ಕನ್ನಡಪ್ರಭ ಪರಿಸರ ಕಾಯಕ ಮಾಧ್ಯಮಗಳಿಗೆ ಮಾದರಿ

KannadaprabhaNewsNetwork |  
Published : Dec 05, 2025, 01:30 AM IST

ಸಾರಾಂಶ

ಹಾರೋಹಳ್ಳಿ: ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಾಲುಮರದ ತಿಮ್ಮಕ್ಕ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ವಿಷಯ ಮುಂದಿಟ್ಟುಕೊಂಡು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿ ಅರಿವು ಮೂಡಿಸುತ್ತಿರುವ ಕಾರ್ಯ ಇತರೆ ಮಾಧ್ಯಮಗಳಿಗೂ ಮಾದರಿ ಎಂದು ತಹಸೀಲ್ದಾರ್ ಜಿ.ಸಿ.ಹರ್ಷವರ್ಧನ್ ಹೇಳಿದರು.

ಹಾರೋಹಳ್ಳಿ: ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಾಲುಮರದ ತಿಮ್ಮಕ್ಕ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ವಿಷಯ ಮುಂದಿಟ್ಟುಕೊಂಡು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿ ಅರಿವು ಮೂಡಿಸುತ್ತಿರುವ ಕಾರ್ಯ ಇತರೆ ಮಾಧ್ಯಮಗಳಿಗೂ ಮಾದರಿ ಎಂದು ತಹಸೀಲ್ದಾರ್ ಜಿ.ಸಿ.ಹರ್ಷವರ್ಧನ್ ಹೇಳಿದರು.

ಪಟ್ಟಣದ ಆರ್‌ಎಚ್ಎಸ್ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧ -2025ರಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಪರಿಸರದ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮಗಳ ಜವಾಬ್ದಾರಿ ಹೆಚ್ಚಾಗಿದೆ. ಆ ಕಾರ್ಯವನ್ನು ಕನ್ನಡಪ್ರಭ-ಸುವರ್ಣ ನ್ಯೂಸ್ ಯಶಸ್ವಿಯಾಗಿ ನಿಭಾಯಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈಗಿನಿಂದಲೇ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ, ಜಾನುವಾರು ಸೇವಿಸುವುದರಿಂದ ಅವುಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಆದ್ದರಿಂದ ದಿನಸಿ, ತರಕಾರಿ ಇತರೆ ಪದಾರ್ಥ ತರಲು ಬಟ್ಟೆ ಬ್ಯಾಗ್ ಗಳನ್ನು ಬಳಸಬೇಕು. ಪರಿಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಶಾಲಾ ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು. ಪೋಷಕರು ಆಶೀರ್ವಾದ ಒಂದಿದ್ದರೆ ಎಂತಹ ಸಮಸ್ಯೆ ಬೇಕಾದರು ಸಮರ್ಥವಾಗಿ ಎದುರಿಸಬಹುದು ಎಂದು ಹರ್ಷವರ್ಧನ್ ಹೇಳಿದರು.

ಚಿತ್ರಕಲೆಗೆ ಭಾಷೆ-ಗಡಿಗಳ ಗೋಡೆ ಇಲ್ಲ:

