಅಲ್ಲದೇ ದತ್ತಾತ್ರೇಯ ಬಿಚ್ಚಾಲ್, ಮಾರೆಪ್ಪ, ಗುರುಲಿಂಗಪ್ಪ ದೇವರಮನಿ ಹಾಗೂ ಶಾಂತಕುಮಾರ ಟೇಲರ್ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.ಈ ವೇಳೆ ಹೊಸಮನಿ ಪ್ರಕಾಶನದ ಅಧ್ಯಕ್ಷ ಬಶೀರ ಅಹ್ಮದ ಹೊಸಮನಿ, ಉಪಾಧ್ಯಕ್ಷೆ ಪರ್ವಿನಬೇಗಂ, ಪ್ರಧಾನ ಕಾರ್ಯದರ್ಶಿ ಶಿಫಾ ಹೊಸಮನಿ, ಕೋಶಾಧ್ಯಕ್ಷೆ ಖುಷಿ ಬ.ಹೊಸಮನಿ, ಶಿವಮ್ಮ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು, ಕನ್ನಡಾಭಿಮಾನಿಗಳು ಮತ್ತಿತರರು ಇದ್ದರು.