ಬಳ್ಳಾರಿ: ರಂಗತೋರಣ ಸಾಂಸ್ಕೃತಿಕ ಸಂಘಟನೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಸೆ.5ರಿಂದ ನಾಲ್ಕು ದಿನಗಳ "ಕಪ್ಪಗಲ್ಲು ನಾಟಕೋತ್ಸವ " ಹಮ್ಮಿಕೊಳ್ಳಲಾಗಿದೆ ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದರು.
ಜೊತೆಗೆ ನಮ್ಮದೇ ಜಿಲ್ಲೆಯ ಯುವನಟ ನಿರ್ದೇಶಕ ಸಿರಿಗೇರಿ ಮಂಜುನಾಥ ಅವರ ಧಾತ್ರಿ ರಂಗಸಂಸ್ಥೆಯ ನಗೆನಾಟಕವೂ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.
ಕಳೆದ ವರ್ಷದಿಂದ ಕಪ್ಪಗಲ್ಲು ನಾಟಕೋತ್ಸವಕ್ಕೆ ಚಾಲನೆ ನೀಡಲಾಗಿದೆ. ಈ ಬಾರಿ ಎರಡನೇ ನಾಟಕೋತ್ಸವ. ಗ್ರಾಪಂ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಪ್ರತಿವರ್ಷವೂ ನಾಟಕೋತ್ಸವ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.ಗ್ರಾಮದ ಬಯಲು ರಂಗಮಂದಿರ ಇತ್ತೀಚೆಗೆ ನವೀಕೃತಗೊಂಡಿದೆ. ನಮ್ಮ ನಾಟಕೋತ್ಸವಕ್ಕೆ ಅನುಕೂಲವಾಗುವಂತೆ ವಿಶಾಲ ರಂಗಸ್ಥಳವನ್ನು ನಾಡಿನ ಹೆಸರಾಂತ ರಂಗಕರ್ಮಿ ಶೇಖ್ ಮಾಸ್ತರ ಅವರ ವಿಜಯಪುರದ ಕಂಪನಿ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ಲು ಇವರು ರಂಗತೋರಣಕ್ಕಾಗಿ ನಿರ್ಮಿಸಿಕೊಡಲಿದ್ದಾರೆ ಎಂದು ತಿಳಿಸಿದರು.
ಮಂಜಮ್ಮ ಜೋಗತಿ ಉದ್ಘಾಟನೆ:ಕಪ್ಪಗಲ್ಲು ಗ್ರಾಮದ ಬಯಲು ರಂಗಮಂದಿರದಲ್ಲಿ ಸೆ.5ರಂದು ಸಂಜೆ 6 ಗಂಟೆಗೆ ನಡೆಯಲಿರುವ ‘ಕಪ್ಪಗಲ್ಲು ನಾಟಕೋತ್ಸವ’ವನ್ನು ನಾಡಿನ ಹೆಮ್ಮೆಯ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಉದ್ಘಾಟಿಸಲಿದ್ದಾರೆ. ನಾಟಕೋತ್ಸವದ ಮೊದಲ ದಿನ ಧಾತ್ರಿ ರಂಗ ಸಂಸ್ಥೆ ಸಿರಿಗೇರಿಯ ಜನಪ್ರಿಯ ನಗೆನಾಟಕ ‘ಶ್ರೀಕೃಷ್ಣ ಸಂಧಾನ’ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ. ಎ.ಎನ್. ಅಶ್ವಥ್ ರಚನೆಯ ಈ ನಾಟಕವನ್ನು ದಾವಣಗೆರೆಯ ಎಚ್.ಎನ್.ಭೀಮೇಶ ನಿರ್ದೇಶಿಸಿದ್ದಾರೆ.
ಸೆ.6ರಂದು ‘ಗಡಗಿ ಜ್ವಾಕಿ ತಂಗಿ’ ನಾಟಕ ಪ್ರದರ್ಶನವಿದೆ. ಸೆ.7ರಂದು ಗೌರಿ-ಗಣೇಶ ಹಬ್ಬದ ಪ್ರಯುಕ್ತ "ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ " ನಾಟಕ ಪ್ರದರ್ಶನವಿದೆ.ನಾಟಕೋತ್ಸವದ ಕೊನೆ ದಿನವಾದ ಸೆ.8ರಂದು ಗದುಗಿನ ಪುಟ್ಟರಾಜ ಗವಾಯಿಗಳ ಸಂಸ್ಥೆಯ ಮತ್ತೊಂದು ಜಯಭೇರಿ ನಾಟಕ ‘ಮುದುಕನ ಮದುವೆ’ ನಡೆಯಲಿದೆ ಎಂದು ತಿಳಿಸಿದರು.
ನಾಟಕೋತ್ಸವದ ಸಂಚಾಲಕ ಅನಿಲ್‌ಕುಮಾರ್ ಅಂಗಡಿ ಹಾಗೂ ಅಡವಿಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.ಬಳ್ಳಾರಿಯಲ್ಲಿ ಗುರುವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಕಪ್ಪಗಲ್ಲು ನಾಟಕೋತ್ಸವದ ಆಹ್ವಾನಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.