ಕನ್ನಡ ವಿವಿ ವಿದ್ಯಾರ್ಥಿನಿಗೆ ಬಸ್‌ ಡಿಕ್ಕಿ: ರಸ್ತೆ ತಡೆದು ಪ್ರತಿಭಟನೆ

KannadaprabhaNewsNetwork | Published : Jul 23, 2024 12:34 AM

ಸಾರಾಂಶ

ವಿದ್ಯಾರ್ಥಿನಿ ಗಾಯಗೊಂಡಿದ್ದು, ಸೂಕ್ತ ಪರಿಹಾರ ಒದಗಿಸಬೇಕು ಎಂದು ವಿವಿ ವಿದ್ಯಾರ್ಥಿಗಳು ಒತ್ತಾಯಿಸಿದರು.

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಿ ಗೇಟ್‌ ಬಳಿ ವಿದ್ಯಾರ್ಥಿನಿ ಗೌರಮ್ಮ ಎಂಬವರಿಗೆ ಸೋಮವಾರ ಸಾರಿಗೆ ಬಸ್‌ ಡಿಕ್ಕಿಯಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಿಂದಾಗಿ ಎರಡು ತಾಸು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಗಾಯಗೊಂಡ ವಿದ್ಯಾರ್ಥಿನಿ ಗೌರಮ್ಮ ಎಂಬಾಕೆಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿನಿ ಗಾಯಗೊಂಡಿದ್ದು, ಸೂಕ್ತ ಪರಿಹಾರ ಒದಗಿಸಬೇಕು ಎಂದು ವಿವಿ ವಿದ್ಯಾರ್ಥಿಗಳು ಒತ್ತಾಯಿಸಿದರು.

ಈ ಹಿಂದೆ ಕನ್ನಡ ವಿವಿಯ ಬಿ-ಗೇಟ್‌ ಬಳಿಯೇ ಅಪಘಾತದಲ್ಲಿ ತಂದೆ, ಮಗ ಮೃತಪಟ್ಟಿದ್ದರು. ಇಂತಹ ಅಪಘಾತಗಳು ನಡೆಯುತ್ತಿದ್ದರೂ ಪೊಲೀಸರು ಸೂಕ್ತ ಕ್ರಮ ವಹಿಸುತ್ತಿಲ್ಲ. ಕನ್ನಡ ವಿವಿ ವಿದ್ಯಾರ್ಥಿಗಳು ಓಡಾಡುವ ರಸ್ತೆಯಲ್ಲಿ ಸಂಚಾರ ನಿಯಮ ಪಾಲನೆ ಮಾಡಲಾಗುತ್ತಿಲ್ಲ. ಜಿ-20 ಸಂದರ್ಭದಲ್ಲಿ ಪೊಲೀಸರ ಮನವಿಗೆ ಬೆಲೆ ಕೊಟ್ಟು, ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್‌ಗಳ ರೂಂ ತೊರೆದು, ಪೊಲೀಸರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ವಿದ್ಯಾರ್ಥಿಗಳ ಮನವಿಯನ್ನು ಪೊಲೀಸರು ಗಾಳಿಗೆ ತೂರಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವರ್ಷದ ಹಿಂದೆ ಪುರಸಭೆ ಅಧಿಕಾರಿಗಳಿಗೆ, ಪಿಡಬ್ಲ್ಯೂಡಿ, ಜಿಲ್ಲಾಧಿಕಾರಿಗೂ ಮನವಿ ಮಾಡಿ ರಸ್ತೆ ಸಿಗ್ನಲ್, ಲೈಟ್ ಹಾಕಿಸಲು ಒತ್ತಾಯಿಸಲಾಗಿದೆ. ವಿವಿ ವಿದ್ಯಾರ್ಥಿಗಳ ಮನವಿಯನ್ನು ಕಿವಿಗೆ ಹಾಕಿಕೊಳ್ಳದ ಅಧಿಕಾರಿಗಳು ಅಪಘಾತಕ್ಕೆ ಕಾರಣರಾಗಿದ್ದಾರೆ ಎಂದು ದೂರಿದರು.

ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿನಿಗೆ ಸೂಕ್ತ ಪರಿಹಾರ ನೀಡಬೇಕು. ಅಜ್ಜಿ ಅಂಗಡಿಯಿಂದ ಜಲಾಶಯದ ಕಾಲುವೆವರೆಗೆ ಲೈಟ್‌ ವ್ಯವಸ್ಥೆ ಮಾಡಬೇಕು. ಜುಲೈ 29ರೊಳಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿಜಯ ಪೂಣಚ್ಚ ತಂಬಡ ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳ ಮನವಿ ಆಲಿಸಿದರು. ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕೇಸು ದಾಖಲು:

ಹೊಸಪೇಟೆ ನಗರದ ಅನಂತಶಯನಗುಡಿಯಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಹೊಸಪೇಟೆಯಿಂದ ಕಂಪ್ಲಿ, ಗಂಗಾವತಿ, ರಾಯಚೂರು, ಹೈದರಾಬಾದ್ ಸೇರಿದಂತೆ ಇತರೆ ಕಡೆಗಳಲ್ಲಿ ಸಂಚಾರ ಮಾಡುವ ಸಾರಿಗೆ ಬಸ್ ಗಳು, ಪಾಪಿನಾಯಕಹಳ್ಳಿ ಗ್ರಾಮ, ಹಂಪಿ‌ ಕನ್ನಡ ವಿವಿ ಮೂಲಕ‌ ಹಾದು ಹೋಗುತ್ತಿವೆ. ಇದರಿಂದ ಈ‌‌ ಮಾರ್ಗದಲ್ಲಿ ಅನಿವಾರ್ಯವಾಗಿ ವಾಹನ ಸಂಚಾರ ಅಧಿಕಗೊಂಡಿವೆ. ಈ ಸಂದರ್ಭದಲ್ಲಿ ಕಂಪ್ಲಿ, ಕಮಲಾಪುರದ ಮೂಲಕ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಕಮಲಾಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article