ಸಮಾಜ ಸೇವಕ ಡಾ.ಪ್ರಾಣೇಶ್ ಮಾತನಾಡಿ, ಚಿತ್ರಕಲೆ ದೇಶದ ಸಂಸ್ಕೃತಿಯ ಒಂದು ಭಾಗ. ಚಿತ್ರಕಲೆಗೆ ಹೆಚ್ಚಿನ ಮಹತ್ವ ಇರುವುದು ಜಗತ್ತಿಗೆ ಗೊತ್ತಿದೆ. ಕಲೆಗಳಲ್ಲಿಯೇ ಮಿಗಿಲಾದದ್ದು ಚಿತ್ರಕಲೆ. ಇದಕ್ಕೆ ಭಾಷೆ, ಗಡಿಗಳ ಗೋಡೆ ಇಲ್ಲ. ಒಂದು ಚಿತ್ರಕಲೆ ನಾನಾ ಅರ್ಥಗಳನ್ನು ಕಲ್ಪಿಸುತ್ತದೆ. ಜೀವನದಲ್ಲಿ ಸೋತಾಗ ಮಂಕಾಗಬಾರದು. ಸೋಲದೆ ಗೆದ್ದರೆ ಮಂದಹಾಸ, ಸೋತು ಗೆದ್ದರೆ ಇತಿಹಾಸ. ಇದನ್ನು ಅರ್ಥ ಮಾಡಿಕೊಂಡು ಮಕ್ಕಳು ಮುನ್ನಡೆಯಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಮಕ್ಕಳು ಕಷ್ಟಪಟ್ಟು ವ್ಯಾಸಂಗ ಮಾಡಿ ಉತ್ತಮ ಅಂಕಗಳನ್ನು ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ಸುಪ್ತ ಪ್ರತಿಭೆ ಇದೆ. ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅರಳಿ ವಿಕಸಿಸಲು ಅಗತ್ಯ ವೇದಿಕೆ ಬೇಕು. ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಮಕ್ಕಳ ದಿನಾಚರಣೆ ಹೆಸರಿನಲ್ಲಿ ಪರಿಸರ ಚಿತ್ರಕಲಾ ಸ್ಪರ್ಧೆ ಆಯೋಜಿಸಿ ಪ್ರತಿಭಾ ವಿಕಾಸಕ್ಕೆ ಅಗತ್ಯ ವೇದಿಕೆ ನಿರ್ಮಿಸಿರುವುದು ಶ್ಲಾಘನೀಯ ಎಂದರು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು ಮಾತನಾಡಿ, ವಿದ್ಯಾರ್ಥಿ ಜೀವನ ಮಕ್ಕಳ ಬದುಕನ್ನು ಬದಲಾವಣೆ ಮಾಡುವ ಘಟ್ಟವಾಗಿದೆ. ಕೆಟ್ಟ ನಿರ್ಧಾರಗಳು ನಿಮ್ಮ ಬದುಕನ್ನು ಹಾಳು ಮಾಡುತ್ತದೆ. ಎಸ್ಸೆಸ್ಸೆಲ್ಸಿಯಿಂದ ಪದವಿವರೆಗೆ ತಾಳ್ಮೆ ಮತ್ತು ಶ್ರದ್ದೆಯಿಂದ ಪುಸ್ತಕಕ್ಕೆ ಗೌರವ ಕೊಟ್ಟರೆ ಅದು ಬದುಕಿನ ಉದ್ದಕ್ಕೂ ರಕ್ಷಣೆ ಮಾಡುತ್ತದೆ ಎಂದು ತಿಳಿಸಿದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಹೇಳಿದಂತೆ ವಿದ್ಯೆ ಸಾಧಕನ ಸ್ವತ್ತೆ ಹೊರತು, ಸೋಮಾರಿಯ ಸ್ವತ್ತಲ್ಲ. ಇಂದಿನ ದಿನಗಳಲ್ಲಿ ಬಡ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಆದ್ದರಿಂದ ಮಕ್ಕಳು ಕಷ್ಟಪಟ್ಟು ಓದಿ ಸತ್ಪ್ರಜೆಗಳಾಗಬೇಕು ಎಂದರು.

ಕೆಡಿಪಿ ಸದಸ್ಯ ಎನ್.ಸಿ.ಗುರುಮೂರ್ತಿ ಮಾತನಾಡಿ, ನಾವು ಓದುವಾಗ ಯಾವುದೇ ಸಂಘ ಸಂಸ್ಥೆಗಳಿಂದ ಇಂತಹ ಚಟುವಟಿಕೆಗಳು ನಡೆಯುತ್ತಿರಲಿಲ್ಲ. ಈಗ ಸಾಕಷ್ಟ ಪ್ರಮಾಣದ ಅನುಕೂಲ, ಪ್ರೋತ್ಸಾಹ, ಸಹಕಾರ ಸಿಗುತ್ತದೆ. ನಿಮಗೆ ಸಾಧನೆ ಮಾಡಲು ಸಾಕಷ್ಟು ಅವಕಾಶಗಳು ಇವೆ ಎಂದರು.

ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನೀಲಿ ರಮೇಶ್, ರೈತ ಸಂಘದ ಅಧ್ಯಕ್ಷ ಹರೀಶ್, ನಿವೃತ್ತ ಮುಖ್ಯ ಶಿಕ್ಷಕ ಮಹಮ್ಮದ್ ಯಾಕುಬ್ ಪಾಷ, ಕನ್ನಡ ಪ್ರಭ ಹಿರಿಯ ವರದಿಗಾರ ಎಂ.ಅಫ್ರೋಜ್ ಖಾನ್, ಕನಕಪುರ ವರದಿಗಾರ ಕೆ.ವಿ.ಮನು, ಹಾರೋಹಳ್ಳಿ ವರದಿಗಾರ ಶ್ರೀನಿವಾಸ್ ಭಾಗವಹಿಸಿದ್ದರು.

ಕೋಟ್ ..............

