ಕನ್ನಡ ತೇರು ಎಳೆಯಲು ಕನ್ನಡ ಮಾಧ್ಯಮ ಶಾಲೆಗಳು ನಿರ್ಮಾಣವಾಗಬೇಕು: ಡಾ.ಮೋಹನ್ ಆಳ್ವ

KannadaprabhaNewsNetwork | Published : Mar 30, 2024 12:51 AM

ಸಾರಾಂಶ

ಕನ್ನಡ ಭಾಷೆ ಇಲ್ಲದೇ ಹೋದರೆ ಯಾವುದೇ ಸಾಹಿತ್ಯ, ಸಂಸ್ಕೃತಿ, ಕಲಾ ಪ್ರಕಾರ ಗಟ್ಟಿಯಾಗಿ ಉಳಿಯುವುದಿಲ್ಲ ಎಂದು ಮೂಡಬಿದರೆ ಆಳ್ವಾಸ್ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ.ಮೋಹನ್ ಆಳ್ವ ಹೇಳಿದರು.

19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ । ನೋಡುಗರ ಕಣ್ಮನ ಸೆಳೆದ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಕನ್ನಡ ಭಾಷೆ ಇಲ್ಲದೇ ಹೋದರೆ ಯಾವುದೇ ಸಾಹಿತ್ಯ, ಸಂಸ್ಕೃತಿ, ಕಲಾ ಪ್ರಕಾರ ಗಟ್ಟಿಯಾಗಿ ಉಳಿಯುವುದಿಲ್ಲ ಎಂದು ಮೂಡಬಿದರೆ ಆಳ್ವಾಸ್ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ.ಮೋಹನ್ ಆಳ್ವ ಹೇಳಿದರು. ಶುಕ್ರವಾರ ಪಟ್ಟಣದ ಅಡ್ಯಂತಾಯ ರಂಗಮಂದಿರದ ಕವಿ ಲಕ್ಷ್ಮೀಶ ವೇದಿಕೆಯಲ್ಲಿ ಏರ್ಪಡಿಸಿದ್ದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತಿಹಾಸ ನೋಡಿದರೆ ಹಳೆಗನ್ನಡದಿಂದ ಹೊಸಗನ್ನಡವರೆಗೆ ಭಾಷೆ, ಸಾಹಿತ್ಯ ಎಲ್ಲವೂ ಬದಲಾವಣೆಗೊಳ್ಳುತ್ತಾ ನಡೆದುಕೊಂಡು ಬಂದಿದೆ. ಅಲ್ಲದೇ ನವೋದಯ, ಪ್ರಗತಿಶೀಲ, ನವ್ಯ ಬಂಡಾಯ ಸಾಹಿತ್ಯಗಳ ನಂತರ ಸಮ್ಮೇಳನಗಳು ಪ್ರಾರಂಭವಾಯಿತು. ಕನ್ನಡ ಮಾಧ್ಯಮ ಶಾಲೆ ಕೂಡ ಬೇಕಾದಷ್ಟು ನಮ್ಮ ನಾಡಿನಲ್ಲಿ ಕಟ್ಟಿದರು. ಆದರೆ, ಕಾಲ ಬದಲಾದಂತೆ ಕನ್ನಡ ಮಾಧ್ಯಮ ಶಾಲೆಗಳು ನಶಿಸಿಹೋಗುತ್ತಿದೆ. ಒಂದು ಶಾಲೆಗೆ ಓರ್ವ ಕನ್ನಡ ಶಿಕ್ಷಕಿ ಸಿಗುವುದೇ ಕಷ್ಟವಾಗಿದೆ. ಇಂಗ್ಲೀಷ್ ಭಾಷೆ ಅನೇಕ ದೇಶಗಳ ಮೇಲೆ ಸವಾರಿ ಮಾಡಿದೆ. ಆದರೆ, ಅನೇಕ ಹೊರ ದೇಶದಲ್ಲಿ ಉನ್ನತ ಶಿಕ್ಷಣ ಆ ದೇಶದ ಮೂಲ ಭಾಷೆಯಲ್ಲಿಯೇ ನಡೆಯುತ್ತಿದೆ. ಇದು ನಮ್ಮ ದೇಶದಲ್ಲೂ ಆಗಬೇಕು ಎಂದರು.

