- ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕ ಆಶ್ರಯದಲ್ಲಿ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಚರ್ಚಾ ಸ್ಪರ್ಧೆಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
1915 ರಲ್ಲಿ ಕನ್ನಡದ ದಿಗ್ಗಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ.ವಿಶ್ವೇಶ್ವರಯ್ಯ ಹುಟ್ಟು ಹಾಕಿದ ಕನ್ನಡ ಸಾಹಿತ್ಯ ಪರಿಷತ್ ಇಂದು ಶತಮಾನ ದಾಟಿ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ತಿಳಿಸಿದರು.ಬುಧವಾರ ತಾಲೂಕಿನ ಮೆಣಸೂರು ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಆಧುನೀಕರಣ ಅತಿರೇಕ ಪರಿಸರಕ್ಕೆ ಮಾರಕ ಎಂಬ ವಿಷಯದ ಬಗ್ಗೆ ನಡೆದ ಚರ್ಚಾ ಸ್ಪರ್ಧೆ ಉದ್ಘಾಟನೆಯಲ್ಲಿ ಮಾತನಾಡಿದರು. ಕನ್ನಡ ಭಾಷೆ, ಸಂಸ್ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ ಬೆಳೆಸುತ್ತಿದೆ. ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾರ್ಗ ದರ್ಶನದಲ್ಲಿ ನಿರಂತರವಾಗಿ ಕನ್ನಡ ಕಾರ್ಯಕ್ರಮ ನಡೆಸುತ್ತಿದ್ದೇವೆ.18 ವರ್ಷ ತುಂಬಿದ ಪ್ರತಿಯೊಬ್ಬ ಕನ್ನಡಿ ಗರು 450 ರು. ನೀಡಿ ಅಜೀವ ಸದಸ್ಯರಾಗಬಹುದು. ಮುಂದಿನ ದಿನಗಳಲ್ಲಿ ತಾ.ಕಸಾಪದಿಂದ ಶಾಲೆಗಳಲ್ಲಿ ಜಾನಪದ ಗೀತೆ, ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗುವುದು ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬಿ.ಕೆ.ಪ್ರಮೀಳಕ್ಕೆ ಉಪನ್ಯಾಸ ನೀಡಿ,1972 ರಿಂದಲೂ ಪರಿಸರ ದಿನಾಚರಣೆ ಆಚರಿಸುತ್ತಾ ಬಂದಿದ್ದೇವೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಪ್ರಾಣಿ, ಪಕ್ಷಿಗಳಿಗೂ ಸಂವೇದನೆ ಇದೆ. ಪ್ರಸ್ತುತ ಜಲ, ವಾಯು ಮಾಲಿನ್ಯ ಆಗಿದೆ. ಮುಖ್ಯವಾಗಿ ಮನಸ್ಸಿನ ಮಾಲಿನ್ಯ ಆಗಿದೆ. ಪ್ರಕೃತಿಗೂ ಶಾಂತಿ, ಪಾವಿತ್ರತೆ ಬೇಕಾಗಿದೆ ಎಂದರು.ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಪರಿಸರದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯದ ಜೊತೆಗೆ ಪರಿಸರದ ಬಗ್ಗೆಯೂ ಖಾಳಜಿ ವಹಿಸುತ್ತಿದೆ. ಆಧುನಿಕತೆ ಭರಾಟೆಯಲ್ಲಿ ಪರಿಸರ, ಅರಣ್ಯದ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮಾನವನ ಅತಿಯಾಸೆಯಿಂದ ಪರಿಸರ ವಿನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೋಜಿನ ಪ್ರಾಂಶುಪಾಲೆ ಸಿಸ್ಟರ್ ಉಷಾ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಪರಿಸರ ದಿನಾಚರಣೆಗೆ ನಮ್ಮ ಕಾಲೇಜು ಆಯ್ಕೆ ಮಾಡಿರುವುದು ನಮಗೆ ಸಂತಸ ತಂದಿದೆ. ಪ್ರತಿಯೊಬ್ಬರೂ ಕನ್ನಡ ಭಾಷೆ ಮಾತನಾಡುತ್ತಾ ಬಂದರೆ ಕನ್ನಡ ಭಾಷೆ ಬೆಳೆಯುತ್ತದೆ ಎಂದರು.ಅತಿಥಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ರಾಯಬಾರಿ ಕಣುವೆ ವಿನಯ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಒಲವು ಕಡಿಮೆಯಾಗಿದ್ದು ಇದಕ್ಕೆ ಸಂಸ್ಕಾರದ ಕೊರತೆ ಕಾರಣವಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಹಾಗೂ ಪರಿಸರದೊಂದಿಗೆ ಬೆರೆಯುವ ಮನೋಭಾವ ಬೆಳೆಸಬೇಕು ಎಂದು ಸಲಹೆ ನೀಡಿದರು.ಚರ್ಚಾ ಸ್ಪರ್ಧೆಯಲ್ಲಿ ಕು.ಸುಗುಣ ಪ್ರಥಮ,ಕು.ಕ್ರಿಷ್ಟಾಲ್ ದ್ವಿತೀಯ,ಕು.ದರ್ಶನ ತೃತೀಯ ಬಹುಮಾನ ಪಡೆದರು.ವಿಜೇತರಿಗೆ ಪ್ರಶಸ್ತಿ ಪತ್ರ ,ನಗದು ಬಹುಮಾನ, ಪರಿಸರ ಸ್ನೇಹಿ ಪೆನ್ನುಗಳನ್ನು ನೀಡಲಾಯಿತು.
ಅತಿಥಿಗಳಾಗಿ ಕಸಾಪ ಮಹಿಳಾ ಘಟಕದ ನಿರ್ದೇಶಕಿ ಶ್ಯಾಮಲ ಸತೀಶ್, ಸಾಹಿತಿ ಜಯಮ್ಮ, ಮಹಿಳಾ ಘಟಕದ ಕಾರ್ಯದರ್ಶಿಗಳಾದ ಶಶಿಕಲಾ, ವಾಸಂತಿ ಸದಸ್ಯರಾದ ಮಂಜುಳಾ, ಸವಿತ ದಕ್ಷಿಣಮೂರ್ತಿ, ತೀರ್ಪುಗಾರರಾದ ಕೆ.ಎಸ್.ರಾಜಕುಮಾರ್, ಜಯಂತಿ, ರಾಜೀವ್ , ನಂದಿನಿ ಆಲಂದೂರು ಇದ್ದರು.