ತೀರ್ಥಹಳ್ಳಿ: ಪೋಷಕರಿಗೆ ಇಂಗ್ಲೀಷ್ ಭಾಷೆಯ ಮೇಲಿನ ವ್ಯಾಮೋಹ ಮತ್ತು ಸರ್ಕಾರದ ಇಚ್ಚಾಶಕ್ತಿಯ ಕೊರತೆಯಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ ಎಂದು ಶಾಸಕ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ತೀರ್ಥಹಳ್ಳಿ ಪಟ್ಟಣದ ಡಾ. ಯು.ಆರ್.ಅನಂತಮೂರ್ತಿ ಸರ್ಕಾರಿ ಪ್ರೌಡಶಾಲೆ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ರಾಜ್ಯ ಸರ್ಕಾರ ಉರ್ದು ಮಾಧ್ಯಮ ಶಾಲೆಗಳ ಬಗ್ಗೆ ತೋರುತ್ತಿರುವ ವಿಶೇಷ ಅಭಿಮಾನ ಕನ್ನಡ ಶಾಲೆಗಳ ಬಗ್ಗೆ ತೋರುತ್ತಿಲ್ಲ. ಸರ್ಕಾರಿ ಶಾಲೆಗಳು ಮುಚ್ಚುವುದಕ್ಕೆ ಪೋಷಕರ ಆಂಗ್ಲ ಭಾಷಾ ಬಗೆಗಿನ ವಿಶೇಷ ಒಲವು ಮತ್ತು ಸರ್ಕಾರದ ಅಸಡ್ಡೆ ಕೂಡಾ ಕಾರಣವಾಗಿದೆ. ನವಂಬರ್ ತಿಂಗಳಲ್ಲಿ ಮಾತ್ರ ಒಲವು ತೋರದೇ ನಾವು ಕನ್ನಢಾಭಿಮಾನವನ್ನು ಸದಾ ಮೈಗೂಡಿಸಿಕೊಳ್ಳಬೇಕಿದೆ ಎಂದರು.
ರಾಷ್ಟ್ರಧ್ವಜ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಎಸ್. ರಂಜಿತ್, ಒಂದು ಭಾಷೆ ನಾಶವಾಗುವುದರಿಂದ ಒಂದು ಸಂಸ್ಕೃತಿಯೂ ನಾಶವಾಗುತ್ತದೆ. ಎರಡು ಸಾವಿರಕ್ಕೂ ಮಿಕ್ಕಿದ ಇತಿಹಾಸವನ್ನು ಹೊಂದಿರುವ ಕನ್ನಡ ಶ್ರೀಮಂತವಾದ ಮತ್ತು ಜೀವಂತ ಭಾಷೆಯಾಗಿದ್ದು, ಮಕ್ಕಳಿಗೆ ಮನವರಿಕೆ ಮಾಡುವ ಮೂಲಕ ಕನ್ನಡ ಉಳಿಸಿ ಬೆಳೆಸೋಣ ಎಂದರು.ಇದೇ ವೇಳೆ 30 ಮಂದಿ ಫಲಾನುಭವಿಗಳಿಗೆ 94 ಸಿ ಹಕ್ಕು ಪತ್ರವನ್ನು ವಿತರಣೆ ಮಾಡಲಾಯಿತು. ಮಳೆಗಾಲದಲ್ಲಿ ಕಡ್ತೂರಿನ ಸಮೀಪ ಕೆಸಲೂರಿನಲ್ಲಿ ಮಳೆ ನೀರಿನಿಂದ ಕೊಚ್ಚಿ ಹೋಗಿ ಸಾವನ್ನಪ್ಪಿದ ಗಣೇಶ ಎಂಬುವವರ ಪತ್ನಿ ಸುಶೀಲಮ್ಮನವರಿಗೆ ಸರ್ಕಾರದಿಂದ ಮಂಜೂರಾದ 5 ಲಕ್ಷ ರು. ವಿತರಿಸಲಾಯಿತು.
ವೇದಿಕೆಯಲ್ಲಿ ಪಪಂ ಅಧ್ಯಕ್ಷ ರಹಮತ್ ಉಲ್ಲ ಅಸಾದಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಂ.ಶೈಲಾ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್,ಪೋಲಿಸ್ ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್, ಅಕ್ಷರ ದಾಸೋಹದ ಸಹಾಯಕ ನಿರ್ದೆಶಕ ಪ್ರವೀಣ್, ಕಂದಾಯ ಇಲಾಖೆಯ ಸುರಥ ಕುಮಾರ್ ಇದ್ದರು.