ಕುಮಟಾ: ಕರಾಟೆಯನ್ನು ಕಲೆಯಾಗಿ ಮಾತ್ರವಲ್ಲದೇ ಕ್ರೀಡೆಯಾಗಿಯೂ ಸರ್ಕಾರವೂ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪ್ರೋತ್ಸಾಹ ಕೊಡುತ್ತಿದೆ. ಸ್ವಯಂ ರಕ್ಷಣೆ ಮಾಡಿಕೊಳ್ಳುವ ಕರಾಟೆಯು ಹೆಣ್ಣುಮಕ್ಕಳಿಗೆ ಅತಿ ಅವಶ್ಯವಾದ ಕಲೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಕರಾಟೆಯಿಂದ ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿ ಮಾತ್ರವಲ್ಲದೇ ಆತ್ಮವಿಶ್ವಾಸದ ಸದೃಢ ವ್ಯಕ್ತಿತ್ವ ಗಳಿಸಬಹುದಾಗಿದೆ. ನಮ್ಮಕ್ಷೇತ್ರದಲ್ಲೂ ಶಿಕ್ಷಣ ಹಾಗೂ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿ ಹಲವಾರು ರಾಜ್ಯಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಆ ದಿಸೆಯಲ್ಲಿ ಪ್ರೇರೇಪಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಉಡುಪಿ ಪಿಯು ಉಪನಿರ್ದೇಶಕ ಸತೀಶ ನಾಯ್ಕ ಮಾತನಾಡಿ, ರಾಜ್ಯಮಟ್ಟದ ಕ್ರೀಡಾಕೂಟಗಳು ಇಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ಆಯೋಜನೆಗೊಂಡಿರುವುದು ಗಮನಾರ್ಹ. ಕ್ರೀಡಾಳುಗಳು ಉತ್ತಮವಾಗಿ ಆಡಿ ಸಾಧನೆ ಮಾಡಬೇಕು ಎಂದರು.ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಭಾಸ್ಕರ ಹೆಗಡೆ ಮಾತನಾಡಿ, ಇಂಥ ಕ್ರೀಡಾಕೂಟಗಳು ಕ್ರೀಡಾಳುಗಳಿಗೆ ಪ್ರತಿಭೆ ಹಾಗೂ ಕ್ರೀಡಾ ಸ್ಫೂರ್ತಿಯನ್ನೂ ಪ್ರದರ್ಶಿಸಲು ಸೂಕ್ತ ವೇದಿಕೆಯಾಗಿದೆ ಎಂದರು.
ಜಿಲ್ಲಾ ಕ್ರೀಡಾ ಸಂಯೋಜಕ ಪ್ರಶಾಂತ ರಾಣೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಿಂಚನಾ ಸಂಗಡಿಗರಿಂದ ನಾಡಗೀತೆ ಹಾಗೂ ವೆಲೆನ್ಸಿಯಾ ಸಂಗಡಿಗರಿಂದ ಸ್ವಾಗತಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಆರ್.ಟಿ. ನಾಯಕ ಸ್ವಾಗತಿಸಿದರು. ಪ್ರೊ. ರೇಣುಕಾ ಹೆಗಡೆ ಹಾಗೂ ಪ್ರೊ. ಗಣೇಶ ಭಟ್ಟ ನಿರೂಪಿಸಿದರು. ಬಾಡ ಪಿಯು ಕಾಲೇಜು ಪ್ರಾಚಾರ್ಯ ಮೋಹನ ವಿ. ನಾಯಕ ವಂದಿಸಿದರು. ಬಳಿಕ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳು ಕರಾಟೆ ಕ್ರೀಡಾಕೂಟದಲ್ಲಿ ಗೆಲುವಿಗಾಗಿ ಸೆಣಸಾಡಿದರು.