ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಬ್ರಹ್ಮಲಿಂಗೇಶ್ವರ ಕಾರ ಹುಣ್ಣಿಮೆ ಮಹೋತ್ಸವ ಗುರುವಾರ ವಿಜೃಂಭಣೆ ಹಾಗೂ ಹಲವು ಸಂಪ್ರದಾಯಬದ್ಧವಾಗಿ ನಡೆಯಿತು.ಗ್ರಾಮದ ವೈಶಿಷ್ಟ್ಯವಾಗಿರುವ ಕಾರ ಹುಣ್ಣಿಮೆ ಹಬ್ಬದ ಮೊದಲ ದಿನ ಮಂಗಳವಾರ ಹೊನ್ನುಗ್ಗಿ, ಬುಧವಾರ ದೊಡ್ಡಬಂಡಿ ಉತ್ಸವ, ಗುರುವಾರ ಕರಕ್ಕಿ ಬಂಡಿ ಉತ್ಸವ ಅದ್ಧೂರಿಯಾಗಿ ನಡೆದವು.
ಗುರುವಾರ ಬೆಳಗ್ಗೆ ನಡೆದ ಸಣ್ಣ ಬಂಡಿ ಓಟಕ್ಕೆ ಸಣ್ಣ ಕರುಗಳನ್ನು ಹೂಡಲಾಗಿತ್ತು. ಅತ್ಯಾಕರ್ಷಕ ಅಲಂಕೃತ ಸಣ್ಣ ಎತ್ತುಗಳು ಓಡುವ ನೋಟ ಎಲ್ಲರ ಗಮನ ಸೆಳೆಯಿತು.ದೊಡ್ಡ ಎತ್ತುಗಳನ್ನು ಹೂಡಿ ಓಡಿಸುವ ಬಂಡಿಗೆ ದುಂಡಿತತ್ತರ ಬಂಡಿ ಎನ್ನಲಾಗುತ್ತದೆ. ಈ ಬಂಡಿ ಮಧ್ಯಾಹ್ನ ನಡೆಯಿತು. ವಿವಿಧ ಬಗೆಯ ಎತ್ತುಗಳನ್ನು ಕಟ್ಟಿ ಓಡಿಸಲಾಯಿತು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವಗಳೊಂದಿಗೆ ವಿವಿಧ ಅಲಂಕೃತ ವಸ್ತುಗಳು, ಬಲೂನ್‌ಗಳಿಂದ ಸಿಂಗರಿಸಿದ ಎತ್ತುಗಳ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು.ಬಳಿಕ ನಡೆದ ಕರಕ್ಕಿಬಟ್ಟು ಎಂದು ಕರೆಯಲ್ಪಡುವ ಕೊನೆಯ ಎರಡು ಬಂಡಿಗಳ ಓಟ ಆಕರ್ಷಣೀಯವಾಗಿತ್ತು. ಬಂಡಿಯನ್ನು ಎಳೆದುಕೊಂಡು ಎತ್ತುಗಳು ಓಡುತ್ತಿದ್ದರೆ ಇನ್ನೊಂದೆಡೆ ಯುವಕರು ಕೇಕೆ, ಶಿಳ್ಳೆ ಹಾಕುತ್ತ ಬಂಡಿಯ ವೇಗ ಹೆಚ್ಚಿಸಲು ಎತ್ತುಗಳನ್ನು ಹುರಿದುಂಬಿಸುತ್ತಿದ್ದ ದೃಶ್ಯ ರೋಮಾಂಚನಗೊಳಿಸಿತು. ಈ ವೈಭವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಜನರು ಆಗಮಿಸಿದ್ದರು.ಬೆಳಗ್ಗೆಯಿಂದ ರಾತ್ರಿ 10ರವರೆಗೂ ಶ್ರೀ ಬ್ರಹ್ಮದೇವರಿಗೆ ಭಕ್ತರಿಂದ ಹಣ್ಣು- ಕಾಯಿ ಸೇವೆ ನಡೆಯಿತು. ಬೇರೆ ಬೇರೆ ಭಾಗದಿಂದ ಭಕ್ತರು ಆಗಮಿಸಿದ್ದರು. ನಂತರ ರಾತ್ರಿ ಬ್ರಹ್ಮದೇವರಿಗೆ ಹೂರಣ, ತುಪ್ಪ ಉಣ್ಣಿಸುವ ಕಾರ್ಯಕ್ರಮ ವೈಭವದಿಂದ ನಡೆಯಿತು. ವೀರಗಾರರು ಕಣ್ಣಿಗೆ ಬಟ್ಟೆ ಕಟ್ಟಿ ದೇವರಿಗೆ ಹೂರಣ ತಿನ್ನಿಸುವುದು ಇದರ ವಿಶೇಷ. ಹೂರಣ ನೇವೈದ್ಯ ನೀಡುವ ಮೂಲಕ ಹಬ್ಬದ ಸಂಭ್ರಮ ತೆರೆ ಕಂಡಿತು. ನಾಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗ ಸಂಗಮವನ್ನು ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಜೂ. 21ರಂದು ಬೆಳಗ್ಗೆ 6.30ಕ್ಕೆ ನಗರದ ರಜನಿ ಸಭಾಂಗಣದಲ್ಲಿ ಜರುಗಲಿದೆ.ಅಂದು ಬೆಳಗ್ಗೆ 6.15ಕ್ಕೆ ಸಾಮೂಹಿಕ ಯೋಗ ಕಾರ್ಯಕ್ರಮ ಜರುಗಲಿದ್ದು, ಸಾರ್ವಜನಿಕರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಯೋಗಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಿ.ಸಿ. ನಿಡಗುಂದಿ ಅವರು ತಿಳಿಸಿದ್ದಾರೆ.