- ರವಿ ಹೆಗಡೆ ನೇತೃತ್ವದ ವಿನೂತನ ಪ್ರಯತ್ನಕ್ಕೆ ಓಂಕಾರ ಶ್ರೀಗಳಿಂದ ಶುಭಾರೈಕೆ ।
- - -
ಕನ್ನಡಪ್ರಭ ವಾರ್ತೆ ದಾವಣಗೆರೆಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಶಿಕ್ಷಕರು, ಪೋಷಕರು ಮಾತ್ರವಲ್ಲದೇ ಕನ್ನಡಪ್ರಭ ಪತ್ರಿಕೆಯೂ ಒತ್ತು ನೀಡಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ಶಿವಯೋಗಿ ಮಂದಿರ ಆವರಣದಲ್ಲಿ ಭಾನುವಾರ ಕನ್ನಡಪ್ರಭ- ಸುವರ್ಣ ನ್ಯೂಸ್ ಹಾಗೂ ಸೇವ್ ವೈಲ್ಡ್ ಲೈಫ್ ಅಭಿಯಾನದಡಿ ಕರ್ನಾಟಕ ಅರಣ್ಯ ಇಲಾಖೆ ಸಹಕಾರದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್, ಖಾಸಗಿ ಶಾಲಾ- ಕಾಲೇಜು ಆಡಳಿತ ಮಂಡಳಿಗಳು, ಸರ್ಕಾರಿ ಶಾಲೆಗಳು, ಗಣ್ಯರ ಸಹಕಾರದಲ್ಲಿ ಕಿಪ್ರಾ ಶಾಲೆ, ಹಿ.ಪ್ರಾ. ಶಾಲೆ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ಮಕ್ಕಳೂ ಒಂದೊಂದು ಮುತ್ತುಗಳು. ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಇಂತಹದ್ದೊಂದು ರಾಜ್ಯಮಟ್ಟದ ಸ್ಪರ್ಧೆಗೆ ಮಕ್ಕಳನ್ನು ಅಣಿಗೊಳಿಸಲು, ತಾಲೂಕು, ಜಿಲ್ಲಾಮಟ್ಟದಲ್ಲಿ ವನ್ಯ ಸಂಪತ್ತು ಮತ್ತು ವನ್ಯಜೀವಿಗಳ ಕುರಿತಂತೆ ಚಿತ್ರಕಲಾ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳಲ್ಲಿ ಪರಿಸರಪ್ರಜ್ಞೆ ಮೂಡಿಸುವ ಜೊತೆಗೆ ಕಲಾಸಕ್ತಿ ಮೂಡಿಸುವ ಕೆಲಸ ಮಾಡಿದ್ದಾರೆ. ಈ ರೀತಿ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ವೈಯಕ್ತಿಕವಾಗಿ ಧನ್ಯವಾದಗಳನ್ನು ಹೇಳುತ್ತೇವೆ ಎಂದರು.
