ಮಂಗಳೂರು: ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್(ರೈಲು ಸಂಖ್ಯೆ 16512) ರೈಲು ಪ್ರಸ್ತುತ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣ ಮೂಲಕ ಹಾದುಹೋಗದೆ ನೇರವಾಗಿ ಸರ್.ಎಂ.ವಿಸ್ವೇಶ್ವರಯ್ಯ ಟರ್ಮಿನಲ್‌ಗೆ ಸಂಚರಿಸುತ್ತಿದೆ. ಇದರಿಂದಾಗಿ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರು ಯಶವಂತಪುರ ನಿಲ್ದಾಣದಲ್ಲಿ ಇಳಿಯಲಾಗದೆ ತೊಂದರೆ ಅನುಭವಿಸುವಂತಾಗಿದೆ. ನೈರುತ್ಯ ರೈಲ್ವೆ ವಲಯ ಯಾವುದೇ ಅಧಿಕೃತ ಮಾಹಿತಿ ನೀಡದೆ ಕಣ್ಣೂರು ರೈಲನ್ನು ಯಶವಂತಪುರ ಬೈಪಾಸ್ ಮೂಲಕವೇ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿಗೆ ಕಳುಹಿಸುತ್ತಿದೆ. ಈ ಹಿಂದೆ ಆಗಸ್ಟ್ ತಿಂಗಳಿನಲ್ಲಿ ಕ್ರಾ.ಸಂ.ರಾ ಬೆಂಗಳೂರು ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಕಾರಣ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿಗೆ ಓಡಿಸುವ ಬಗ್ಗೆ ಇಲಾಖೆ ಮಾಹಿತಿ ನೀಡಿತ್ತು. ಆದರೆ ಆಗ ಅದು ಯಶವಂತಪುರ ಜಂಕ್ಷನ್ ರೈಲು ನಿಲ್ದಾಣ ಮೂಲಕವೇ ಹೋಗುವುದಾಗಿ ಸ್ಟಷ್ಟನೆ ನೀಡಿತ್ತು. ಆದರೆ ಈಗ ಸದ್ದಿಲ್ಲದೆ ರೈಲು ಸಂಖ್ಯೆ 16512 ಕಣ್ಣೂರು-ಬೆಂಗಳೂರು ರೈಲನ್ನು ಯಶವಂತಪುರವನ್ನೂ ಬೈಪಾಸ್ ಮಾಡಿ ಓಡಿಸುತ್ತಿದೆ. ಬೆಂಗಳೂರಿನಿಂದ ಬರುವ ರೈಲು ಸಂಖ್ಯೆ 16511 ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಯಶವಂತಪುರ ಜಂಕ್ಷನ್ ಮೂಲಕವೇ ಬರುತ್ತಿದೆ. ಇದರಿಂದಾಗಿ ಬೆಂಗಳೂರು ನಿಲ್ದಾಣಕ್ಕೆ ತೆರಳಬೇಕಾಗುವ ಪ್ರಯಾಣಿಕರು ಈ ವಿಚಾರ ಗೊತ್ತಿಲ್ಲದೆ ಪರದಾಟ ನಡೆಸುವಂತಾಗಿದೆ. ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಕೋಚ್
ಬೆಂಗಳೂರು-ಕಾರವಾರ ನಡುವಿನ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳ ಸಂಖ್ಯೆಯನ್ನು ನವೆಂಬರ್ 1ರಿಂದ ಹೆಚ್ಚಿಸಲಾಗಿದೆ. ಇದುವರೆಗೆ 16 ಕೋಚ್‌ಗಳಲ್ಲಿ ಸಂಚರಿಸುತ್ತಿದ್ದ ಈ ರೈಲಿಗೆ ಹೆಚ್ಚುವರಿಯಾಗಿ 3 ಟೈರ್ ಎಸ್ ಅಕಾನಮಿ 2, ಸ್ಲೀಪರ್ 1 ಹಾಗೂ ಜನರಲ್ 2 ಕೋಚ್‌ಗಳನ್ನು ಸೇರಿಸಲಾಗಿದ್ದು, ಈಗ ಒಟ್ಟು 19 ಕೋಚ್‌ಗಳಲ್ಲಿ ಸಂಚರಿಸಲಿದೆ. ಇದೇ ರೀತಿ ಕಾರವಾರ-ಮಡ್ಗಾಂವ್ ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲಿಗೂ ಹೆಚ್ಚುವರಿ ಕೋಚ್ ಅಳವಡಿಸಲಾಗಿದೆ ಎಂದು ಕೊಂಕಣ್ ರೈಲ್ವೆ ಪ್ರಕಟಣೆ ತಿಳಿಸಿದೆ.