ಕನ್ನಡಪ್ರಭ ವಾರ್ತೆ ಕೋಲಾರಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಸರ್ಕಾರಿ ಶಾಲೆಗಳನ್ನು ಬಲಿಷ್ಟಗೊಳಿಸುವ ಕಾರ್ಯಕ್ಕೆ ಸರ್ಕಾರ ಮತ್ತು ದಾನಿಗಳು ಮುಂದಾಗಬೇಕು ಎಂದು ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ತಿಳಿಸಿದರು.ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅತ್ಯುತ್ತಮ ಕನ್ನಡ ಬರವಣಿಗೆ, ವ್ಯಾಕರಣದಲ್ಲಿ ಸಾಧನೆ ಮಾಡಿದ ಚಿಣ್ಣರಿಗೆ ನಗದು ಬಹುಮಾನ ನೀಡಿ ಮಾತನಾಡಿದರು.ಕಾನ್ವೆಂಟ್ ವ್ಯಾಮೋಹ ಬಿಡಿ
ಕಾನ್ವೆಂಟ್ ವ್ಯಾಮೋಹ, ಪರಭಾಷೆ ಬಳಸುವ ಪ್ರೀತಿ ಮತ್ತುತೋರ್ಪಡಿಕೆ ಪ್ರದರ್ಶನದಿಂದಾಗಿ ಇಂದು ಕನ್ನಡ ಮಾತನಾಡುವವರು, ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಕನ್ನಡ ಭಾಷೆ ಜೀವಂತಿಕೆಯಾಗಿ ಪ್ರತಿಯೊಬ್ಬರ ಮನೆಮಾತಾಗಿರುವುದು ಗ್ರಾಮೀಣ ಭಾಗದಲ್ಲಿ ಮಾತ್ರ. ಕನ್ನಡ ಶಾಲೆಗಳು ನಶಿಸಿಹೋದರೆ ಕನ್ನಡಕ್ಕೆ ಖಂಡಿತಾ ಕುತ್ತು ಬರುತ್ತದೆ ಎಂದು ಎಚ್ಚರಿಸಿದ ಅವರು, ಈ ಶಾಲೆಗಳನ್ನು ಉಳಿಸುವುದು ಇಂದು ಸವಾಲಿನ ಕೆಲಸವಾಗಿದೆ ಎಂದರು.ಕನ್ನಡದಲ್ಲಿ ಅಮ್ಮನ ಪ್ರೀತಿ ಇದೆ, ತಂದೆಯ ಆರೈಕೆ ಇದೆ, ಸ್ನೇಹಿತರ ಒಡನಾಟವಿದೆ, ಇಂತಹ ಶ್ರೀಮಂತ ಭಾಷೆ ಸೊರಗಲು ಬಿಡಬಾರದು ಎಂದು ಕಿವಿಮಾತು ಹೇಳಿದ ಅವರು, ಕನ್ನಡ ಮಾಧ್ಯಮ, ಗ್ರಾಮೀಣ ಮೀಸಲಾತಿ ಸೌಲಭ್ಯ ಪಡೆಯಲು ಗ್ರಾಮೀಣ ಶಾಲೆಗಳಲ್ಲಿ ಓದುವುದು ಅಗತ್ಯವಿದೆ, ಪೋಷಕರು ಈ ಕುರಿತು ಗಮನಹರಿಸಿ ಮಕ್ಕಳನ್ನು ದಾಖಲಿಸಿ ಎಂದರು.
ದಿನಪತ್ರಿಕೆ ಓದಬೇಕು:ವಿದ್ಯಾರ್ಥಿಗಳು ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಿ, ಪತ್ರಿಕೆಯಲ್ಲಿ ಕ್ರೈ, ಸಿನಿಮಾ ಪುಟ ಬಿಟ್ಟ ಉಳಿದೆಲ್ಲಾ ಓದಿ ಎಂದ ಅವರು, ಈ ನಿಟ್ಟಿನಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಸೇರಿದಂತೆ ಕೆಲವು ಶಾಲೆಗಳಲ್ಲಿನ ೧೦ನೇ ತರಗತಿ ಮಕ್ಕಳಿಗೆ ತಾವೇ ಹಣ ಕೊಟ್ಟು ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಒದಗಿಸಲು ಕ್ರಮವಹಿಸಿರುವುದಾಗಿ ತಿಳಿಸಿದರು.
ರೋಟರಿ ಕೋಲಾರ್ ಸೆಂಟ್ರಲ್ ಅಧ್ಯಕ್ಷ ಸುಧಾಕರ್, ಜಿಲ್ಲಾ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ಶಾಲೆಯ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್, ರೋಟರಿ ಮಾಜಿ ಅಧ್ಯಕ್ಷ ಕೆ.ಎನ್.ಎನ್ ಪ್ರಕಾಶ್ , ಕೆ.ಎಚ್.ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷ ವೆಂಕಟೇಶಪ್ಪ, ನಿಕಟಪೂರ್ವ ಅಧ್ಯಕ್ಷ ಎ.ಮಹೇಂದ್ರ, ಶಿಕ್ಷಕರಾದ ಸಿದ್ದೇಶ್ವರಿ, ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಸುಗುಣಾ, ಶ್ವೇತಾ, ರಮಾದೇವಿ, ಶ್ರೀನಿವಾಸಲು ಇದ್ದರು.