ವಿದ್ಯಾರ್ಥಿಗಳು ಬೇಗ ಮಲಗು- ಬೇಗ ಎದ್ದೇಳಿ ಎಂಬ ಸೂತ್ರ ಅಳಡಿಸಿಕೊಳ್ಳಬೇಕು. ನಿತ್ಯ ರಾತ್ರಿ 10ಕ್ಕೆ ಮಲಗಿ, ಬೆಳಗಿನ ಜಾವ 4 ಗಂಟೆಗೆ ಎದ್ದು ಓದಬೇಕು. ಶಾಲೆಗಳಲ್ಲಿ ಶಿಕ್ಷಕರು ಹೇಳಿದ್ದ ಪಾಠ ಆಸಕ್ತಿಯಿಂದ ಕೇಳಿ, ಮನೆಗೆ ಬಂದು ಅದನ್ನು ಅಭ್ಯಾಸ ಮಾಡಿಕೊಳ್ಳಿ. ಸ್ಪರ್ಧೆಗಳಲ್ಲಿ ಬಹುಮಾನವೇ ಮುಖ್ಯವಲ್ಲ. ಎಲ್ಲರಿಗೂ ಬಹುಮಾನ ಬರುವುದಿಲ್ಲ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯ. ಸ್ಪರ್ಧೆಯಲ್ಲಿ ಬಹುಮಾನ ಬರಲಿಲ್ಲವೆಂಬ ಬೇಸರ ಬೇಡ. ನಿಮ್ಮ ಕಲೆ, ಪ್ರತಿಭೆಗೆ ಬೆಲೆ ಕಟ್ಟಲಾಗದು. ಅಂತಹ ಕಲೆ ನಿಮ್ಮಲ್ಲಿದೆ. ಇಲ್ಲಿ ನಿಮ್ಮ ಪೋಷಕರೂ ಅದಕ್ಕೆ ಪ್ರೋತ್ಸಾಹಿಸಬೇಕು ಎಂದು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಅತ್ಯವಶ್ಯಕ ಕಾರ್ಯಕ್ರಮ:
ಆವರೆಗರೆ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆ ನಿರ್ದೇಶಕಿ, ಬಿಐಇಟಿ ಕಾಲೇಜಿನ ಬೋಧಕಿ ಎ.ಎಚ್. ಸುಗ್ಗಲಾದೇವಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಪ್ರೋತ್ಸಾಹಕ್ಕೆ ಪೋಷಕರ ಪಾತ್ರ ಬಹಳ ಮುಖ್ಯ. ಚಿತ್ರಕಲಾ ಸ್ಪರ್ಧೆ ಒಂದು ವಿಭಿನ್ನ, ಅರ್ಥಪೂರ್ಣ ಸ್ಪರ್ಧೆ. ಜೆಮಿನಿ ಎಂಬ ಆಪ್ ಮೂಲಕ ಎಐ ಆಧುನಿಕ ತಂತ್ರಜ್ಞಾನದಲ್ಲಿ ಎಂತಹ ಚಿತ್ರ, ಫೋಟೋಗಳನ್ನು ಕೆಲ ಕ್ಷಣಗಳಲ್ಲಿ ಜನರೇಟ್ ಮಾಡುತ್ತದೆ. ಮಕ್ಕಳ ಸುಪ್ತ ಪ್ರತಿಭೆ ಅನಾವರಣಕ್ಕೆ ಕನ್ನಡಪ್ರಭ ಆಯೋಜಿದ ಇಂತಹ ಚಿತ್ರಕಲಾ ಸ್ಪರ್ಧೆ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.ಮಕ್ಕಳ ಆತ್ಮವಿಶ್ವಾಸ ವೃದ್ಧಿ:
ಜೆ.ಎಚ್.ಪಟೇಲ್ ಕಾಲೇಜು ಕಾರ್ಯದರ್ಶಿ ಮುಸ್ತಫಾ ಮಾತನಾಡಿ, ಮಕ್ಕಳ ಪ್ರತಿಭೆ, ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂತಹ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸುವುದಿಂದ ಅಸಾಧ್ಯವನ್ನು ಸಾಧಿಸುವ ಆತ್ಮಸ್ಥೈರ್ಯ ಮೂಡಿಸುತ್ತದೆ. ಭಾನುವಾರವಾದರೂ ಮಕ್ಕಳನ್ನು ಸ್ಪರ್ಧೆಗೆ ಕರೆ ತಂದ ನೂರಾರು ಪಾಲಕರಿಗೆ ಧನ್ಯವಾದ ಆರ್ಪಿಸುತ್ತೇನೆ. 