ಪಂಜಾಬಿಗರಿಗೆ ವಿಜಯಪುರ ಶಿಕ್ಷಕನಿಂದ ಕನ್ನಡ ಪಾಠ!

KannadaprabhaNewsNetwork |  
Published : Nov 10, 2025, 01:30 AM IST
Kannada

ಸಾರಾಂಶ

ಇವರು ಕನ್ನಡದವರು, ಆದರೆ, ಪಂಜಾಬ್‌ನಲ್ಲಿ ಅಲ್ಲಿಯ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುತ್ತಿದ್ದಾರೆ. ಇಂಡಿ ತಾಲೂಕಿನ ಶಿರಶ್ಯಾಡ ಗ್ರಾಮದ ಪಂಡಿತರಾವ್ ಧರೆಣ್ಣವರ ಪಂಜಾಬಿ ನೆಲದಲ್ಲಿ ಮಾಡಿದ ಕನ್ನಡ ಸಾಧನೆ ಕೇಳಿದರೆ ಹೆಮ್ಮೆ ಪಡುತ್ತೀರಿ.

ಶಶಿಕಾಂತ ಮೆಂಡೆಗಾರ

 ವಿಜಯಪುರ :  ಇವರು ಕನ್ನಡದವರು, ಆದರೆ, ಪಂಜಾಬ್‌ನಲ್ಲಿ ಅಲ್ಲಿಯ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುತ್ತಿದ್ದಾರೆ. ಇಂಡಿ ತಾಲೂಕಿನ ಶಿರಶ್ಯಾಡ ಗ್ರಾಮದ ಪಂಡಿತರಾವ್ ಧರೆಣ್ಣವರ ಪಂಜಾಬಿ ನೆಲದಲ್ಲಿ ಮಾಡಿದ ಕನ್ನಡ ಸಾಧನೆ ಕೇಳಿದರೆ ಹೆಮ್ಮೆ ಪಡುತ್ತೀರಿ.

ಹವ್ಯಾಸಕ್ಕಾಗಿ ಪಂಜಾಬಿ ಭಾಷೆ ಕಲಿತ ಇವರು ಪ್ರಸ್ತುತ ಚಂಡೀಗಢದ ಸೆಕ್ಟರ್ 46ರಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿ 2003ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಕರ್ನಾಟಕಕ್ಕೆ ವಲಸೆ ಬಂದ ಪಂಜಾಬಿ ಬಡ ಕುಟುಂಬಗಳಲ್ಲಿನ ಮಕ್ಕಳಿಗೆ ಉಚಿತವಾಗಿ ಕನ್ನಡ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಕನ್ನಡದ ವಚನಕಾರರು, ದಾಸರು, ಸರ್ವಜ್ಞರ ಕುರಿತು ಪುಸ್ತಕಗಳನ್ನು ಪಂಜಾಬಿ ಭಾಷೆಯಲ್ಲಿ ಬರೆದು, ಪಂಜಾಬಿ ನೆಲದಲ್ಲೂ ಕನ್ನಡದ ಕಂಪು ಬೀರಿದ್ದಾರೆ.

ಪಂಜಾಬಿನಲ್ಲೂ ಕನ್ನಡ ಕಸ್ತೂರಿ:

ಇವರು ಪಂಜಾಬಿನಲ್ಲಿ ಮಕ್ಕಳಿಗೆ ಪಂಜಾಬಿ ಪಾಠದ ಜೊತೆಗೆ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಕನ್ನಡದ ವಚನ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದಾರೆ. ಕನ್ನಡದಲ್ಲಿರುವ ಬಸವಣ್ಣ, ಅಲ್ಲಮ ಪ್ರಭುಗಳ, ಅಕ್ಕಮಾಹಾದೇವಿ ಅವರ ವಚನಗಳನ್ನು ಪಂಜಾಬಿ ಭಾಷೆಗೆ ತರ್ಜುಮೆ ಮಾಡಿದ್ದಾರೆ. ಅಲ್ಲದೆ ಕನಕದಾಸರ ಕೀರ್ತನೆಗಳನ್ನು ಪಂಜಾಬಿಗೆ ಅನುವಾದಿಸಿದ್ದಾರೆ. ಈ ಮೂಲಕ ವಚನ ಸಾಹಿತ್ಯವನ್ನು ಪಂಜಾಬಿಗಳಿಗೆ ತಿಳಿಸಿ ಭಾವೈಕ್ಯತೆಯನ್ನು ಸಾರುತ್ತಿದ್ದಾರೆ.