ರಾಜ್ಯದಲ್ಲಿರುವ ಎಲ್ಲಾ ಪ್ರಾದೇಶಿಕ ಭಾಷೆ ಸೋಲಬಾರದು. ಈಗಾಗಲೇ ಕನ್ನಡ ಭಾಷೆ ಮುಂದೆ ಕೊಂಡೊಯ್ಯುವಲ್ಲಿ ಆಳುವ ಸರಕಾರಗಳು ವಿಫಲವಾಗಿವೆ. ಇನ್ನಾದರೂ ಖಾಸಗಿ ಶಾಲೆಗೆ ಮೀರಿಸುವಂತಹ ಕನ್ನಡ ಮಾಧ್ಯಮ ಶಾಲೆ ಕಟ್ಟಬೇಕು. ಆಗ ಮಾತ್ರ ಮುಂದಿನ ಪೀಳಿಗೆ ಕನ್ನಡ ಭಾಷೆಯ ತೇರನ್ನು ಎಳೆಯಲು ಸಾಧ್ಯ ಎಂದು ಹೇಳಿದರು. ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಅವರು ಹೇಮಾಂತರಂಗ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಬೇರೆ ಜಿಲ್ಲೆಯಲ್ಲಿ ಕಾಣದಂತಹ ವೈಶಿಷ್ಟ್ಯತೆ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಇಲ್ಲಿ ಶೃಂಗೇರಿ ಶ್ರೀ ಶಾರದೆ, ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ, ಬಾಬಾ ಬುಡನ್‌ಗಿರಿ, ದತ್ತಪೀಠ, ಜೈನರ ಕ್ಷೇತ್ರ ಸೇರಿದಂತೆ ಪೌರಾಣಿಕ, ಐತಿಹಾಸಿಕವಾಗಿ ಹೆಸರುವಾಸಿಯಾಗಿದೆ. ಅಲ್ಲದೇ ಋಷಿಗಳಿಗೆ ಆಶ್ರಯ ನೀಡಿದ ತಾಣವಾಗಿದೆ. ಇಂತಹ ಪುಣ್ಯ ಭೂಮಿ ಯಲ್ಲಿ ತನ್ನ ಅವಧಿಯಲ್ಲಿ ಅಖಿಲ ಭಾರತ ಸಮ್ಮೇಳನ ನಡೆಸಲಾಗುವುದು ಎಂದು ಹೇಳಿದರು. ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಕನ್ನಡ ಅರಿವು ಹಾಗೂ ಆತ್ಮಾಭಿಮಾನದ ಭಾಷೆಯಾಗಬೇಕು. ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಪಾಪ ಮಾಡಿದ ಹಾಗೆ. ಇಲ್ಲಿನ ಕನ್ನಡಿಗರು ಹೊರ ದೇಶದಲ್ಲಿ ಕನ್ನಡ ಕೂಟಗಳನ್ನು ಕಟ್ಟಿದ್ದಾರೆ. ಆದರೆ ಇಲ್ಲಿ ಸಾಧ್ಯವಾಗದಿರುವುದು ದುರಂತ. ಕನ್ನಡ ಭಾಷೆ ಉಳಿಸುವ ಇಚ್ಛಾಶಕ್ತಿ ಕನ್ನಡಿಗರಲ್ಲಿ ಮೂಡಬೇಕೆಂದು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್ ಅವರನ್ನು ದಿವ್ಯರಥದಲ್ಲಿ ಕುಳ್ಳಿರಿಸಿ, ವಿವಿಧ ವಾಧ್ಯ ಮತ್ತು ಕಲಾತಂಡಗಳು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷ ಹಳೆಕೋಟೆ ರಮೇಶ್ ವಹಿಸಿದ್ದರು, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಎಚ್.ಎಂ.ಶಾಂತಕುಮಾರ್, ಸಾಹಿತಿ ಡಾ.ಬೆಳವಾಡಿ ಮಂಜುನಾಥ್, ಕಾರ್ಯಾಧ್ಯಕ್ಷ ಬಿ.ಎಸ್.ಜಯರಾಂ, ಕೋಶಾಧ್ಯಕ್ಷ ಜೆ.ಎಸ್.ರಘು, ಸಂಸ್ಕೃತಿ ಚಿಂತಕ ಮಂಚೇಗೌಡ, ಪ್ರಧಾನ ಸಂಚಾಲಕ ಗಣೇಶ್ ಮಗ್ಗಲಮಕ್ಕಿ ಸೇರಿದಂತೆ ವಿವಿಧ ತಾಲೂಕಿನ ಕಸಾಪ ಅಧ್ಯಕ್ಷರು ಉಪಸ್ಥಿತರಿದ್ದರು.

29 ಕೆಸಿಕೆಎಂ 3

ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದ ಕವಿ ಲಕ್ಷ್ಮೀಶ ವೇದಿಕೆಯಲ್ಲಿ ಏರ್ಪಡಿಸಿದ್ದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಮೂಡಬಿದರೆ ಆಳ್ವಾಸ್ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ.ಮೋಹನ್ ಆಳ್ವ ಉದ್ಘಾಟಿಸಿದರು.

29 ಕೆಸಿಕೆಎಂ 4ಮೂಡಿಗೆರೆಯಲ್ಲಿ ಏರ್ಪಡಿಸಿದ್ದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ತಂಡ ಹಾಗೂ ವಾಧ್ಯಗಳೊಂದಿಗೆ ಮೆರವಣಿಗೆ ನಡೆಯಿತು.

Share this article