8, 9 ಹಾಗೂ 10ನೇ ತರಗತಿ ಮಕ್ಕಳಿಗೆ ಬರೀ ಓದುವುದಕ್ಕೆ ಪಾಲಕರು ಒತ್ತಡ ಹೇರದೇ, ಇಂತಹ ಸ್ಪರ್ಧೆ, ಚಟುವಟಿಕೆಗಳಲ್ಲೂ ಪ್ರೋತ್ಸಾಹಿಸುವುದರಿಂದ ಆ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಿದಂತಾಗುತ್ತದೆ ಎಂದರು.ಸದಾ ಜೊತೆಗೆ ಇರುತ್ತೇವೆ:
ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ಹಾಲೇಶಪ್ಪ ಮಾತನಾಡಿ, ಕನ್ನಡಪ್ರಭ ಬಳಗ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದು ಒಳ್ಳೆಯ ಬೆಳವಣಿಗೆ. ಅದೇ ರೀತಿ ಗ್ರಾಮೀಣ ಮಕ್ಕಳು, ರೈತರ ಮಕ್ಕಳಿಗೂ ಅವಕಾಶ ಕಲ್ಪಿಸುವ ಕೆಲಸವಾಗಬೇಕು. 275ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿರುವುದು, ನೂರಾರು ಪಾಲಕರು ತದೇಕ ಚಿತ್ತದಿಂದ ಇಲ್ಲಿ ಸೇರಿರುವುದು ನಿಜಕ್ಕೂ ಇತರರಿಗೂ ಪ್ರೇರಣೆಯಾಗಿದೆ. ಕನ್ನಡಪ್ರಭದ ಇಂತಹ ಕಾರ್ಯಕ್ಕೆ ನಾವೆಲ್ಲರೂ ಸದಾ ಜೊತೆಗೆ ಇರುತ್ತೇವೆ ಎಂದರು.ಕನ್ನಡಪ್ರಭಕ್ಕೆ ಸಂಪೂರ್ಣ ಸಹಕಾರ:
ಇಂಟರ್ ನ್ಯಾಷನಲ್ ಶಾಲೆ ಕಾರ್ಯದರ್ಶಿ, ಜಿಪಂ ಮಾಜಿ ಅಧ್ಯಕ್ಷ ಸಹನಾ ರವಿ ಮಾತನಾಡಿ, ಮಕ್ಕಳು ಭಾನುವಾರ ರಜೆ ಎಂದುಕೊಂಡು ಮೊಬೈಲ್, ಟಿವಿ ಎದುರು ಸಮಯ ವ್ಯರ್ಥ ಮಾಡದೇ ಇಂತಹ ಕಲೆ, ಸಾಹಿತ್ಯ, ಸಂಸ್ಕೃತಿ, ಗೀತ ಗಾಯನದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಕನ್ನಡಪ್ರಭ ರಜಾ ದಿನಗಳಲ್ಲಿ ಶಿಕ್ಷಣಕ್ಕೆ ಪೂರಕ, ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕ ಚಟುವಟಿಕೆ ಹಮ್ಮಿಕೊಂಡರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಘೋಷಿಸಿದರು.ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಎಸ್. ಅಗಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಡಾ. ಡಿ.ಎಸ್. ಜಯಂತ್, ಪ್ರಾಚಾರ್ಯರಾದ ಗಾಯತ್ರಿ ಚಿಮ್ಮಡ್, ಯುನೈಟೆಡ್ ಇಂಟರ್ ನ್ಯಾಷನಲ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಬಿ.ದಾದಾಪೀರ್, ಪ್ರಾಚಾರ್ಯ ಎಂ.