ಗದಗ: ದೇಶದ ಸಹಕಾರ ಚಳವಳಿಗೆ ಕರ್ನಾಟಕದ ಕೊಡುಗೆ ಅಪಾರ ಅದರಲ್ಲಿಯೂ ಗದಗ ಜಿಲ್ಲೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹಿರಿಯ ಸಹಕಾರಿ ಮುಖಂಡ ಮೋಹನ ಕೋಟಿ ಹೇಳಿದರು.
ಸಹಕಾರ ಚಳವಳಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಸಂಸ್ಥೆಗಳಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು ಅಗ್ರಸ್ಥಾನದಲ್ಲಿವೆ. ಪಟ್ಟಣ ಸಹಕಾರ ಬ್ಯಾಂಕುಗಳ ವಲಯ ಪಟ್ಟಣ ಪ್ರದೇಶದ ಜನರಿಗೆ ಆರ್ಥಿಕವಾಗಿ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದು, ಪಟ್ಟಣ ಪ್ರದೇಶದ ಜನರಿಗೆ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡಿ ಪೋಷಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಮರ್ಚಂಟ್ಸ್ ಅರ್ಬನ್ ಕೋ-ಆಪ್ ಬ್ಯಾಂಕಿನ ಅಧ್ಯಕ್ಷ ಕೆ. ಎಸ್. ಚಟ್ಟಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ವಾಣಿಜ್ಯ ಬ್ಯಾಂಕುಗಳಿಗೆ ಹೋಲಿಸಿದರೆ, ಪಟ್ಟಣ ಸಹಕಾರ ಬ್ಯಾಂಕುಗಳು ಗಾತ್ರದಲ್ಲಿ ಬಹಳ ಚಿಕ್ಕವು, ವಾಣಿಜ್ಯ ಬ್ಯಾಂಕುಗಳ ಮೇಲೆ ಇರುವಷ್ಟು ನಂಬಿಕೆ ಪಟ್ಟಣ ಸಹಕಾರ ಬ್ಯಾಂಕುಗಳ ಮೇಲೆ ಇರುವುದಿಲ್ಲ. ಅದರಲ್ಲೂ ಸಣ್ಣ ಗಾತ್ರದ ಬ್ಯಾಂಕುಗಳಲ್ಲಿ ಠೇವಣಿ ಹೂಡುವಾಗ ಕೊಡುವ ಬಡ್ಡಿದರ, ನಂಬಿಕೆ ಹೆಚ್ಚು ಕೆಲಸ ಮಾಡುತ್ತದೆ, ನಂಬಿಕೆಯ ಅಸ್ತಿತ್ವವನ್ನೆ ಅಲ್ಲಾಡಿಸುವ ಘಟನೆಗಳು ನಡೆದಾಗ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಬ್ಯಾಂಕುಗಳ ಮೇಲೆ ಅದರ ಋಣಾತ್ಮಕ ಪರಿಣಾಮ ಆಗುತ್ತದೆ, ಈ ಸಮಸ್ಯೆಗಳ ಕುರಿತು ಗಂಭೀರ ಚಿಂತನೆ ಮಾಡುವುದು ಸಹಕಾರಿಗಳಲ್ಲಿ ಅಗತ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್.ಕೆ. ಕುರಡಗಿ ಮುಂತಾದವರು ಮಾತನಾಡಿದರು. ಕೆ.ಎಸ್. ಪರ್ವತಗೌಡ್ರ ಚಂದ್ರಕಾಂತ ಸಂಕಣ್ಣವರ, ಸಂತೋಷ ಅಬ್ಬಿಗೇರಿ, ಸಿ.ಟಿ. ದುಂದೂರ ರಾಜು ಕೋಟಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಜ್ಯೋತಿ ಮಾಳೆಕೊಪ್ಪ ಉಪಸ್ಥಿತರಿದ್ದರು.
ತರಬೇತಿ ಕಾರ್ಯಾಗಾರದಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ಪತ್ತಿನ ಸಹಕಾರ ಸಂಘಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರಗಳ ಕುರಿತು ಬಿ.ವ್ಹಿ.ರವಿಂದ್ರನಾಥ, ಚಾಟರ್ಡ ಅಕೌಂಟಂಟ್, ಸಾಗರ ಆದಾಯ, ವೃತ್ತಿ ಹಾಗೂ ಸರಕು ಸೇವಾ ತೆರಿಗೆಗಳು (ಜಿಎಸ್‌ಟಿ) ಕುರಿತು ವರುಣ ಭಟ್ಟ, ಚಾಟರ್ಡ ಅಕೌಂಟಂಟ್, ಸಾಗರ ಸಾಲ ವಸೂಲಾತಿ ವಿಧಿ ವಿಧಾನಗಳ ಕುರಿತು ಪ್ರಶಾಂತ ಮುಧೋಳ ಉಪನ್ಯಾಸ ನೀಡಿದರು. ವಿದ್ಯಾ ಹುಬ್ಬಳ್ಳಿ ಪ್ರಾರ್ಥಿಸಿದರು. ಜಿಲ್ಲಾ ಸಹಕಾರ ಯೂನಿಯನ್ನಿನ ಸಿಇಓ ಚಂದ್ರಶೇಖರ ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಯಲಿಗಾರ, ರವಿ ಕಲ್ಲನಗೌಡ್ರ ಮುಂತಾದವರು ಹಾಜರಿದ್ದರು.