ಚಳ್ಳಕೆರೆಯ ತಾಲೂಕಿನ ಬಹುಮುಖ ಪ್ರತಿಭೆಗೆ ರಾಜ್ಯ ಪ್ರಶಸ್ತಿ ಗರಿ । ರಂಗಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಗುರುತರ ಸಾಧನೆಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕಳೆದ ೪೦ ವರ್ಷಗಳಿಂದ ರಂಗಕಲೆ, ಸಂಗೀತ, ಸಾಹಿತ್ಯ, ಶಿಕ್ಷಣ ಕ್ಷೇತ್ರದ ಅಗ್ರಗಣ್ಯ ಸಾಧಕ ಹಾಗೂ ಬುಡಕಟ್ಟು ಆಚರಣೆ, ಸಂಪ್ರದಾಯಗಳಿಗೆ ಇಂದಿಗೂ ಜೀವ ತುಂಬುವ ಕೆಲಸದಲ್ಲಿ ನಿರತರಾದ ನಾಟಕ ಅಕಾಡೆಮಿ ಮಾಜಿ ಸದಸ್ಯ, ಹಿರಿಯ ರಂಗಕರ್ಮಿ ಪಿ.ತಿಪ್ಪೇಸ್ವಾಮಿ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಭಾಜನರಾಗಿದ್ದಾರೆ.ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಕಳೆದ ಸುಮಾರು ೪೦ ವರ್ಷಗಳಿಂದ ಹಿಂದೆ ೧೯೭೫ರಲ್ಲಿ ನಗರದ ಕಾಟಪ್ಪನಹಟ್ಟಿಯ ಖಾಸಗಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಆರಂಭಿಸಿದ ತಿಪ್ಪೇಸ್ವಾಮಿ, ಶ್ರೀ ಕಾಟಂ ಲಿಂಗೇಶ್ವರ ನಾಟಕ ಕಂಪನಿ ಕಟ್ಟಿಕೊಂಡು ಗ್ರಾಮಾಂತರ ಪ್ರದೇಶಗಳಲ್ಲಿ ರಂಗಸೇವೆ ಆರಂಭಿಸಿದರು. ಪಿಯುಸಿ ವಿದ್ಯಾರ್ಥಿಯಾಗಿದ್ದಾಗಲೇ ೧೯೬೬ರಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ಕೀರ್ತಿ ಇವರದ್ದು. ಇವರ ರಂಗಸೇವೆಗೆ ದಿವಂಗತ ಮಾಜಿ ಸಚಿವ ತಿಪ್ಪೇಸ್ವಾಮಿ, ಕಾಟಪ್ಪನಹಟ್ಟಿಯ ಸೂರನಾಯಕ ಮುಂತಾದವರು ಸಹಕಾರ ನೀಡಿದ್ದರು. ಅಂದಿನಿಂದ ಇಂದಿನ ತನಕ ನಿರಂತರವಾಗಿ ರಂಗಸೇವೆಯನ್ನೇ ಮುಂದುವರೆಸಿಕೊಂಡು ಬಂದಿರುವ ಇವರು ಇಂದಿಗೂ ನಾಟಕ ಹಾಗೂ ಸಂಗೀತ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಶ್ರೀ ಕಾಟಂಲಿಂಗೇಶ್ವರ ನಾಟಕ ಕಂಪನಿಯಲ್ಲಿ ಇಂದಿಗೂ ಸಹ ಹಲವಾರು ಕಲಾವಿದರಿದ್ದು, ರಂಗಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಸುಮಾರು ೪೦ ವರ್ಷಗಳಿಂದ ಈ ನಾಟಕ ಕಂಪನಿ ರಾಜವೀರ ಮದಕರಿ ನಾಯಕ ನಾಟಕವನ್ನು ಅಭಿನಯಿಸುತ್ತಾ ಬಂದಿದೆ. ರಾಜಧಾನಿ ನವದೆಹಲಿಯಲ್ಲಿ ೨೦೧೫ರಲ್ಲಿ ರಾಜ ವೀರಮದಕರಿ ನಾಯಕ ನಾಟಕವನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು.ಚಳ್ಳಕೆರೆ ತಾಲೂಕಿನಾದ್ಯಂತ ೬೦ಕ್ಕೂ ಹೆಚ್ಚು ಹಿರಿಯ ರಂಗಕರ್ಮಿಗಳಿದ್ದು ಅವರೆಲ್ಲರಿಗೂ ಸರ್ಕಾರದಿಂದ ಎರಡು ಸಾವಿರ ಮಾಸಾಶನ ದೊರೆಯುವಂತೆ ಮಾಡಿವಲ್ಲಿ ತಿಪ್ಪೇಸ್ವಾಮಿಯವರ ಪಾತ್ರ ಹಿರಿದು. ಕಾರಣ ಕರ್ನಾಟಕ ನಾಟಕ ಅಕಾಡೆಮಿ ನಾಮಿನಿ ಸದಸ್ಯರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಮಾಸಾಶನ ದೊರೆಯುವಂತೆ ಮಾಡುವಲ್ಲಿ ಇವರು ಸಫಲರಾಗಿದ್ದರು.