ಚಿತ್ರ, ಶಿಲ್ಪಾ, ಸಂಗೀತ, ನೃತ್ಯ, ಸಾಹಿತ್ಯ, ನಾಟಕ ಇವೆಲ್ಲವು ಲಲಿತ ಕಲೆಗಳು. ಮುಕ್ತ ಭಾವನೆಗಳಿಗೆ ಸೂಕ್ತ ಅವಕಾಶ ಕಲ್ಪಿಸುವುದೇ ಕಲೆ. ಚಿತ್ರಕಲೆಯಲ್ಲಿ ವಿದ್ಯಾರ್ಥಿಗಳ ಕಲ್ಪನೆ ಮತ್ತು ಭಾವನೆಗಳಿಗೆ ಮಹತ್ವ ಕೊಟ್ಟಿದ್ದೇವೆ. ಕನ್ನಡಪ್ರಭ ಮತ್ತು ಸುರ್ವಣ ನ್ಯೂಸ್ ಸಾಲು ಮರದ ತಿಮ್ಮಕ್ಕನ ಸ್ಮರಣಾರ್ಥ ಮಕ್ಕಳಿಗೆ ವೇದಿಕೆ ಕಲ್ಪಿಸಿದ್ದಕ್ಕೆ ವಿದ್ಯಾರ್ಥಿಗಳು ಋಣಿಯಾಗಿರಬೇಕು. ಚಿತ್ರಕಲಾ ಸ್ಪರ್ಧೆಯಿಂದ ಸಾಲುಮರದ ತಿಮ್ಮಕ್ಕ ಅವರಿಗೆ ಗೌರವ ಸಲ್ಲಿಸುವ ಜೊತೆಗೆ ಮಕ್ಕಳಲ್ಲಿ ಪರಿಸರದ ಜಾಗೃತಿ ಮೂಡಿಸುವ ಕಾರ್ಯ ಮಾದರಿಯಾಗಿದೆ.

- ಸುಭಾಷ್ , ಚಿತ್ರಕಲಾ ಶಿಕ್ಷಕರು

ಬಾಕ್ಸ್‌.............

ಭವಿಷ್ಯ ಕಟ್ಟಿಕೊಳ್ಳಲು ಸ್ಪರ್ಧೆಗಳು ನೆರವು: ಮಲ್ಲೇಶ್

ಹಾರೋಹಳ್ಳಿ: ಶಾಲಾ ಮಕ್ಕಳಿಗೆ ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಚಿತ್ರಕಲಾದಂತಹ ಸ್ಪರ್ಧೆಗಳು ನೆರವಾಗಲಿವೆ. ಇಂತಹದೊಂದು ಅವಕಾಶಕ್ಕೆ ವೇದಿಕೆ ಕಲ್ಪಿಸಿದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ನವರ ಕಾರ್ಯವನ್ನು ವೃತ್ತ ಆರಕ್ಷಕ ನಿರೀಕ್ಷಕ ಮಲ್ಲೇಶ್ ಶ್ಲಾಘಿಸಿದರು.

ಪಟ್ಟಣದ ಆರ್ ಎಚ್ ಎಸ್ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ವೇಳೆ ಭೇಟಿ ನೀಡಿದ ಮಲ್ಲೇಶ್ ರವರು ಶಾಲಾ ಮಕ್ಕಳು ಬಿಡಿಸುತ್ತಿದ್ದ ಚಿತ್ರಗಳನ್ನು ವೀಕ್ಷಿಸಿದರು.

ಮಕ್ಕಳು ವೃತ್ತಿಪರರು ಮಾಡುವಷ್ಟು ಪರಿಣಿತರ ಅನುಭವದ ರೀತಿಯಲ್ಲಿ ಚಿತ್ರಗಳನ್ನು ಬಿಡಿಸುತ್ತಿದ್ದೀರಿ. ಚಿತ್ರಕಲೆ ಮನಸ್ಸಿನ ಭಾರವನ್ನು ಇಳಿಸಿ ಮಾನಸಿಕ ಜ್ಞಾನ ವೃದ್ಧಿಗೆ ಸಹಕಾರಿ ಆಗಿದೆ. ಇದರಿಂದ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ. ಚಿತ್ರಕಲೆಯ ನಿರಂತರ ಅಭ್ಯಾಸದಿಂದ ನುರಿತ ಚಿತ್ರಕಲಾವಿದರಾಗಿ ಹೊರ ಹೊಮ್ಮುವ ಜೊತೆಗೆ ಮುಂದಿನ ವಿದ್ಯಾಭ್ಯಾಸ ಅನಿಮೇಷನ್ ಕಲಿಕೆಗೆ ನೆರವಾಗಲಿದೆ. ನಾನು ಸಹ ಆನ್ ಲೈನ್ ಮೂಲಕ ಚಿತ್ರಕಲೆ ತರಬೇತಿ ಪಡೆಯುತ್ತಿದ್ದೇನೆ ಎಂದು ಹೇಳಿದರು.

