ಮೇದರಬೀದಿಯಲ್ಲಿ ಕರಿಯಮ್ಮ- ಅಂತರಘಟ್ಟಮ್ಮ ಜಾತ್ರೆ ಪ್ರಾರಂಭ

KannadaprabhaNewsNetwork |  
Published : May 12, 2024, 01:20 AM IST
 ನರಸಿಂಹರಾಜಪುರ ಪಟ್ಟಣದ ಮೇದರಬೀದಿಯಲ್ಲಿ ಶ್ರೀ ಅಂತರಘಟ್ಟಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು | Kannada Prabha

ಸಾರಾಂಶ

ನರಸಿಂಹರಾಜಪುರಪಟ್ಟಣದ ಮೇದರ ಬೀದಿಯ ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ಅಂತರಘಟ್ಟಮ್ಮ ದೇವಿ ಜಾತ್ರಾ ಮಹೋತ್ಸವ ಮೇ 9 ರಿಂದ ಪ್ರಾರಂಭವಾಗಿದ್ದು ಮೇ 14 ರವರೆಗೆ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ಎಸ್‌.ಪ್ರವೀಣ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣದ ಮೇದರ ಬೀದಿಯ ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ಅಂತರಘಟ್ಟಮ್ಮ ದೇವಿ ಜಾತ್ರಾ ಮಹೋತ್ಸವ ಮೇ 9 ರಿಂದ ಪ್ರಾರಂಭವಾಗಿದ್ದು ಮೇ 14 ರವರೆಗೆ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ಎಸ್‌.ಪ್ರವೀಣ್‌ ತಿಳಿಸಿದ್ದಾರೆ.

ಮೇ 9 ರ ಗುರುವಾರ ದೇಗುಲದಲ್ಲಿ ಬೆಳಿಗ್ಗೆ ಗಣಪತಿ ಹೋಮ, ನವಗ್ರಹ ಪೂಜೆ, ಗಂಗಾ ಪೂಜೆ, ರುದ್ರಾಭಿಷೇಕ, ದುರ್ಗಾ ಹೋಮ ನಡೆಯಿತು. ರಾತ್ರಿ ಅಂತರಘಟ್ಟಮ್ಮ ದೇವಿಯನ್ನು ಭಕ್ತರ ಮನೆಗೆ ( ಬಿಡದಿ ಮನೆ) ಕರೆ ತರಲಾಯಿತು. ಮೇ 10 ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಅಮ್ಮನವರು ಗಂಗಾ ಸ್ನಾನಕ್ಕಾಗಿ ಸಂಕಿನಕೊಪ್ಪದ ಭದ್ರಾ ಹಿನ್ನೀರಿಗೆ ತೆರಳಿ ಅಲ್ಲಿ ಅಮ್ಮನವರಿಗೆ ಗಂಗಾ ಸ್ನಾನ, ಪುಣ್ಯಾಹ ಹಾಗೂ 101 ಪೂಜೆ ಸಲ್ಲಿಸಲಾಯಿತು. ನಂತರ ಶ್ರೀ ಅಂತರಘಟ್ಟಮ್ಮನವರನ್ನು ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ತರಲಾಯಿತು.

ಶನಿವಾರ ರಾತ್ರಿ ದಂದಿ ಸೇವೆಯೊಂದಿಗೆ ಅಮ್ಮನವರನ್ನು ರಾಜಬೀದಿಯಲ್ಲಿ ಹೂವಿನ ಅಲಂಕಾರದೊಂದಿಗೆ ಹಾಗೂ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಹೊರಟು ಶ್ರೀ ಕೊಟ್ಟೂರು ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳಾರತಿ ಮುಗಿಸಿಕೊಂಡು ಅಮ್ಮನವರನ್ನು ಮೇದರಬೀದಿಗೆ ಕರೆತರಲಾಯಿತು. ರಾತ್ರಿ ಕೆಂಡಾರ್ಚನೆ ವಿಧಿ ವಿಧಾನದೊಂದಿಗೆ ಕೆಂಡಾರ್ಚನೆಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಬೆಳಗಿನ ಜಾವ ಗಂಗಾ ಪೂಜೆಗೆ ತೆರಳಿ ಬ್ರಾಹ್ಮಿ ಮುಹೂರ್ತದಲ್ಲಿ ಕೆಂಡಾರ್ಚನೆ ನಡೆಯಿತು.

ಭಾನುವಾರ ಅನ್ನ ಸಂತರ್ಪಣೆ, ಅಮ್ಮನವರ ಓಕುಳಿ ಸೇವೆ ನಡೆಯಲಿದೆ. ಸಂಜೆ ವಿಶೇಷ ಭವ್ಯ ಮಂಟಪದೊಂದಿಗೆ ಸಿಡಿ ಮದ್ದಿನ ಪ್ರದರ್ಶನ, ವಾದ್ಯ ತಮಟೆ ಹಾಗೂ ಹಾಸ್ಯ ಗೊಂಬೆ, ವೀರಗಾಸೆ ತಂಡದ ಜೊತೆಯಲ್ಲಿ ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆ ನಡೆಯಲಿದೆ. ಸೋಮವಾರ ರಾತ್ರಿ ಶ್ರೀ ಕೊಲ್ಲಾರೇಶ್ವರಿ ದೇವಿ, ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಅಂತರ ಘಟ್ಟಮ್ಮ ದೇವಿಗೆ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಮಂಗಳವಾರ ಬೆಳಿಗ್ಗೆ ಶ್ರೀ ಅಂತರಘಟ್ಟಮ್ಮ ದೇವಿ ಮತ್ತು ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಮತ್ತು ಹರಕೆ ಸೇವೆ ಮಾಡಲಾಗುತ್ತದೆ. ಎಲ್ಲಾ ಭಕ್ತಾಧಿಗಳು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