ಹುಟ್ಟೂರಲ್ಲೂ ಪಂಜಾಬಿಗಳಿಗೆ ಕನ್ನಡ ಪಾಠ

ಮೊದಲಿಗೆ ಪರಿಸರ ಜಾಗೃತಿ ಮೂಡಿಸುತ್ತಿದ್ದ ಇವರು 2015ರಲ್ಲಿ ತಂಬಾಕು ಮುಕ್ತ ಅಭಿಯಾನಕ್ಕಾಗಿ ಪ್ರಚಾರ ಮಾಡುತ್ತಿದ್ದ ವೇಳೆ ಪಂಜಾಬಿಗರು ನೆಲೆಸಿದ್ದ ಕಾಲೋನಿಗೆ ಹೋದಾಗ ಅವರನ್ನು ನೋಡಿ ಅವರಿಗೆ ಬರೆಯಲು, ಓದುವುದು, ಮಾತನಾಡಲು ಕನ್ನಡ ಕಲಿಸಲು ಮುಂದಾದರು. ಅಂದಿನಿಂದ ತಮ್ಮ ಕಾಲೇಜಿಗೆ ರಜೆ ಇದ್ದಾಗಲೆಲ್ಲ ವಿಜಯಪುರಕ್ಕೆ ಬರುವ ಇವರು ರಜೆಯಲ್ಲಿ ವಿಶ್ರಾಂತಿ ಪಡೆಯದೆ ಇಲ್ಲಿರುವ ಪಂಜಾಬಿ ಮಕ್ಕಳಿಗೆ ಕನ್ನಡ ಕಲಿಸುತ್ತಾರೆ. 2018ರಿಂದ ಶುರುವಾಗಿರುವ ಕನ್ನಡದ ಕಂಪು ಬೀರುವ ಕೆಲಸ ಇಂದಿಗೂ ಮುಂದುವರೆದಿದೆ. ಪಂಜಾಬಿಯ ಸಿಖ್ ಜನರ ಆರಾಧ್ಯ ದೈವವಾಗಿರುವ ಗುರುನಾನಕ ದೇವಜಿ ಅವರ ಮೊದಲನೇ ರಚನಾ ಭಾಗವಾದ ಜಪ್ಜಿಸಾಹೇಬ ಇದನ್ನು ಕನ್ನಡದಲ್ಲಿ ಹೇಳಿಕೊಟ್ಟಿದ್ದಾರೆ. ಪ್ರತಿವರ್ಷ ಸುಮಾರು 20 ರಿಂದ 30 ಮಕ್ಕಳು, ಅವರ ಪೋಷಕರು ಹಾಗೂ ಹಿರಿಯರಿಗೆ ಕನ್ನಡ ಕಲಿಸುತ್ತಾರೆ.