ಹಾರೋಹಳ್ಳಿ ತಾಲೂಕು ಪ್ರೌಢಶಾಲೆಯ 8,9,10 ನೇ ತರಗತಿ ಮಕ್ಕಳಿಗೆ ಮೂರು ವಿಭಾಗದಲ್ಲಿ‌ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಿತು.‌ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ, ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಚಿತ್ರಕಲೆ ಸ್ಪರ್ಧೆಯ ತೀರ್ಪುಗಾರರಾಗಿ ಹುಸೇನ್ ಮತ್ತು ಸುಭಾಷ್ ಕುಮಾರ್ ಜವಾಬ್ದಾರಿ ನಿಭಾಯಿಸಿದರು.

ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ :

ನೂತನವಾಗಿ ಹೊಸ ತಾಲೂಕಾಗಿ ರಚನೆಯಾಗಿರುವ ಹಾರೋಹಳ್ಳಿಯಲ್ಲಿ ಕನ್ನಡಪ್ರಭ ನಡೆಸಿದ ಚಿತ್ರಕಲೆ ಸ್ಪರ್ಧೆಗೆ ವಿವಿಧ ಶಾಲೆಗಳಿಂದ ಸುಮಾರು 200ಕ್ಕೂ ಹೆಚ್ಚಿನ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ವಿಭಿನ್ನವಾದ ಚಿತ್ರಗಳನ್ನು ಬಿಡಿಸುವ ಮೂಲಕ ಗಮನ ಸೆಳೆದರು.

8ನೇ ತರಗತಿಯಲ್ಲಿ ಪ್ರಗತಿ ಶಾಲೆಯ ಸ್ಪೂರ್ತಿ (ಪ್ರಥಮ), ಫಿದಾ ಫಾತಿಮಾ (ದ್ವಿತೀಯ), ಚಿಕ್ಕಕಳ್ಬಾಳು ಸರ್ಕಾರಿ ಶಾಲೆಯ ಎಂ.ಮಹೇಶ್ (ತೃತೀಯ), ಕೆಪಿಎಸ್ ಶಾಲೆಯ ಆರ್ .ಹರ್ಷಿಣಿ, ಆರ್.ಮಾನಸ (ಸಮಾಧಾನಕರ) ಬಹುಮಾನ ಪಡೆದಿದ್ದಾರೆ.

9ನೇ ತರಗತಿಯಲ್ಲಿ ಕೆಪಿಎಸ್ ಶಾಲೆಯ ಎಂ.ಆರ್. ನಯನ (ಪ್ರಥಮ), ಪ್ರಗತಿ ಶಾಲೆಯ ಎಂ.ಶ್ರೇಯಾ (ದ್ವಿತೀಯ), ಡೆಕ್ಕನ್ ಪಬ್ಲಿಕ್ ಶಾಲೆಯ ಚೈತನ್ಯ (ತೃತೀಯ), ಮಾಡ್ರನ್ ಶಾಲೆಯ ಲಿಖಿತ್ ಗೌಡ, ಕಗ್ಗಲಹಳ್ಳಿ ಸರ್ಕಾರಿ ಶಾಲೆಯ ಅಮಿಷಾ (ಸಮಾಧಾನಕರ) ಬಹುಮಾನ ಪಡೆದುಕೊಂಡಿದ್ದಾರೆ.

10ನೇ ತರಗತಿಯಲ್ಲಿ ಪ್ರಗತಿ ಶಾಲೆಯ ಆರ್.ಮಧುಶ್ರೀ (ಪ್ರಥಮ), ಮಾಡ್ರನ್ ಶಾಲೆಯ ಕೈಲಾಶ್ (ದ್ವಿತೀಯ), ಆರ್.ನಿಸರ್ಗ (ತೃತೀಯ), ಪ್ರಗತಿ ಶಾಲೆಯ ಸಿ.ಆರ್.ಸ್ಪೂರ್ತಿ , ಆರ್ ಎಚ್ ಎಸ್ ಶಾಲೆಯ ಆರ್. ಮಾನ್ಯಶ್ರೀ (ಸಮಾಧಾನಕಾರ) ಬಹುಮಾನ ಗಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಡಳಿತದ ವಿರುದ್ಧ ಅಂಗವಿಕಲರ ಆಕ್ರೋಶ
ಮಾದಕ ದ್ರವ್ಯ ಸೇವನೆ ಬದುಕಿನ ವಿನಾಶಕ್ಕೆ ದಾರಿ; ಮೋಹನ್ ರಾಜಣ್ಣ