2 ಅವಧಿಗೆ ಚಳ್ಳಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ನಾಟಕ, ಸಂಗೀತ, ರಂಗಕಲೆ ಮುಂತಾದವುಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಕೊಳ್ಳುವ ಇವರು ನನ್ನ ನಾಟಕದ ಗುರು ಗಾದೀರಪ್ಪ, ಸಂಗೀತ ಗುರು ಪಿ.ಗುರುಸಿದ್ದಪ್ಪ, ಹಿರಿಯ ರಂಗಕರ್ಮಿ ಸಿ.ಜಿ.ಕೆಯವರನ್ನು ಸದಾ ನೆನಪಿಸಿಕೊಳ್ಳುತ್ತಾರೆ.ಅಭಿನಂದನೆಗಳ ಮಹಾಪೂರ:
ಹಿರಿಯ ರಂಗಕರ್ಮಿ ಪಿ.ತಿಪ್ಪೇಸ್ವಾಮಿಯವರಿಗೆ ಪ್ರತಿಷ್ಠಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾದ ಕೂಡಲೇ ಹಲವಾರು ಅಭಿಮಾನಿಗಳು, ಹಿತೈಷಿಗಳು, ಕಲಾವಿದರು ತಿಪ್ಪೇಸ್ವಾಮಿಯವರನ್ನು ಅಭಿನಂದಿಸಿದರು.ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಕಾಟಪ್ಪನಹಟ್ಟಿಯ ರಂಗಕರ್ಮಿ ಸೂರನಾಯಕ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲ್ಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಮಾಜಿ ಅಧ್ಯಕ್ಷ ಪಿ.ಜಗದೀಶ್, ನಿವೃತ್ತ ಪ್ರಾಂಶುಪಾಲರಾದ ಮೀರಸಾಬಿಹಳ್ಳಿ ಶಿವಣ್ಣ, ಸಿ.ಶಿವಲಿಂಗಪ್ಪ, ಎಂ.ಎನ್.ಮೃತ್ಯುಂಜಯ, ನೃತ್ಯ ನಿಕೇತನ ಸಂಚಾಲಕ ಯು.ಎಸ್.ವಿಷ್ಣುಮೂರ್ತಿರಾವ್, ನಿಸರ್ಗಗೋವಿಂದರಾಜು, ಬಾಳೆಮಂಡಿರಾಮದಾಸ್, ಬ್ರಾಹ್ಮಣ ಸಂಘದ ತಾಲ್ಲೂಕು ಅಧ್ಯಕ್ಷ ಅನಂತರಾಮ್ ಗೌತಮ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಜೆ.ವೆಂಕಟೇಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಕರಿಯಪ್ಪ, ಕರ‍್ಲಕುಂಟೆ ತಿಪ್ಫೇಸ್ವಾಮಿ, ಸಿ.ಗುರುಸ್ವಾಮಿ ಮುಂತಾದವರು ಅಭಿನಂದಿಸಿದ್ದಾರೆ. .
