ನಗರದ ಬಸವತತ್ವ ಪೀಠದಲ್ಲಿ 6ನೇ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಹೊಸ ತಲೆಮಾರನ್ನು ಮಾತೃಭಾಷೆಯಿಂದ ದೂರ ಮಾಡಲಾಗುತ್ತಿದೆ. ಇದರ ಪರಿಣಾಮ ಯುವಕರು ಮಾತೃ ಭಾಷೆ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಹಿತ್ಯ ಬರೆಯುವುದಿರಲಿ, ಸಾಹಿತ್ಯ ಓದುವುದರಿಂದಲೂ ಯುವಕರು ದೂರವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಶ್ರೇಷ್ಠ ಸಾಹಿತ್ಯ ಕೃತಿಗಳು ಬರುತ್ತಿರುವುದು ಸ್ಥಳೀಯ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಮರಾಠಿ ಭಾಷೆಗಳಲ್ಲಿ ಮಾತ್ರ. ಇಂಗ್ಲಿಷ್‌ನಲ್ಲಿ ಉತ್ತಮ ಸಾಹಿತ್ಯ ಸೃಷ್ಟಿಯಾಗುತ್ತಿಲ್ಲ. ಇಂಗ್ಲಿಷ್ ನಮ್ಮ ಸಾಮಾಜಿಕ ಭಾಷೆಯಲ್ಲ; ಅದು ಮುಖ್ಯವಾಗಿ ವ್ಯವಹಾರಿಕ ಭಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು.ಕನ್ನಡದ ಉಳಿವಿಗೆ ಪಕ್ಷಾತೀತ ಹೋರಾಟ ಅಗತ್ಯ:
ಕನ್ನಡ ಭಾಷೆ ಮಾತ್ರ ಅಪಾಯದಲ್ಲಿದೆ ಎಂದು ಭಾವಿಸಬಾರದು. ದೇಶದ ಅನೇಕ ಸ್ಥಳೀಯ ಭಾಷೆಗಳೂ ಇದೇ ರೀತಿಯ ಅಪಾಯವನ್ನು ಎದುರಿಸುತ್ತಿವೆ. ಮಾತೃಭಾಷೆಯ ಬಳಕೆಯನ್ನು ಹೆಚ್ಚಿಸುವ ಮೂಲಕ ಭಾಷೆಗಳ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಜ್ಞಾಪೂರ್ವಕವಾಗಿ ಕನ್ನಡ ಬಳಸುವ ಬದ್ಧತೆ ತೋರಬೇಕು: ಬಸವ ಮರುಳ ಸಿದ್ಧ ಶ್ರೀಪ್ರಜ್ಞಾಪೂರ್ವಕವಾಗಿ ಭಾಷೆ ಬಳಸದೆ ಹೋದರೆ ಯಾವುದೇ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಬಸವ ಮರುಳ ಸಿದ್ದ ಸ್ವಾಮೀಜಿ ಎಚ್ಚರಿಸಿದರು.ಸಮ್ಮೇಳನದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮೊದಲು ಅಡುಗೆ ಮನೆಯಿಂದಲೇ ಕನ್ನಡ ಭಾಷೆ ಉಳಿಸಿಕೊಳ್ಳುವ ಕೆಲಸ ಆರಂಭವಾಗಬೇಕು. ಆಗ ಮಾತ್ರ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಉಳಿಯ ಲಿದೆ. ನಂತರ ಉನ್ನತ ಶಿಕ್ಷಣದಲ್ಲೂ ಕನ್ನಡ ಉಳಿಯಲಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ ಕನ್ನಡ ಬಳಕೆಗೆ ಅವಕಾಶ ದೊರೆಯಲಿದೆ. ಕನ್ನಡದಿಂದಲೇ ಅನ್ನ ಹುಟ್ಟುವಂತಾಗಬೇಕು ಎಂದರು.ಮನೆಗಳಲ್ಲಿ ಕನ್ನಡದ ಪದಗಳಿದ್ದರೂ ಅವುಗಳನ್ನು ಬಿಟ್ಟು ಇಂಗ್ಲಿಷ್ ಪದಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅರಿವಿಗೆ ಬಾರದಂತೆ ನಿಧಾನವಾಗಿ ವಿಷ ನೀಡುವ ಮೂಲಕ ಭಾಷೆಯನ್ನು ಕೊಲೆ ಮಾಡಲಾಗುತ್ತಿದೆ. ಕನ್ನಡಿಗರಲ್ಲಿ ಭಾಷೆಯ ಬಗ್ಗೆ ಮೂಡಿರುವ ನಿಧಾನಗತಿಯ ನಿರಭಿಮಾನವೇ ಇದಕ್ಕೆ ಪ್ರಮುಖ ಕಾರಣ ವಾಗಿದೆ ಎಂದು ಹೇಳಿದರು.
ಇಂಗ್ಲೀಷ್ ಗಿಂತ ಹಿಂದಿ ಹೇರಿಕೆ ಕನ್ನಡಕ್ಕೆ ಅತ್ಯಂತ ಅಪಾಯಕಾರಿ. ಕನ್ನಡ ಪ್ರಾಥಮಿಕ ಶಾಲಾ ಹಂತದಲ್ಲಿ ಮಹತ್ವ ಕಳೆದುಕೊಳ್ಳುತ್ತಿದೆ. ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಿಸಲು ಕಾನೂನಿನ ತೊಡಕಿದೆ. ಸಂಧಾನಕ್ಕೆ ತಿದ್ದುಪಡಿ ತಂದು ಈ ಸಮಸ್ಯೆ ಬಗೆ ಹರಿಸಲು ಸಾಧ್ಯವಿದೆ. ಆದರೆ, ಅದಕ್ಕೆ ಆಳುವವರ ಇಚ್ಛಾಶಕ್ತಿ ಬೇಕಿದೆ.- ಬಿ.ತಿಪ್ಪೇರುದ್ರಪ್ಪ, ಸಮ್ಮೇಳನಾಧ್ಯಕ್ಷ, ಚಿಕ್ಕಮಗಳೂರು 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ.