ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾರ್ಯಕರ್ತರು ಕಮಲ್ ಹಾಸನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಾಷಾ ಜ್ಞಾನವಿಲ್ಲದೆ ಬಾಯಿಗೆ ಬಂದಂತೆ ಮಾತನಾಡಿ ಪ್ರಚಾರ ಪಡೆಯುತ್ತಿರುವ ಕಮಲ್ ಹಾಸನ್‌ಗೆ ತಕ್ಕ ಪಾಠ ಕಲಿಸುವಂತೆ ಒತ್ತಾಯಿಸಿದರು.
ಕನ್ನಡದಿಂದಲೇ ತಮಿಳು ಪದಗಳು ಹುಟ್ಟಿಕೊಂಡಿವೆ ಎಂದು ವಿದ್ವಾಂಸರೇ ಒಪ್ಪಿಕೊಂಡಿದ್ದಾರೆ. ವಿಶ್ವದ ಸುಂದರ ಲಿಪಿ ಎಂಬ ಮನ್ನಣೆಯೂ ಕನ್ನಡಕ್ಕೆ ಸಿಕ್ಕಿದೆ. ಇವೆಲ್ಲದರ ಅರಿವೇ ಇಲ್ಲದೆ ತಮಿಳಿನಿಂದ ಕನ್ನಡ ಹುಟ್ಟಿತು ಎಂದೇಳಿ ಮೌನಕ್ಕೆ ಶರಣಾದ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಹೇಗೆ ಎನ್ನುವುದನ್ನು ಸಾಕ್ಷ್ಯಾಧಾರಗಳ ಮೂಲಕ ನಿರೂಪಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಕುಟುಕಿದರು.ಕನ್ನಡ ಭಾಷೆಗೆ ಅವಮಾನ ಮಾಡಿರುವ ಕಮಲ್ ಹಾಸನ್ ಕ್ಷಮೆಗೆ ಅರ್ಹರೇ ಅಲ್ಲ. ಮೊಂಡುತನ, ಭಂಡತನದಿಂದಲೇ ಮುನ್ನಡೆದಿದ್ದಾರೆ. ಅವರ ಎಲ್ಲಾ ಸಿನಿಮಾಗಳನ್ನು ಕನ್ನಡಿಗರು ಬಹಿಷ್ಕರಿಸುವ ಮೂಲಕ ಬಿಸಿ ಮುಟ್ಟಿಸುವಂತೆ ಆಗ್ರಹಿಸುವುದಾಗಿ ಹೇಳಿದರು.
ಕನ್ನಡದ ಎಲ್ಲಾ ಟಿವಿ ವಾಹಿನಿಗಳು, ಯೂಟ್ಯೂಬ್, ಸಾಮಾಜಿಕ ಜಾಲ ತಾಣಗಳಲ್ಲಿ ತಮಿಳ್ ಹಾಸನಬ್ ಸಿನಿಮಾ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು. ಚಿತ್ರಮಂದಿರಗಳು ಚಿತ್ರ ಪ್ರದರ್ಶನ ಮಾಡುವ ದುಸ್ಸಾಹಸ ಮಾಡಿದರೆ ಮುತ್ತಿಗೆ, ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭನೆಯಲ್ಲಿ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಕಲಾವಿದ ಪ್ರಕಾಶ್, ಸೋಮಶೇಖರ್, ಮಾದೇಗೌಡ, ಕೆ.ಬಿ.ಜಯಶಂಕರ, ಎಸ್.ಎನ್.ಪ್ರವೀಣ್, ಶೇಖರ್, ಸಿದ್ದೇಗೌಡ, ಸುನಿಲ್ ಇತರರಿದ್ದರು.