ಪಂಜಾಬಿಯ ಸಿಖ್‌ ಅಲೆಮಾರಿ ಜನಾಂಗದ 40ಕ್ಕೂ ಅಧಿಕ ಕುಟುಂಬಗಳು ಹೊಟ್ಟೆಪಾಡಿಗಾಗಿ ಅಡುಗೆ ಪಾತ್ರೆಗಳ ತಯಾರಿಕೆ ಹಾಗೂ ಮಾರಾಟ ಮಾಡುತ್ತಾರೆ. ಹಲವು ವರ್ಷಗಳಿಂದ ಇಲ್ಲಿಯೇ ನೆಲೆಸಿರುವ ಆ ಕುಟುಂಬಗಳ ಮಕ್ಕಳಿಗೆ ಇವರೇ ಕನ್ನಡ ಹಾಗೂ ಪಂಜಾಬಿ ಭಾಷೆಯಲ್ಲಿ ಶಿಕ್ಷಣ ಕೊಡುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕನ್ನಡ ಹಾಗೂ ಪಂಜಾಬಿ ಭಾಷೆಯಲ್ಲಿ ಅಕ್ಷರ ಜ್ಞಾನ, ವಾಕ್ಯಗಳ ರಚನೆ, ಧಾರ್ಮಿಕ ಗ್ರಂಥಗಳ ಓದುವ ಜ್ಞಾನ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಯಾವ ರೀತಿ ಓದಬೇಕು, ಬರೆಯಬೇಕು ಎಂಬುದನ್ನು ಪಂಡಿತರಾವ್ ಧರೆಣ್ಣವರ ಕಲಿಸುತ್ತಿದ್ದಾರೆ.

ನಾನು ರಜೆಗೆ ಊರಿಗೆ ಬಂದಾಗೆಲ್ಲ ಪ್ರತಿನಿತ್ಯ 4ರಿಂದ 5 ಗಂಟೆಗಳವರೆಗೆ ಮಕ್ಕಳಿಗೆ ಹಾಗೂ ಪಾಲಕರಿಗೆ ಕನ್ನಡ ಮತ್ತು ಪಂಜಾಬಿ ಭಾಷೆಗಳನ್ನು ಕಲಿಸುತ್ತೇನೆ. ಇಂತಹ ವಲಸಿಗರ ಕುರಿತು ಸಂಶೋಧನೆ ಮಾಡಬೇಕು ಎಂದು ಬೀದರ್‌ ವಿವಿಗೆ ಪತ್ರ ಬರೆದಿದ್ದೇನೆ.

- ಪಂಡಿತರಾವ್ ಧರೆಣ್ಣವರ, ಕನ್ನಡ ಕಲಿಸುತ್ತಿರುವವರು.

ಪಂಡಿತರಾವ್ ಧರೆಣ್ಣವರ ಅವರ ಈ ಕಾರ್ಯ ನಮ್ಮ ಸಿಖ್ ಸಮುದಾಯಕ್ಕೆ ಸಂತಸ ತಂದಿದೆ. ಕನ್ನಡ ಹಾಗೂ ಪಂಜಾಬಿ ಓದಲು, ಬರೆಯಲು ಗೊತ್ತಿಲ್ಲದ ಇಲ್ಲಿನ ಸಿಖ್‌ರಿಗೆ ಇವರು ಭಾಷಾಜ್ಞಾನ ನೀಡುತ್ತಿದ್ದಾರೆ. ಅನಕ್ಷರಸ್ಥರಾದ ನಮಗೆ ಅಕ್ಷರಸ್ಥರನ್ನಾಗಿಸಿರುವುದು ಮಾತ್ರವಲ್ಲದೆ, ಕನ್ನಡವನ್ನು ನಿರರ್ಗಳವಾಗಿ ಬರೆಯಲು, ಓದಲು ಬರುವಂತೆ ಮಾಡಿದ್ದಾರೆ.

- ಶೇಖರಸಿಂಗ್, ಇಂಡಿಯಲ್ಲಿ ನೆಲೆಸಿರುವ ಪಂಜಾಬಿ.

PREV
Read more Articles on

Recommended Stories

ರಾಜ್ಯದ ಎಲ್ಲ ಹನುಮಂತ ದೇವಸ್ಥಾನಗಳಲ್ಲಿ ಹನುಮಾನ ಚಾಲೀಸಾ ಪಠಣ: ದತ್ತಾವಧೂತ ಗುರು
ಪತ್ರಕರ್ತರ ಸಂಘದ ಚುನಾವಣೆ: 25 ಸ್ಥಾನಗಳಿಗೆ ಆಯ್ಕೆ