ದಾಸ ಶ್ರೇಷ್ಠರಾದ ಕನಕದಾಸರು ತಮ್ಮ ಕೀರ್ತನೆಗಳು‌ ಹಾಗೂ ರಚನೆಗಳ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆ ಹಾಗೂ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ. ಬಾಲಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ದಾಸ ಶ್ರೇಷ್ಠರಾದ ಕನಕದಾಸರು ತಮ್ಮ ಕೀರ್ತನೆಗಳು‌ ಹಾಗೂ ರಚನೆಗಳ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆ ಹಾಗೂ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ. ಬಾಲಕೃಷ್ಣ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂರಾರು ಕೀರ್ತನೆಗಳು ಹಾಗೂ ರಾಮ ಧಾನ್ಯ ಚರಿತ್ರೆಯಂತಹ ಕೃತಿಗಳ ಮೂಲಕ ಜಾತಿ ಪದ್ಧತಿ ಹಾಗೂ ಮೇಲೂ ಕೀಳು ಎಂಬ ಭಾವನೆಗಳನ್ನು ಸಮಾಜದಿಂದ ತೊಡೆದುಹಾಕುವ ಸಂದೇಶ ಸಾರಿದರು. ಅವರಂತೆಯೇ ಜಾತಿಯ ಪಟ್ಟಗಳನ್ನು ಬದಿಗಿಟ್ಟು ಎಲ್ಲರೂ ಸಮಾನರು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಕಿವಿಮಾತು ಹೇಳಿದರು.

12ನೇ ಶತಮಾನದಲ್ಲಿ ಬಸವಣ್ಣನವರು ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರೆ, 16ನೇ ಶತಮಾನದಲ್ಲಿ ದಾಸರು ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಕನಕದಾಸರ ಸಮಾನತೆಯ ಚಿಂತನೆಗಳು ಸಮಾಜದ ಮೇಲೆ ಪ್ರಭಾವ ಬೀರಿವೆ. ಅದು ಡಾ.ಅಂಬೇಡ್ಕರ್ ಅವರು ಸಂವಿಧಾನದ ರಚನೆಯ ಆಶಯಕ್ಕೂ ಬಲ ತುಂಬಿದ್ದಾರೆ. ಸೂರ್ಯ, ಚಂದ್ರ ಇರುವವರೆಗೂ ಇಂತಹ ಮಹನೀಯರನ್ನು ಸ್ಮರಿಸಬೇಕು ಎಂದು ತಿಳಿಸಿದರು.

ಜಾತಿ ತಾರತಮ್ಯ ರಹಿತ ಸಮ ಸಮಾಜ ನಿರ್ಮಾಣವಾಗಬೇಕೆನ್ನುವುದು ಕನಕದಾಸರ ಆಶಯವಾಗಿತ್ತು. ಅಂತಹ ಮಹಾನ್ ಸಂತರು ಹಾಗೂ ಸಮಾಜ ಸುಧಾರಕರ ಜಯಂತಿಗಳು ಯಾವುದೇ ಒಂದು ಜಾತಿಗೆ ಸೀಮಿತವಲ್ಲ, ಸರ್ವ ಸಮುದಾಯದ ಜನರು ಒಗ್ಗೂಡಿ ಆಚರಿಸುವ ಕಾರ್ಯಕ್ರಮಗಳಾಗಿವೆ ಎಂದವರು ಹೇಳಿದರು.

ಸಮಾಜದಲ್ಲಿ ಸಮಾನತೆಯ ಪರಿಕಲ್ಪನೆಯನ್ನು ಬಿತ್ತಿದ ಅನೇಕ ಮಹನೀಯರು ಸುಧಾರಣೆಗಾಗಿ ಶ್ರಮಿಸುವ ಸಂದರ್ಭದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಆ ಮಹನೀಯರ ಜಯಂತಿಗಳು ಅವರ ಆದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ವೇದಿಕೆಗಳಾಗಿವೆ ಎಂದು ಬಾಲಕೃಷ್ಣ ತಿಳಿಸಿದರು.

ಉಪನ್ಯಾಸ ನೀಡಿದ ಇತಿಹಾಸಕಾರ ಡಾ.ಯು.ಎಂ.ರವಿ , ಕನಕದಾಸರು ನಾಡು ಕಂಡ ಮಹಾನ್ ಸಮಾಜ ಸುಧಾರಕ ಹಾಗೂ 16ನೇ ಶತಮಾನದ ದಾಸ ಚಳವಳಿಯ ಪ್ರಮುಖ ನೇತಾರರಾಗಿದ್ದರು. ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ 316 ಕೀರ್ತನೆಗಳು, ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆ ಕೃತಿಗಳನ್ನು ರಚಿಸುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ತಮ್ಮ ಜ್ಞಾನಧಾರೆಯನ್ನು ಕೀರ್ತನೆಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದರು ಎಂದರು.

ಆ ಕಾಲದಲ್ಲಿ ಶೈವ ಮತ್ತು ವೈಷ್ಣವ ಪಂಥಗಳ ನಡುವಿನ ಸಂಘರ್ಷದಿಂದ ಸಮಾಜದಲ್ಲಿ ಅಸಮತೋಲನ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಎಂಬ ವಿಶ್ವಮಾನವ ತತ್ವವನ್ನು ಸಾರಿದರು. ಮೇಲೂ ಕೀಳು ಎಂಬ ಭೇದಭಾವವನ್ನು ಹೋಗಲಾಡಿಸಲು ಪ್ರಯತ್ನಿಸಿದರು ಎಂದು ಹೇಳಿದರು.

ಪ್ರಶ್ನಿಸುವ ಮನೋಭಾವದ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಕನಕದಾಸರ ಕೀರ್ತನೆಗಳು ಇಂದಿಗೂ ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಸಾಹಿತ್ಯ ಹಾಗೂ ಸಾತ್ವಿಕ ಗ್ರಂಥಗಳಾಗಿವೆ ಎಂದು ತಿಳಿಸಿದರು.

ತಾಲೂಕು ಕುರುಬರ ಸಂಘದ ಅಧ್ಯಕ್ಷ ರೇಣುಕಪ್ಪ ಮಾತನಾಡಿ, ಮಹನೀಯರ ಜಯಂತಿಗಳು ಜಾತಿ ವ್ಯವಸ್ಥೆಗೆ ಸೀಮಿತವಾಗಬಾರದು. ರಾಮನಗರದಲ್ಲಿ ಕನಕದಾಸರ ಪ್ರತಿಮೆ ಹಾಗೂ ವೃತ್ತ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಸತೀಶ್, ಮುಖಂಡರಾದ ಸಿ.ಎನ್.ಆರ್. ವೆಂಕಟೇಶ್, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಯುವಸೇನೆಯ ಅಧ್ಯಕ್ಷ ಬಿ.ಆರ್.ನಾಗಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.