ನಗರದ ಪ್ರಮುಖ ವೃತ್ತಗಳನ್ನು ಸೌಂದರ್ಯೀಕರಣದ ವೇಳೆ ಭಕ್ತ ಕನಕದಾಸ ಸರ್ಕಲ್ (ಕನಕಪುರ ವೃತ್ತ)ನಲ್ಲಿ ಸಂತ ಶ್ರೇಷ್ಠ ಭಕ್ತ ಕನಕದಾಸರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಪ್ರಮುಖ ವೃತ್ತಗಳನ್ನು ಸೌಂದರ್ಯೀಕರಣದ ವೇಳೆ ಭಕ್ತ ಕನಕದಾಸ ಸರ್ಕಲ್ (ಕನಕಪುರ ವೃತ್ತ)ನಲ್ಲಿ ಸಂತ ಶ್ರೇಷ್ಠ ಭಕ್ತ ಕನಕದಾಸರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಐಜೂರು ವೃತ್ತ, ವಾಟರ್ ಟ್ಯಾಂಕ್ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳನ್ನು ಸುಮಾರು 20 ಕೋಟಿ ರುಪಾಯಿ ವೆಚ್ಚದಲ್ಲಿ ಸೌಂದರ್ಯೀಕರಣ ಮಾಡಲಾಗುವುದು. ಮುಂದಿನ ಆರು ತಿಂಗಳೊಳಗೆ ಕನಕಪುರ ವೃತ್ತದಲ್ಲಿ ಕನಕದಾಸರ ಪ್ರತಿಮೆ ಪ್ರತಿಷ್ಠಾಪಿಸುವ ಮೂಲಕ ಸೌಂದರ್ಯೀಕರಣ ಮಾಡಲಾಗುವುದು ಎಂದರು.
ಸಮುದಾಯ ಭವನ ನಿರ್ಮಾಣದ ವಿಚಾರದಲ್ಲಿಯೂ ಸಮುದಾಯದವರು ಆಸಕ್ತಿ ವಹಿಸಬೇಕು. ನಿವೇಶನ ಹಾಗೂ ಯೋಜನೆ ಸಿದ್ಧಪಡಿಸಿ ಮುಂದೆ ಬಂದರೆ, 2 ಕೋಟಿ ರುಪಾಯಿ ಅನುದಾನ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಹಕರಿಸುವುದಾಗಿ ಭರವಸೆ ನೀಡಿದರು.ಜಗತ್ತಿನಲ್ಲಿ ಅನೇಕರು ಹುಟ್ಟಿ ಮರೆಯಾಗುತ್ತಾರೆ. ಆದರೆ ಕೆಲವರು ತಮ್ಮ ಆದರ್ಶ, ಸಾಧನೆ ಹಾಗೂ ಸಮಾಜಮುಖಿ ಚಿಂತನೆಗಳಿಂದ ಇತಿಹಾಸದ ಪುಟಗಳಲ್ಲಿ ಅಮರರಾಗುತ್ತಾರೆ. ಅಂತಹ ಮಹನೀಯರಲ್ಲಿ ಭಕ್ತ ಕನಕದಾಸರು ಪ್ರಮುಖರು. ಅವರು ಸಮಾಜದಲ್ಲಿ ಜ್ಯೋತಿಯಾಗಿ ಬೆಳಗಿದವರು ಎಂದರು.
ಭಕ್ತಿಗೆ ಮತ್ತು ಸತ್ಯಕ್ಕೆ ಭಗವಂತನೂ ಒಲಿಯುತ್ತಾನೆ ಎಂಬುದಕ್ಕೆ ಕನಕದಾಸರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣ ಪರಮಾತ್ಮರೇ ಅವರತ್ತ ತಿರುಗಿದ ಐತಿಹಾಸಿಕ ಪ್ರಸಂಗ ಕನಕನ ಕಿಂಡಿಯ ಮೂಲಕ ಇಂದಿಗೂ ಸ್ಮರಣೀಯವಾಗಿದೆ. ಕನಕದಾಸರು ಕೇವಲ ದಾಸರಾಗಿರದೆ, ಕೀರ್ತನೆಗಳ ಮೂಲಕ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಸಂದೇಶ ಸಾರಿದ ಮಹಾನ್ ಚಿಂತಕರಾಗಿದ್ದರು. ''''''''''''''''ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ಮೂಲವನ್ನರಿಯಿರಿ'''''''''''''''' ಎಂಬ ಅವರ ವಚನದ ಆಶಯ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.ಮೇಲು-ಕೀಳು ಎಂಬುದು ಮನುಷ್ಯ ಸೃಷ್ಟಿಸಿ ಕೊಂಡಿದ್ದು, ನಾನು ಎಂಬ ಅಹಂಕಾರ ಬಿಟ್ಟರೆ ಮಾತ್ರ ಮೋಕ್ಷ ಮತ್ತು ಸಮಾಜದ ಉದ್ಧಾರ ಸಾಧ್ಯ ಎಂದು ಪ್ರತಿಪಾದಿಸಿದ ದಾರ್ಶನಿಕರು ಕನಕದಾಸರು.
ಶ್ರಮಜೀವಿಗಳು ಹಾಗೂ ಬಡವರ ಪರವಾಗಿ ಧ್ವನಿ ಎತ್ತಿದ ಮೊದಲ ಕ್ರಾಂತಿಕಾರಿ ಕವಿ ಕನಕದಾಸರು ಎಂದು ಬಣ್ಣಿಸಿದರು.ಭಕ್ತ ಕನಕದಾಸರು ಕಂಡ ಸಮ ಸಮಾಜದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮತ್ತು ನಾನು ಶಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕ್ಷೇತ್ರದ ಪ್ರತಿಯೊಬ್ಬ ಬಡವ, ಶೋಷಿತ ಮತ್ತು ಶ್ರಮಿಕ ವರ್ಗದವರಿಗೆ ಶಿಕ್ಷಣ, ಉದ್ಯೋಗ ಮತ್ತು ಮೂಲಭೂತ ಸೌಕರ್ಯಗಳನ್ನು ತಲುಪಿಸಿ ಕನಕದಾಸರಿಗೆ ನಿಜವಾದ ಗೌರವ ಸಲ್ಲಿಸುತ್ತಿದ್ದೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.