18ರಂದು ಕರ್ಣಾಟಕ ಬ್ಯಾಂಕ್‌ ಸ್ಥಾಪಕರ ದಿನಾಚರಣೆ: ನಿವೃತ್ತ ಐಎಎಸ್‌ ಅಧಿಕಾರಿ ದೇಬಾಶಿಷ್ ಪಾಂಡ ಉಪನ್ಯಾಸ

KannadaprabhaNewsNetwork |  
Published : Feb 17, 2026, 02:45 AM IST
ದೇಬಾಶಿಷ್‌ ಪಾಂಡ | Kannada Prabha

ಸಾರಾಂಶ

ಕರ್ನಾಟಕ ಬ್ಯಾಂಕ್‌ನ 102ನೇ ಸ್ಥಾಪಕರ ದಿನಾಚರಣೆ ಫೆಬ್ರವರಿ 18ರಂದು ಸಂಜೆ 4 ಗಂಟೆಗೆ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.

ಮಂಗಳೂರು: ಕರ್ನಾಟಕ ಬ್ಯಾಂಕ್‌ನ 102ನೇ ಸ್ಥಾಪಕರ ದಿನಾಚರಣೆ ಫೆಬ್ರವರಿ 18ರಂದು ಸಂಜೆ 4 ಗಂಟೆಗೆ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.

ನಿವೃತ್ತ ಐಎಎಸ್‌ ಅಧಿಕಾರಿ ದೇಬಾಶಿಷ್ ಪಾಂಡ ಅವರು ಸ್ಥಾಪಕರ ದಿನಾಚರಣೆ ಉಪನ್ಯಾಸ ನೀಡಿದ್ದಾರೆ. 1987ರ ಬ್ಯಾಚ್‌ನ ಉತ್ತರ ಪ್ರದೇಶ ಕೇಡರ್‌ನ ಐಎಎಸ್‌ ಅಧಿಕಾರಿ ದೇಬಾಶಿಷ್ ಪಾಂಡ ಅವರು ಮೂರು ದಶಕಕ್ಕೂ ಅಧಿಕ ಅವಧಿಯಲ್ಲಿ ಹಣಕಾಸು, ವಿಮಾ, ಸಾರ್ವಜನಿಕ ಆರೋಗ್ಯ, ಕೃಷಿ, ಕಾನೂನು ಜಾರಿ ಮತ್ತು ನಗರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಪ್ರವರ್ತಕ ಕೊಡುಗೆಗಳನ್ನು ನೀಡಿದ್ದಾರೆ.

ಹಿಂದೆ ಉತ್ತರ ಪ್ರದೇಶ ಸರ್ಕಾರದಲ್ಲಿ ಅವರು ಭಾರತದ ಅತಿದೊಡ್ಡ ತುರ್ತು ಪ್ರತಿಕ್ರಿಯಾ ವ್ಯವಸ್ಥೆಯಾದ ಡಯಲ್ 112ನ್ನು ಪರಿಚಯಿಸಿದ್ದರು, ಗ್ರೇಟರ್ ನೊಯ್ಡಾದಲ್ಲಿ ನಗರ ಆಡಳಿತವನ್ನು ಆಧುನೀಕರಿಸಿದ್ದರು. ಐಆರ್‌ಡಿಎಐ ಅಧ್ಯಕ್ಷರಾಗಿ (2022-2025) 2047ರ ವೇಳೆಗೆ ಎಲ್ಲರಿಗೂ ವಿಮೆ ಎಂಬ ದೃಷ್ಟಿಕೋನವನ್ನು ಮುನ್ನಡೆಸಿದ್ದರು. ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ (2020-2022) ಅವರು ಹಣಕಾಸು ಸೇರ್ಪಡೆಯನ್ನು ಉತ್ತೇಜಿಸಿದ್ದು, ಕೋವಿಡ್-19 ಸಂದರ್ಭದಲ್ಲಿ ಹಣಕಾಸು ಪ್ರಕ್ರಿಯೆಗಳನ್ನು ನಿರ್ವಹಿಸಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಅವರ ನಾಯಕತ್ವವು ಲಕ್ಷಾಂತರ ಜನರನ್ನು ಸಬಲೀಕರಿಸಿದೆ ಮತ್ತು ಭಾರತದ ಆಡಳಿತ ಮತ್ತು ಹಣಕಾಸು ವ್ಯವಸ್ಥೆಗಳನ್ನು ಬಲಪಡಿಸಿದೆ ಎಂದು ಬ್ಯಾಂಕ್‌ನ ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್ ತಿಳಿಸಿದ್ದಾರೆ.

ಸ್ಥಾಪಕರ ದಿನಾಚರಣೆ ಉಪನ್ಯಾಸದ ನಂತರ ಪ್ರಸಿದ್ಧ ಕಲಾವಿದೆಯರಾದ ವಿದುಷಿ ಮನಸಿ ಪ್ರಸಾದ್ (ಗಾಯನ), ವಿದುಷಿ ಸುಕನ್ಯಾ ರಾಮಗೋಪಾಲ್ (ಘಟಂ), ವಿದುಷಿ ಸಿ.ವಿ. ಶ್ರುತಿ (ವಯೋಲಿನ್), ವಿದುಷಿ ವೈ.ಜಿ. ಶ್ರೀಲತಾ ನಿಕ್ಷಿತ್ (ವೀಣೆ), ವಿದುಷಿ ರಂಜನಿ ಸಿದ್ಧಾಂತಿ ವೆಂಕಟೇಶ್ (ಮೃದಂಗಂ) ಮತ್ತು ವಿದುಷಿ ಭಾಗ್ಯಲಕ್ಷ್ಮಿ ಕೃಷ್ಣ (ಮೋರ್ಸಿಂಗ್) ಅವರಿಂದ ಸಂಗೀತ ಕಛೇರಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಬ್ಯಾಂಕ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಾದ ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಅಲ್ಲದೆ ನಮ್ಮ ಕುಡ್ಲ ಮತ್ತು ನಮ್ಮ ಟಿವಿಯಲ್ಲಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುವುದು. ಸ್ಥಾಪಕರ ದಿನಾಚರಣೆಯನ್ನು ಆಲ್ ಇಂಡಿಯಾ ರೇಡಿಯೋ ಮಂಗಳೂರು ಮೂಲಕವೂ ನೇರ ಪ್ರಸಾರ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಿವರಾತ್ರಿ ಸಡಗರ
ಪೊಲೀಸ್‌ ಗೃಹ ಯೋಜನೆ 2030ರವರೆಗೆ ಮುಂದುವರಿಕೆ: ಪರಮೇಶ್ವರ್‌