ಗದಗ: ಸಿಎಂ ಸಿದ್ದರಾಮಯ್ಯ ಕರ್ನಾಟಕ ಮಾದರಿ ಅಭಿವೃದ್ಧಿಯ ಹೊಸ ದೃಷ್ಟಾಂತವನ್ನು ರೂಪಿಸಿ ಪುರೋಗಾಮಿ ಮುಂಗಡ ಪತ್ರವನ್ನು ರಾಜ್ಯಕ್ಕೆ ನೀಡಿ ಗುಣಾತ್ಮಕ ಬದಲಾವಣೆಯ ಪರ್ವವನ್ನು ಪ್ರಾರಂಭಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಶ್ಲಾಘಿಸಿದ್ದಾರೆ.
ಗದಗ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 10 ಕೋಟಿಗಳ ವೆಚ್ಚದ ಶೀತಲಗೃಹ ನಿರ್ಮಾಣ ಮಾಡುವ ಮೂಲಕ ಹಣ್ಣು-ತರಕಾರಿ ಮಾರುಕಟ್ಟೆಗೆ ದೊಡ್ಡ ಬೆಂಬಲ ದೊರಕಲಿದೆ.
ಗದಗ ಜಿಲ್ಲೆಯ ಜಾಲವಾಡಗಿ ಏತ ನೀರಾವರಿಯನ್ನು 7.28 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು, ಶಿರಹಟ್ಟಿ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೇಗೇರಿಸಲು, ಗದಗ ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರು.10 ಕೋಟಿಗಳ ವೆಚ್ಚದಲ್ಲಿ ಕ್ಯಾತಲ್ಯಾಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೇಷಾಲಿಟಿ ಕಾರ್ಡಿಯಾಕ್ ಯೂನಿಟ್ (Super Speciality Cardiac Unit) ಸ್ಥಾಪಿಸುವ ನಿರ್ಣಯ, ಗದಗದಲ್ಲಿ 450 ಹಾಸಿಗೆಯ ಆಸ್ಪತ್ರೆಗೆ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ ಖರೀದಿಗೆ ಹಣ ಒದಗಿಸಿರುವುದು, ಗದಗದಲ್ಲಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ನಿರ್ಣಯಿಸಲಾಗಿರುವುದು, ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜಿಸಿರುವುದು, ರೋಣದಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹೊಸ ಜಿ.ಟಿ.ಟಿ.ಸಿ ಪ್ರಾರಂಭಿಸುವ ಮೂಲಕ, ರೋಣದ ಮಲ್ಲಾಪುರ ರೈಲ್ವೆ ಮೇಲುಸೇತುವೆ ಕಾಮಗಾರಿ ಘೋಷಿಸಿರುವುದು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ವದ ಮತ್ತು ಪರಿಣಾಮಕಾರಿಯಾದ ಅಭಿವೃದ್ಧಿಯ ಶಕೆಯನ್ನು ಪುನರಾರಂಭಿಸುವ ದಿಕ್ಸೂಚಿಯಾಗಿವೆ ಎಂದು ಸಚಿವ ಪ್ರತಿಕ್ರಿಯೆಸಿದ್ದಾರೆ.