ರಂಗಕರ್ಮಿಗಳನ್ನು ಗುರುತಿಸಿದ ಸರ್ಕಾರದ ಕಾರ್ಯ ಸ್ವಾಗತಾರ್ಹ: ಪಿ.ತಿಪ್ಪೇಸ್ವಾಮಿ ಚಳ್ಳಕೆರೆ: ರಾಜ್ಯದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನನಗೆ ದೊರೆತಿರುವುದು ವೃತ್ತಿನಿರತ ರಂಗಭೂಮಿಯ ಕಲಾವಿದರಿಗೆ ಸಂದ ಗೌರವ. ಇಂದು ನೂರಾರು ಕಲಾವಿದರು ಕಲೆಯನ್ನು ಜೀವಂತಾಗಿಸಿದ್ದಾರೆ. ಸರ್ಕಾರ ರಂಗಕರ್ಮಿಗಳನ್ನು ಹುಡುಕಿ ಗೌರವಿಸುವ ಕೆಲಸ ಮಾಡಿದ್ದು ಸಂತಸ ತಂದಿದೆ ಎಂದು ಹಿರಿಯ ರಂಗಕರ್ಮಿ ಪಿ.ತಿಪ್ಪೇಸ್ವಾಮಿ ಸಂತಸ ವ್ಯಕ್ತಪಡಿಸಿದರು.ರಾಜ್ಯೋತ್ಸವ ಪ್ರಶಸ್ತಿ ಸಂದ ಹಿನ್ನೆಲೆ ಪತ್ರಿಕೆಯೊಂದಿಗೆ ತಮ್ಮ ಸಂತಸ ಹಂಚಿಕೊಂಡ ತಿಪ್ಪೇಸ್ವಾಮಿ, ಸುಮಾರು ೫೦ ವರ್ಷಗಳಿಂದ ರಂಗಕಲೆ ಸಂರಕ್ಷಿಸುವ ಕಾರ್ಯದಲ್ಲಿ ನಿರತನಾಗಿದ್ದೆ. ರಂಗಭೂಮಿ ಚಟುವಟಿಕೆಗಳ ಬಗ್ಗೆ ಸಾರ್ವಜನಿಕ ಸಮಾರಂಭಗಳಲ್ಲಿ ಜನರ ಗಮನ ಸೆಳೆಯುತ್ತಿದ್ದೆ. ಆಧುನಿಕತೆಗೆ ಒತ್ತು ನೀಡುವ ಜನರ ಸಂಖ್ಯೆಹೆಚ್ಚಾದರೂ ರಂಗಕರ್ಮಿಗಳ ಕಾಯಕದ ಬಗ್ಗೆ ಇಂದಿಗೂ ಸಹ ಜನರಲ್ಲಿ ಅಪಾರ ಗೌರವವಿದೆ ಎಂದರು.
ನಾನು ಈ ಸಂದರ್ಭದಲ್ಲಿ ಸರ್ಕಾರವನ್ನು ಅಭಿನಂದಿಸುವ ಜೊತೆಗೆ ಇಂದಿಗೂ ಸಹ ಗ್ರಾಮೀಣ ಪ್ರದೇಶದಲ್ಲಿ ರಂಗಕಲೆ ಉಳಿವಿಗಾಗಿ ದುಡಿಯುತ್ತಿರುವ ರಂಗಕರ್ಮಿಗಳಿಗೆ ಸರ್ಕಾರ ಮಾಸಾಶನ ನೀಡಬೇಕು. ಈಗಿರುವ ೨ ಸಾವಿರ ಮಾಸಾಶನವನ್ನು ೫ ಸಾವಿರಕ್ಕೆ ಏರಿಕೆ ಮಾಡಬೇಕು. ರಂಗಕಲಾವಿದರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇನ್ನೂ ಹೆಚ್ಚಿನ ಸೌಲಭ್ಯ ನೀಡಲು ಮುಂದಾಗಬೇಕು ಎಂದರು.