ಅಜೀಜಅಹ್ಮದ ಬಳಗಾನೂರ
ಕೈ ಮುಗಿದು ಏರು ಇದು ಕನ್ನಡದ ತೇರು...!
ಈ ಬಸ್ ನೋಡಿದ ಪ್ರತಿಯೊಬ್ಬರ ಬಾಯಲ್ಲಿ ಬರುವ ಮಾತಿದು. ಹುಬ್ಬಳ್ಳಿಯ ಗ್ರಾಮಾಂತರ ಘಟಕ-1ರ ಚಾಲಕ ಹಾಗೂ ನಿರ್ವಾಹಕರ ತಂಡವೊಂದು ಬಸ್ ಅನ್ನು ಕನ್ನಡದ ತೇರಿನಂತೆ ಅಲಂಕರಿಸಿ ಬುಧವಾರ ನಗರದಾದ್ಯಂತ ಸಂಚರಿಸಿ ಕನ್ನಡದ ಜಾಗೃತಿ ಮೂಡಿಸಿರುವುದು ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.ಘಟಕದ ಚಾಲಕ ನಾಗರಾಜ ಭೂಮಣ್ಣವರ, ನಿರ್ವಾಹಕ ಮಂಜುನಾಥ ಮಡಿವಾಳರ ನೇತೃತ್ವದ ಐವರು ಚಾಲಕ ಹಾಗೂ ನಿರ್ವಾಹಕರ ತಂಡ ಸೇರಿಕೊಂಡು ಕಳೆದ 5 ವರ್ಷಗಳಿಂದ ಕನ್ನಡ ರಾಜ್ಯೋತ್ಸವದ ದಿನದಂದು ಕನ್ನಡಾಂಬೆಯ ತೇರನ್ನು ತಯಾರಿಸುತ್ತಾ ಬಂದಿದೆ.
ಕನ್ನಡದ ತೇರು (ಬಸ್)ನ್ನು ಹಳದಿ-ಕೆಂಪು ಬಣ್ಣ ಹೊಂದಿದ ಬಾವುಟಗಳು ಹಾಗೂ ಬಲೂನ್‌ಗಳಿಂದ ಶೃಂಗರಿಸಲಾಗಿತ್ತು. ಅಲ್ಲದೇ ಕವಿಗಳು, ಸಾಹಿತಿಗಳು, ಇತಿಹಾಸಕಾರರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸ್ವತಂತ್ರ್ಯ ಹೋರಾಟಗಾರರು, ಕನ್ನಡಕ್ಕಾಗಿ ಶ್ರಮಿಸಿದ ಹಲವು ಮಹನಿಯರ ಭಾವಚಿತ್ರದೊಂದಿಗೆ ಅವರ ಸಮಗ್ರ ಮಾಹಿತಿ ಹೊಂದಿದ ಪ್ರತಿ, ರಾಜ್ಯದಲ್ಲಿರುವ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಹಾಗೂ ಅದರ ಮಾಹಿತಿಯ ಫಲಕಗಳನ್ನು ಅಳವಡಿಸಲಾಗಿದೆ.
₹80 ಸಾವಿರ ಖರ್ಚು:
ಬಾಕ್ಸ್...
ನಗರದ ಗೋಕುಲ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆಯ ಘಟಕದಿಂದ ಆರಂಭವಾದ ಕನ್ನಡ ತೇರಿನ ಸಂಚಾರವು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ, ಸಾಯಿಬಾಬಾ ದೇವಸ್ಥಾನ, ರಾಣಿ ಚೆನ್ನಮ್ಮ ವೃತ್ತ, ಹೊಸೂರು ಬಸ್ ನಿಲ್ದಾಣ, ಸಿದ್ಧಾರೂಢರ ಮಠದ ವರೆಗೆ ತೆರಳಿ ಪ್ರತಿಯೊಂದು ಸ್ಥಳದಲ್ಲಿ ಗಂಟೆಗೂ ಹೆಚ್ಚುಕಾಲ ನಿಲ್ಲಿಸಿ ಜನರಿಗೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಯಿತು.
ಕನ್ನಡಾಂಬೆಯ ಕುರಿತು ಪ್ರತಿವರ್ಷ ಏನಾದರೂ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬ ಯೋಚನೆ ಬಂದಿತು.ಸಹೋದ್ಯೋಗಿಗಳೆಲ್ಲ ಸೇರಿ ಈ ಕನ್ನಡ ತೇರು ನಿರ್ಮಾಣ ಮಾಡಿದೆವು. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ.