ಭಾನುವಾರ ರಾತ್ರಿ ಹೃದಯಾಘಾತ । ಸೋಮವಾರ ಸಂಜೆ ಕೊನೆಯುಸಿರೆದ ರಾಜೇಸಾಬ್
ರಾತ್ರಿಯೇ ಅವರ ಕುಟುಂಬಕ್ಕೆ ಶೈನ್ ಶೆಟ್ಟಿ ಮಾಹಿತಿ ಕೊಟ್ಟಿದ್ದರು. ಅವರ ಮಕ್ಕಳು ಕುಟುಂಬಸ್ಥರು ಸೋಮವಾರ ಧಾವಿಸಿ ಬಂದಿದ್ದರು. ರಾತ್ರಿಯೇ ಅವರ ಪಾರ್ಥಿವ ಶರೀರವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು.ತಮ್ಮ ಆತ್ಮೀಯ ಹಿರಿಯ ನಟನನ್ನು ಕಳೆದುಕೊಂಡು ಶೈನ್ ಶೆಟ್ಟಿ ಮತ್ತು ಇಡೀ ಸಿನೆಮಾ ತಂಡ ಸೋಮವಾರ ಆಸ್ಪತ್ರೆಯಲ್ಲಿ ಕಣ್ಣೀರು ಹಾಕಿತ್ತು. ನಟ ಶೈನ್ ಶೆಟ್ಟಿ ಮತ್ತು ರಾಜು ತಾಳಿಕೋಟೆ ಬಿಗ್‌ಬಾಸ್ ಸೀಸನ್ 7ರಲ್ಲಿ ಜೊತೆಗಿದ್ದರು, ಅಲ್ಲಿಂದ ಅವರಿಬ್ಬರ ಪರಿಚಯವಾಗಿತ್ತು. ಆದ್ದರಿಂದ ತಾವು ನಿರ್ಮಿಸಿ ನಟಿಸುತ್ತಿರುವ ಸಿನಿಮಾದಲ್ಲಿ ಅವರಿಗಾಗಿಯೇ ಪ್ರಮುಖ ಪಾತ್ರ, ಡೈಲಾಗ್‌ಗಳನ್ನು ಬರೆದಿದ್ದಾಗಿ ಶೈನ್ ಶೆಟ್ಟಿ ಹೇಳಿದ್ದಾರೆ.ಅವರಿಗೆ ಒಟ್ಟು 40 ದಿನ ಶೂಟಿಂಗ್‌ಗೆ ಗೊತ್ತು ಮಾಡಿದ್ದೆವು. ಅ.10ರಿಂದ ಹೆಬ್ರಿಯ ಕಬ್ಬಿನಾಲೆ ಜಲಪಾತ ಪರಿಸರದಲ್ಲಿ ಮೂರು ದಿನದ ಶೂಟಿಂಗ್ ಮುಗಿಸಿದ್ದೇವೆ, 26ರವರೆಗೆ ಇಲ್ಲಿಯೇ ಶೂಟಿಂಗ್ ಇತ್ತು. ಮೀನು ತಿನ್ನಬೇಕು ಸುತ್ತಾಡಬೇಕು ಎಂದು ಶೂಟಿಂಗ್ ಶುರುವಾಗ ಮೊದಲೇ ಉಡುಪಿಗೆ ಬಂದಿದ್ದರು, ಗೆಳೆಯರ ಜೊತೆ ಬೇರೆಬೇರೆ ಕಡೆ ಸುತ್ತಾಡಿದ್ದರು. ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು, ನಿನಗೋಸ್ಕರ ಈ ಚಿತ್ರ ಒಪ್ಪಿಕೊಂಡಿದ್ದೇನೆ ಎಂದೆಲ್ಲಾ ಹೇಳುತ್ತಿದ್ದರು ಎಂದು ಶೈನ್ ಶೆಟ್ಟಿ ನೆನಪಿಸಿಕೊಂಡರು.ಕಾರ್ಕಳದ ಯಕ್ಷರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್ ಅವರು, ರಾಜು ತಾಳಿಕೋಟೆ ಅತ್ಯಂತ ಸಜ್ಜನ ವ್ಯಕ್ತಿಯಾಗಿದ್ದರು. ಕಂತಗಲ್ ಹನುಮಂತರಾಯ ಅವರ ಮಹಾಭಾರತ ಆಧಾರಿತ ‘ರಕ್ತರಾತ್ರಿ - ಸ್ತ್ರೀ ಪರ್ವ’ ಕಥೆಯನ್ನು ಆಧರಿಸಿ ‘ಕಂತಗಲ್ಲರ ಭಾರತ’ ನಾಟಕ ರೂಪದಲ್ಲಿ ಸಾದರಪಡಿಸುವ ಕನಸು ಅವರಿಗಿತ್ತು. ಅದರ ಕೆಲಸ ಈಗಷ್ಟೇ ಆರಂಭವಾಗಿತ್ತು. ಕೇವಲ ಆರು ದಿನಗಳ ಹಿಂದೆ ನೀನಾಸಂ ಹೆಗ್ಗೋಡಿನಲ್ಲಿ ಅವರು ನನ್ನನ್ನು ಭೇಟಿ ಮಾಡಿದ್ದರು ಎಂದು ಸ್ಮರಿಸಿದ್ದಾರೆ.ಭಾನುವಾರ ರಾತ್ರಿ 6.30ರ ತನಕ ಜೊತೆಗೆ ಶೂಟಿಂಗ್ ನಡೆಸಿದ್ದೆವು. ಸೋಮವಾರವೂ ಶೂಟಿಂಗ್ ನಡೆಯಬೇಕಿತ್ತು. ಈ ನಡುವೆ ಅವರ ಅಗಲುವಿಕೆ ಆಗಿದೆ. ಶೂಟಿಂಗ್ ನಡುವೆ ಬಿಡುವಿದ್ದಾಗ ಒಗಟುಗಳನ್ನು ಬಿಡಿಸುವ ಸವಾಲೊಡ್ಡಿ ಸದಾ ಸಕ್ರಿಯರಾಗಿರುತ್ತಿದ್ದರು ಅವರಿನ್ನು ಇಲ್ಲವೆಂದರೆ ನಂಬಲೇ ಆಗುತ್ತಿಲ್ಲ, ಎಂದು ಈ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟಿ ಮಂಜುಳಾ ಜನಾರ್ದನ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.