
ಮಡಿಕೇರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಅರೇಬಿಕಾ ಹಾಗೂ ಮಂಡ್ಯ ತಂಡಗಳು ಜಂಟಿ ಚಾಂಪಿಯನ್ ಪ್ರಶಸ್ತಿಯನ್ನು ಹಂಚಿಕೊಂಡವು.
ಈ ಹಿನ್ನೆಲೆಯಲ್ಲಿ ಫೈನಲ್ ಪ್ರವೇಶಿಸಿದ್ದ ಮಂಡ್ಯ ಹಾಗೂ ಕೊಡಗು ಅರೇಬಿಕಾ ತಂಡಗಳನ್ನು ಜಂಟಿ ವಿಜೇತರೆಂದು ಆಯೋಜಕರು ಘೋಷಿಸಿದರು. ಆದರೆ, ಚಾಂಪಿಯನ್ ಟ್ರೋಫಿಯನ್ನು ಯಾವ ತಂಡಕ್ಕೆ ನೀಡಬೇಕೆಂಬ ಕುತೂಹಲ ಮೂಡಿದ ಹಿನ್ನೆಲೆಯಲ್ಲಿ ಚರ್ಚೆ ನಡೆಸಿ, ಬಾಲ್ ಔಟ್ ಪ್ರಕ್ರಿಯೆ ಮೂಲಕ ಟ್ರೋಫಿ ವಿಜೇತರನ್ನು ನಿರ್ಧರಿಸಲು ತೀರ್ಮಾನಿಸಲಾಯಿತು.
ಇದರಂತೆ ಎರಡೂ ತಂಡಗಳಿಗೆ ತಲಾ ಆರು ಎಸೆತಗಳನ್ನು ಎಸೆಯುವ ಅವಕಾಶ ನೀಡಲಾಯಿತು. ಎದುರಾಳಿ ತಂಡದ ವಿಕೆಟ್‌ಗಳನ್ನು ಹೆಚ್ಚು ಬಾರಿ ಉರುಳಿಸುವ ತಂಡಕ್ಕೆ ಚಾಂಪಿಯನ್ ಟ್ರೋಫಿ ನೀಡಲು ನಿರ್ಧರಿಸಲಾಯಿತು. ಈ ರೋಚಕ ಪ್ರಕ್ರಿಯೆಯಲ್ಲಿ 1-0 ಅಂತರದಲ್ಲಿ ಮಂಡ್ಯ ತಂಡ ಮೇಲುಗೈ ಸಾಧಿಸಿ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ವಿಶೇಷವೆಂದರೆ, ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ನಿಗದಿಯಾಗಿದ್ದ ಒಟ್ಟು 1.50 ಲಕ್ಷ ರು. ನಗದು ಬಹುಮಾನವನ್ನು ಎರಡೂ ತಂಡಗಳಿಗೆ ಸಮನಾಗಿ ಹಂಚಿಕೆ ಮಾಡಿ ವಿತರಿಸಲಾಯಿತು.
ಕಾರುಗಳ ಬೆಳಕಿನಲ್ಲಿ ನಡೆದ ಬಾಲ್ ಔಟ್ ಪ್ರಕ್ರಿಯೆ ಕ್ರೀಡಾಭಿಮಾನಿಗಳಲ್ಲಿ ರೋಚಕತೆ ಮೂಡಿಸಿತು. ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರು ಕೂಡ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಇಡೀ ಮೈದಾನ ವಾಹನಗಳ ಬೆಳಕಿನಿಂದ ಕಂಗೊಳಿಸುತ್ತಿದ್ದಂತೆ ನಡೆದ ಈ ಪ್ರಕ್ರಿಯೆ ಸಿನಿಮೀಯ ದೃಶ್ಯವನ್ನು ನೆನಪಿಸುವಂತಿದ್ದು, ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯ ಸ್ಮರಣೀಯ ಕ್ಷಣವಾಗಿ ಮೂಡಿಬಂತು.ಉಳಿದಂತೆ ಬಾಗಲಕೋಟೆ ತೃತೀಯ, ಚಿಕ್ಕಬಳ್ಳಾಪುರ ಚತುರ್ಥ ಬಹುಮಾನ ತನ್ನದಾಗಿಸಿಕೊಂಡಿತು.