ವಾಸಿಂ ಪಾಷಾ, ಕಾಂಗ್ರೆಸ್ ಯುವ ಮುಖಂಡ ಶ್ರೀಕಾಂತ ಬಗರೆ, ಸೇಂಟ್ ಮೇರಿಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುನಿತಾ, ಉಪಾಧ್ಯಕ್ಷ ಪ್ರದೀಪ್ ಗೋನ್ಸಲ್ವೀಸ್, ಆವರೆಗರೆ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆ ಎ.ಎಚ್.ಸಿದ್ದಲಿಂಗಸ್ವಾಮಿ, ಪ್ರದೀಪ್, ಗೋನ್ಸಲ್ವಿಸ್, ಉಪಾಧ್ಯಕ್ಷರು, ಸೆಂಟ್ ಮೆರೀಸ್ ಶಿಕ್ಷಣ ಸಂಸ್ಥೆ, ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ, ಚಿತ್ರಕಲಾ ಶಿಕ್ಷಕರಾದ ಶಾಂತಯ್ಯ ಪರಡಿಮಠ, ಹರಿಹರದ ಆದಿತ್ಯ ಬಿರ್ಲಾ ಶಾಲೆಯ ಚಿತ್ರಕಲಾ ಶಿಕ್ಷಕ ರಾಘವೇಂದ್ರ ನಾಯಕ, ಹರಿಹರದ ಚಿತ್ರಕಲಾ ಶಿಕ್ಷಕ ಮುರುಘ ರಾಜೇಂದ್ರ, ನ್ಯಾಮತಿ ಐ.ಬಿ. ಬಬಲೇಶ್ವರ, ಜಿಲ್ಲಾ ಬಾಲಭವನ ಸಂಯೋಜಕಿ ಎಸ್.ಬಿ.ಶಿಲ್ಪಾ, ಗಾಯಕಿ ಮಾನಸ, ವಿನೋಬ ನಗರ ರವಿ, ಕನ್ನಡಪ್ರಭ ಸಿಬ್ಬಂದಿ ಟಿ.ಆರ್. ಸುಧೀಂದ್ರ, ಚನ್ನಬಸವ ಶೀಲವಂತ, ಶಿವರಾಜ, ಎಸ್.ಎಸ್. ಸಾಗರ್, ವಿತರಕ ಬಸವರಾಜ, ರೇಡಿಯಂ ರಾಜು ಇತರರು ಇದ್ದರು.
275ಕ್ಕೂ ಹೆಚ್ಚು ಮಕ್ಕಳು ಭಾಗಿ:ವಿವಿಧ ಶಾಲೆಗಳ ಸುಮಾರು 275ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳ ಪಾಲಕರು, ಅಜ್ಜ-ಅಜ್ಜಿ ಸೇರಿದಂತೆ ನೂರಾರು ಮಂದಿ ಸ್ಪರ್ಧೆ ವೀಕ್ಷಿಸಲು ಸೇರಿದ್ದು ಗಮನ ಸೆಳೆಯತು. ಶ್ರೀ ಶಿವಯೋಗಿ ಮಂದಿರದ ಶ್ರೀ ಬಸವಪ್ರಭು ಸ್ವಾಮೀಜಿ ಅನ್ಯ ಕಾರ್ಯ ನಿಮಿತ್ತ ಹೊರ ಜಿಲ್ಲೆಗೆ ತೆರಳಿದ್ದು, ಅಲ್ಲಿಂದಲೇ ಕನ್ನಡಪ್ರಭ ಬಳಗ ಹಾಗೂ ವಿವಿಧ ಶಾಲೆ ಸಿಬ್ಬಂದಿ ಇದ್ದರು. ನಂತರ ಸ್ಪರ್ಧಿ ಮಕ್ಕಳು ಹಾಗೂ ಪಾಲಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೈಸಿಕಲ್ ಬಹುಮಾನ ಪಡೆದ ಹೈಸ್ಕೂಲ್ ಮಕ್ಕಳು ಸೈಕಲ್ ಸವಾರಿ ಮಾಡಿ, ಗಮನ ಸೆಳೆದರು. ವಿವಿಧ ವಿಭಾಗದಲ್ಲಿ ಬಹುಮಾನ ಹಾಗೂ ಸಮಾಧಾನಕರ ಪಡೆದ ಮಕ್ಕಳಿಗೆ, ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತ್ತು.
- - -(ಬಾಕ್ಸ್)
* ಮಕ್ಕಳ ಉತ್ಸಾಹಕ್ಕೆ ಕರಗಿದ ಕನ್ನಡಪ್ರಭ- ಮುಂದಿನ ವರ್ಷ ಎಲ್ಲ 3 ವಿಭಾಗಗಳಿಗೂ ಸೈಕಲ್ ಬಹುಮಾನ!
