ಕೂಡ್ಲೂರು ಗ್ರಾಮದ ಪುಟಾಣಿ ಪೃಥು ಅದ್ವೈತ್‌ಗೆ ಕರ್ನಾಟಕ ಗ್ಲೋರಿ ಅವಾರ್ಡ್

KannadaprabhaNewsNetwork | Published : Oct 29, 2024 1:02 AM

ಸಾರಾಂಶ

ಬೆಂಗಳೂರಿನಲ್ಲಿ ಇತ್ತೀಚಿಗೆ ನೆಡೆದ ಇನ್ಸ್ಪಿರೇಷನ್ ಅವಾರ್ಡ್ ಹಾಗೂ ಸಮಿತ್‌ನಲ್ಲಿ ಚಾಮರಾಜನಗರ ತಾಲೂಕಿನ ಕೂಡ್ಲೂರು ಗ್ರಾಮದ ಪುಟಾಣಿ ಪೃಥು ಪಿ ಅದ್ವೈತ್ ಅವರಿಗೆ ಕರ್ನಾಟಕ ಗ್ಲೋರಿ ಅವಾರ್ಡ್ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬೆಂಗಳೂರಿನಲ್ಲಿ ಇತ್ತೀಚಿಗೆ ನೆಡೆದ ಇನ್ಸ್ಪಿರೇಷನ್ ಅವಾರ್ಡ್ ಹಾಗೂ ಸಮಿತ್‌ನಲ್ಲಿ ಚಾಮರಾಜನಗರ ತಾಲೂಕಿನ ಕೂಡ್ಲೂರು ಗ್ರಾಮದ ಪುಟಾಣಿ ಪೃಥು ಪಿ ಅದ್ವೈತ್ ಅವರಿಗೆ ಕರ್ನಾಟಕ ಗ್ಲೋರಿ ಅವಾರ್ಡ್ ಪ್ರದಾನ ಮಾಡಲಾಯಿತು. "ಎಕ್ಸೆಲೆನ್ಸ್ ಇನ್ ಬೆಸ್ಟ್ ಟ್ಯಾಲೆಂಟೆಡ್ ರೈಸಿಂಗ್ ಸ್ಟಾರ್ ಆಫ್ ಕರ್ನಾಟಕ " ಎಂಬ ಬಿರುದು ಮತ್ತು ಪ್ರಶಸ್ತಿಯನ್ನು ವಿಶ್ರಾಂತ ಕರ್ನಾಟಕ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ ಚಬ್ಬಿ ಅವರು ನೀಡಿದರು. ಮೈಸೂರಿನ ಪೂರ್ಣ ಚೇತನ ಪಬ್ಲಿಕ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವ ಚಾಮರಾಜನಗರದ ಕೂಡ್ಲೂರು ಗ್ರಾಮದ ವಿದ್ಯಾರ್ಥಿ ಪೃಥು ಪಿ ಅದ್ವೈತ್ 30 ನಿಮಿಷದಲ್ಲಿ 150 ಶ್ಲೋಕಗಳನ್ನು ಪಠಿಸಿ ಏಕಕಾಲದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿದ್ದರು. ಇದನ್ನು ಗಮನಿಸಿದ ಇನ್ಸ್ಪಿರೇಷನ್ ಅವಾರ್ಡ್ ಸಂಸ್ಥೆಯು ಬೆಂಗಳೂರಿನಲ್ಲಿ ನಡೆದ ಇನ್ಸ್ಪಿರೇಷನ್ ಅವಾರ್ಡ್ ಮತ್ತು ಸಮಿತ್‌ನ ಕರ್ನಾಟಕ ಗ್ಲೋರಿ ಅವಾರ್ಡ್ -2024 ರಲ್ಲಿ ಪೃಥು ಪಿ ಅದ್ವೈತ್ ಅವರನ್ನು ರೈಸಿಂಗ್ ಸ್ಟಾರ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿದ ವಿದ್ಯಾರ್ಥಿ ಪೃಥು ಪಿ ಅದ್ವೈತ್ ಮಾತನಾಡಿ, ವಿಶ್ವದಾಖಲೆಯನ್ನು ಮೆಚ್ಚಿ ಪ್ರೋತ್ಸಾಹಿಸಿ ನನಗೆ ಈ ಪ್ರಶಸ್ತಿ ನೀಡಿರುವುದು ನನ್ನ ಕಲಿಕೆಯ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಶ್ರಾಂತ ಪೋಲಿಸ್ ವರಿಷ್ಠಾಧಿಕಾರಿ ಎಸ್.ಬಿ. ಚಬ್ಬಿ ಮಾತನಾಡಿ, ಮಕ್ಕಳ ಸಾಧನೆ ನೋಡುವುದೇ ಬಹಳ ಸಂತೋಷದ ವಿಷಯ. ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ. ಏಳನೇ ವರ್ಷದಲ್ಲಿ ಈ ಅಪ್ರತಿಮ ಸಾಧನೆ ಮಾಡುವುದು ಸಾಧಾರಣ ವಿಷಯವಲ್ಲ. ಇವರಿಂದ ಸ್ಫೂರ್ತಿ ಪಡೆದು ಮತ್ತಷ್ಟು ಮಕ್ಕಳು ಸಾಧನೆಯ ಪಥ ತುಳಿಯಲಿ ಎಂದು ತಿಳಿಸಿದರು. ಈ‌ ಸಂದರ್ಭದಲ್ಲಿ ಕರ್ನಾಟಕ ಗ್ಲೋರಿ ಅವಾರ್ಡ್‌ನ ವ್ಯವಸ್ಥಾಪಕಿ ಶೃತಿ ರಾಕೇಶ್, ಪೋಷಕರಾದ ಪುನೀತ್ ಜಿ, ಪೂಜಾ ಎನ್, ಉದ್ಯಮಿ ಪ್ರದೀಪ್ ದುಬೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Share this article