ಭೀಕರ ಬರ ಈಗಾಗಲೇ ಘೋಷಿಸಿದ್ದ 195ಕ್ಕೆ ಹೊಸ ಸೇರ್ಪಡೆ 216 ತಾಲೂಕಲ್ಲಿ ಇನ್ನು 6 ತಿಂಗಳು ಬರ ನಿರ್ವಹಣೆ ಬರಪೀಡಿತ ನೂತನ 21 ತಾಲೂಕುಗಳು ಚಾಮರಾಜನಗರ, ಯಳಂದೂರು, ಕೃಷ್ಣರಾಜನಗರ, ಬೆಳಗಾವಿ, ಖಾನಾಪುರ, ಮುಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾವ್, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಆಲೂರು, ಅರಸೀಕೆರೆ, ಹಾಸನ, ಮೂಡಿಗೆರೆ, ತರೀಕೆರೆ, ಪೊನ್ನಂಪೇಟೆ, ಹೆಬ್ರಿ, ಸಿದ್ದಾಪುರ, ದಾಂಡೇಲಿ ಕನ್ನಡಪ್ರಭ ವಾರ್ತೆ ಬೆಂಗಳೂರು ರಾಜ್ಯದಲ್ಲಿ ಈಗಾಗಲೇ ಬರ ಘೋಷಣೆಯಾಗಿದ್ದ 195 ತಾಲೂಕುಗಳ ಜತೆಗೆ ಹೆಚ್ಚುವರಿ 21 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಒಟ್ಟು 216 ಬರ ಪೀಡಿತ ತಾಲೂಕುಗಳಲ್ಲಿ ಮುಂದಿನ 6 ತಿಂಗಳ ಕಾಲ ಬರ ನಿರ್ವಹಣೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಜತೆಗೆ ಮೊದಲ ಹಂತದಲ್ಲಿ ಬರ ಘೋಷಣೆಯಾಗಿದ್ದ 195 ತಾಲೂಕುಗಳಲ್ಲಿ ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಿದ್ದ 34 ತಾಲೂಕುಗಳ ಪೈಕಿ 22 ತಾಲೂಕುಗಳ ಮರು ಸಮೀಕ್ಷೆ ನಡೆಸಿದ್ದು, ಈ ವರದಿ ಪ್ರಕಾರ 11 ತಾಲೂಕು ಸಾಧಾರಣ ಬರ ಪೀಡಿತ ಹಾಗೂ ಉಳಿದ 11 ತಾಲೂಕು ತೀವ್ರ ಬರ ಪೀಡಿತ ಎಂದು ಮರು ಘೋಷಣೆ ಮಾಡಲಾಗಿದೆ. ಇನ್ನು ಹೊಸದಾಗಿ ಘೋಷಣೆ ಮಾಡಿರುವ 21 ತಾಲೂಕುಗಳಲ್ಲಿ 4 ತಾಲೂಕುಗಳಲ್ಲಿ ತೀವ್ರ ಬರ ಘೋಷಿಸಲಾಗಿದೆ. ರಾಜ್ಯದಲ್ಲಿ ಹೊಸದಾಗಿ ಬರ ಪೀಡಿತ ತಾಲೂಕುಗಳು ಎಂದು ಘೋಷಿಸಿರುವ 21 ತಾಲೂಕುಗಳಲ್ಲಿ ಆ್ಯಪ್ ಮೂಲಕ ತಳಮಟ್ಟದ ನೈಜ ಸ್ಥಿತಿ (ಗ್ರೌಂಡ್ ಟ್ರೂತನಿಂಗ್) ಪರಿಶೀಲಿಸಿ ಬರ ಕೈಪಿಡಿ ಅನ್ವಯ ದೃಢೀಕರಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಅ.9ರಂದು ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ತಾಲೂಕುಗಳಲ್ಲಿ ಶೇ.10ರಷ್ಟು ಗ್ರಾಮಗಳನ್ನು ಆಯ್ಕೆ ಮಾಡಿ ಪ್ರಮುಖ ಬೆಳೆಗಳನ್ನು ಗುರುತಿಸಿ, ಪ್ರತಿ ಬೆಳೆಗಳ ಸುಮಾರು 5 ಜಮೀನುಗಳಿಗೆ (1 ಎಕರೆಗಿಂತ ಕಡಿಮೆ ಇಲ್ಲದ) ಭೇಟಿ ನೀಡಿ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಆ್ಯಪ್ ಮೂಲಕ ಗ್ರೌಂಡ್ ಟ್ರೂತನಿಂಗ್ ಮಾಡಿ ಅ.11ರಂದು ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅ.12ರಂದು 21 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ. 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದ ಭೀತಿ ಉಂಟಾಗಿರುವ ಬಗ್ಗೆ ಆ.31ರಂದೇ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ 21 ಜಿಲ್ಲೆಗಳಲ್ಲಿ ಬರ ಘೋಷಣೆಯಾಗಿರುವುದರಿಂದ ಒಟ್ಟು ಬರ ಪೀಡಿತ ತಾಲೂಕುಗಳ ಸಂಖ್ಯೆ 200ರ (216) ಗಡಿ ದಾಟಿದೆ.