2027ರ ಫೆ.18-28ರವರೆಗೆ ಕಾರ್ಕಳಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ

KannadaprabhaNewsNetwork |  
Published : Apr 20, 2026, 02:00 AM IST
ಮಸ್ತಕಾಭಿಷೇಕ | Kannada Prabha

ಸಾರಾಂಶ

ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ 2027ರ ಫೆ.18ರಿಂದ 28ರವರೆಗೆ ಕಾರ್ಕಳದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ರಾಜಗುರು, ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅಧಿಕೃತವಾಗಿ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ:

ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ 2027ರ ಫೆ.18ರಿಂದ 28ರವರೆಗೆ ಕಾರ್ಕಳದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ರಾಜಗುರು, ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅಧಿಕೃತವಾಗಿ ಘೋಷಿಸಿದ್ದಾರೆ.

ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ಭಾನುವಾರ ನಡೆದ ಮಹಾಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದೇವರ ಸಾನ್ನಿಧ್ಯವನ್ನು ಸದಾ ಮನಸ್ಸಿನಲ್ಲಿ ನೆನೆಸಿಕೊಳ್ಳಬೇಕು. ಶಾಂತಿ ಮತ್ತು ಅಹಿಂಸೆಯೇ ಜೀವನದ ಮೂಲ ಮೌಲ್ಯಗಳು ಎಂದರು.

ಎಲ್ಲರ ಸಹಕಾರ ಮುಖ್ಯ:

ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ರತ್ನ ಡಾ। ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಮಹಾಮಸ್ತಕಾಭಿಷೇಕಕ್ಕೆ ಇನ್ನೂ 305 ದಿನಗಳು ಬಾಕಿ ಇವೆ. ಈ ಮಹೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಮಹಿಳೆಯರ ಸಹಕಾರದಿಂದ ಬೆಳೆದಿರುವುದು ಒಂದು ಉದಾಹರಣೆ. ಸಮಾಜವು ಸಂಕಷ್ಟಗಳನ್ನು ಎದುರಿಸಿ ಬೆಳೆದಿದೆ. ಸರ್ಕಾರದಿಂದಲೂ ಎಲ್ಲ ರೀತಿಯ ಸೌಲಭ್ಯಗಳು ಮತ್ತು ಅನುದಾನಗಳು ಲಭ್ಯವಾಗುತ್ತಿದ್ದು, ಅವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಮಹಾಮಸ್ತಕಾಭಿಷೇಕ ಕಚೇರಿ ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಅವರು, ವೇಣೂರು, ಧರ್ಮಸ್ಥಳ ಹಾಗೂ ಕಾರ್ಕಳದ ಗೊಮಟೇಶ್ವರ ಮೂರ್ತಿಯ ಮಸ್ತಕಾಭಿಷೇಕವು 21ನೇ ಶತಮಾನದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ದೇಶ-ವಿದೇಶಗಳಿಂದ ಆಗಮಿಸುವ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವುದು ನಮ್ಮ ಕರ್ತವ್ಯ. ಸಭೆಗಳಲ್ಲಿ ಸಮಯಪಾಲನೆ ಹಾಗೂ ಕಾರ್ಯ ನಿರ್ವಹಣೆಯಲ್ಲಿ ಶಿಸ್ತು ಮುಖ್ಯ ಎಂದು ಸಲಹೆ ನೀಡಿದರು.

ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಇದು ಐತಿಹಾಸಿಕ ಕ್ಷಣವಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮುದಾಯವು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದೆ. ಜಿಲ್ಲೆಯ ಅಭಿವೃದ್ಧಿಯಲ್ಲಿಯೂ ಜೈನ ಧರ್ಮದ ಪಾತ್ರ ಅಪಾರವಾಗಿದೆ. ಎಲ್ಲ ಧರ್ಮದವರೂ ಕೈಜೋಡಿಸಿ ಈ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಹಾಮಸ್ತಕಾಭಿಷೇಕವನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಬೇಕು. ಭಗವಾನ್ ಬಾಹುಬಲಿ, ವಿಶ್ವಶಾಂತಿಯ ಸಂದೇಶ ನೀಡಿದ ಮಹಾನ್ ವ್ಯಕ್ತಿ. ಕೇಂದ್ರ ಸರ್ಕಾರದಿಂದ ಮಹೋತ್ಸವಕ್ಕೆ ಅಗತ್ಯ ಸಹಕಾರವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.ಮಾತನಾಡಿ, ರಾಜ್ಯ ಸರ್ಕಾರ ನೀಡಿರುವ ಅನುದಾನಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ಈಗಾಗಲೇ 37 ಸಮಿತಿಗಳಲ್ಲಿ ಸುಮಾರು 600 ಮಂದಿ ತೊಡಗಿಸಿಕೊಂಡಿದ್ದು, ಈ ಮಹೋತ್ಸವದಿಂದ ಪ್ರವಾಸೋದ್ಯಮವೂ ಉತ್ತೇಜನ ಪಡೆಯಲಿದೆ ಎಂದರು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ತಮ್ಮ ಜೀವನದಲ್ಲಿ ನಾಲ್ಕು ಬಾರಿ ಮಹಾಮಸ್ತಕಾಭಿಷೇಕ ನೋಡುವ ಅವಕಾಶ ಸಿಕ್ಕಿರುವುದು ಪುಣ್ಯಕರ. ಆಳ್ವಾಸ್ ಸಂಸ್ಥೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಅಳದಂಗಡಿ ಪದ್ಮಪ್ರಸಾದ್ ಅಜಿಲ, ಜೀವಂಧರ ಬಲ್ಲಾಳ್, ರತ್ನಾಕರ ರಾಜ್ ಅರಸರು, ಹೆಚ್ಚುವರಿ ಎಸ್ಪಿ ಸುಧಾಕರ ನಾಯ್ಕ್, ಶಶಿಪ್ರಸಾದ್, ಗುಣಪಾಲ ಕಡಂಬ, ಸಿ.ಕೆ.ಬಳ್ಳಾಲ್, ಪ್ರವೀಣ್ ಕುಮಾರ್ ಇಂದ್ರ, ಶ್ರೀಧರ ಕಡಂಬ, ವೈ.ಸೂರಜ್ ಕುಮಾರ್, ಅನಂತರಾಜ ಪುವಾಣಿ, ಸಂಪತ್ ಸಾಮ್ರಾಜ್ಯ, ಸುದೀರ್ ಪಡಿವಾಳ್, ಜಿಪಂ ಸಿಇಒ ಪ್ರತಿಕ್ ಬಾಯಲ್, ಡಿವೈಎಸ್ಪಿ ಮಹೇಶ್ ಪ್ರಸಾದ್, ದೇವಿಪ್ರಸಾದ್ ಶೆಟ್ಟಿ, ಸರ್ವೇಶ್ ಜೈನ್, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಅಜಿತ್ ಕೊಕ್ರಾಡಿ, ಮೋಹನ್ ಪಡಿವಾಳ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.---

(ಬಾಕ್ಸ್‌):₹3 ಲಕ್ಷ ದೇಣಿಗೆ

ಈ ಸಂದರ್ಭ ಸಹಕಾರ ರತ್ನ ಡಾ। ಎಂ.ಎನ್. ರಾಜೇಂದ್ರ ಕುಮಾರ್ ಅವರು ಮಹಾಮಸ್ತಕಾಭಿಷೇಕಕ್ಕಾಗಿ 3 ಲಕ್ಷ ರು.ದೇಣಿಗೆ ನೀಡುವ ಮೂಲಕ ಮಹೋತ್ಸವದ ಯಶಸ್ಸಿಗೆ ತಮ್ಮ ಕೊಡುಗೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿಗೆ ಕಾಂಗ್ರೆಸ್‌ ವಿರೋಧ: ಜೆಡಿಎಸ್‌ ಪ್ರತಿಭಟನೆ
ವಿಶ್ವಕರ್ಮ ಸಮಾಜ ಸಂಘಟಿತರಾಗಲಿ: ಕೆ.ಪಿ. ನಂಜುಂಡಿ