ಕನ್ನಡಪ್ರಭ ವಾರ್ತೆ ದಾವಣಗೆರೆ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಾಲೂಕುಮಟ್ಟದ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದು, ಜಿಲ್ಲಾ ಮಟ್ಟದಲ್ಲಿ ಮಕ್ಕಳ ಒತ್ತಡ, ಪಾಲಕರ ಮನವಿ ಮೇರೆಗೆ 1ರಿಂದ 4, 5ರಿಂದ 7 ಹಾಗೂ 8ರಿಂದ 10ನೇ ತರಗತಿ ಮಕ್ಕಳಿಗೆ ಸ್ಪರ್ಧೆ ನಡೆಸಿದ್ದೇವೆ ಎಂದು ಕನ್ನಡಪ್ರಭ ಜಿಲ್ಲಾ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಹೇಳಿದರು.ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಕನ್ನಡಪ್ರಭ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ಸಂಸ್ಥೆಯ ಮೊದಲ ವರ್ಷದ ಸ್ಪರ್ಧೆ ಇದಾಗಿದೆ. 8ರಿಂದ 10ನೇ ತರಗತಿ ವಿಭಾಗದ ಪ್ರಥಮ 3 ಸ್ಥಾನಗಳ ಪಡೆದ ಮಕ್ಕಳಿಗೆ ಬೈಸಿಕಲ್ ಬಹುಮಾನ ನೀಡಿದ್ದೇವೆ ಎಂದರು.
ಮುಂದಿನ ವರ್ಷದ ಸ್ಪರ್ಧೆಯಲ್ಲಿ 1ರಿಂದ 7ನೇ ತರಗತಿವರೆಗಿನ ವಿಜೇತರಿಗೂ ಸೈಕಲ್ ಬಹುಮಾನ ನೀಡುವ ವ್ಯವಸ್ಥೆ ಮಾಡಲಾಗುವುದು. ಈ ಸ್ಪರ್ಧೆಯಲ್ಲಿ ಪರಿಣಿತ ಚಿತ್ರಕಲಾ ಶಿಕ್ಷಕರು ಸೂಕ್ತವಾಗಿ ಚಿತ್ರಗಳನ್ನೇ ಆಯ್ಕೆ ಮಾಡಿದ್ದಾರೆ. ಎಲ್ಲ ಮಕ್ಕಳೂ ಅತ್ಯುತ್ತಮವಾಗಿ ಚಿತ್ರ ಬಿಡಿಸಿದ್ದು, ತೀರ್ಪುಗಾರರಿಗೆ ವಿಜೇತರನ್ನು ಆಯ್ಕೆ ಮಾಡುವುದು ಧರ್ಮ ಸಂಕಟವಿದ್ದಂತೆ. ಹಾಗಾಗಿ, ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳೂ ವಿಜೇತರೆಂದೇ ಭಾವಿಸುತ್ತೇವೆ ಎಂದರು.ಅಲ್ಪಾವಧಿಯಲ್ಲಿ ಎಲ್ಲ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಯವರು, ಶಿಕ್ಷಕರು, ಗಣ್ಯರು ನಮ್ಮ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಮಕ್ಕಳು ಇಡೀ ದಿನ ಉತ್ಸಾಹದಿಂದ ಭಾಗಿಯಾಗಿದ್ದನ್ನು ನೋಡಿದರೆ ಮುಂದಿನ ವರ್ಷ ನಡೆಯುವ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳ ಉತ್ಸಾಹ ಮತ್ತಷ್ಟು ಹೆಚ್ಚಾಗಿರುತ್ತದೆಂಬುದು ಸ್ಪಷ್ಟವಾಗಿದೆ. ಮುಂದೆಯೂ ಎಲ್ಲರ ಸಹಕಾರದಲ್ಲಿ ಇದಕ್ಕಿಂತಲೂ ಉತ್ತಮವಾಗಿ ಸ್ಪರ್ಧೆ ಆಯೋಜಿಸಲಾಗುವುದು ಎಂದು ನಾಗರಾಜ ಬಡದಾಳ್ ಹೇಳಿದರು.
- - --(ಫೋಟೋಗಳು ಕಳಿಸಲಾಗಿದೆ)