ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕಿನ ಚಿನ್ನೇನಹಳ್ಳಿಯಲ್ಲಿ ವಾಂತಿ-ಬೇಧಿ ಕಾಣಸಿಕೊಂಡು 6 ಜನ ಮೃತಪಟ್ಟಿರುವ ವಿಚಾರವನ್ನು ನಾವೇ ಕೊಟ್ಟಿದ್ದೇವೆ. ಆದರೂ ವಿಪಕ್ಷ ನಾಯಕ ಇತ್ತೀಚೆಗೆ ಚಿನ್ನೇನಹಳ್ಳಿಗೆ ಭೇಟಿ ನೀಡಿ "ಕೈ ಸರ್ಕಾರ ಸಾವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ " ಎಂಬ ಆರೋಪಿಸಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಆರ್. ಅಶೋಕಗೆ ತಿರುಗೇಟು ನೀಡಿದರು.ಚಿನ್ನೇನಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದು ಮಾತನಾಡಿದರು. ವಿಪಕ್ಷ ನಾಯಕ ಆರ್.ಅಶೋಕ್ ಅತ್ಯಂತ ಜವಾಬ್ದಾರಿಯುತವಾಗಿ ಮಾತನಾಡಬೇಕು. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಾಂತಿ- ಬೇಧಿ ಕಾಣಿಸಿಕೊಂಡು 6 ಜನ ಮೃತಪಟ್ಟಿದ್ದು, ಈ ಪೈಕಿ ಇಬ್ಬರು ಕರುಳು ಬೇನೆಗೆ ತುತ್ತಾಗಿ ಸಾವನ್ನಪ್ಪಿರುವುದು ದೃಡಪಟ್ಟಿದೆ. ಇನ್ನೂಳಿದ 4 ಜನರು ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂಬುದನ್ನು ಜಿಲ್ಲಾಡಳಿತ ಎಫ್‌ಎಸ್‌ಎಲ್‌ಗೆ ಕಳಿಸಿದ್ದು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ. ವರದಿ ಬಂದ ನಂತರ ಸತ್ಯಾಂಶ ಹೊರ ಬೀಳಲಿದೆ. ವಿಪಕ್ಷ ನಾಯಕರು ವಿರೋಧ ಪಕ್ಷದಲ್ಲೇ ಕೂರಲಿ ಎಂದು ವಿಪಕ್ಷ ನಾಯಕ ಆರ್. ಅಶೋಕ್‌ಗೆ ತಿರುಗೇಟು ನೀಡಿದರು.ಘಟನೆ ವಿವರ:
ತಾಲೂಕಿನ ಚಿನ್ನೇನಹಳ್ಳಿಯಲ್ಲಿ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಕಲುಷಿತ ನೀರು ಸೇವಿಸಿ 158 ಕ್ಕೂ ಅಧಿಕ ಜನರಿಗೆ ವಾಂತಿ-ಬೇಧಿ ಕಾಣಿಸಿಕೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದರು. ಈ ಪೈಕಿ 84 ಜನ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಈಗ 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದು ಇದರಲ್ಲಿ 19 ಜನ ಶ್ರೀದೇವಿ ಆಸ್ಪತ್ರೆ, ಇಬ್ಬರು ಮಧುಗಿರಿ ಸಾರ್ವಜನಿಕ ಆಸ್ಪತ್ರೆ, ಹಾಗೂ ಒಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರಿಗೂ ಜಿಲ್ಲಾಡಳಿತ ಊಟದ ವ್ಯವಸ್ಥೆ ಮಾಡಿದೆ ಎಂದರು.ಜಿಲ್ಲಾಡಳಿತ ಅತ್ಯಂತ ಜವಾಬ್ದಾರಿಯುತವಾಗಿ ಗ್ರಾಮದಲ್ಲಿ ವಾಂತಿ-ಬೇಧಿ ಏಕೆ ಕಾಣಸಿದೆ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ. ಕುಡಿವ ನೀರು, ಅಡುಗೆ ಸೇವನೆಯಿಂದ ಈ ಘಟನೆ ಸಂಭವಿಸಿದೆಯೇ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಆಗುತ್ತಿಲ್ಲ. ಓವವರ್ ಹೆಡ್ ಟ್ಯಾಂಕ್ ನೀರು ಅಥವಾ ಪೈಪ್ ಒಡೆದು ಕಲುಷಿತ ನೀರು ಸರಬರಾಜಾಗಿದೆ ಎಂಬ ದೂರುಗಳು ಕೇಳಿ ಬಂದಿದ್ದು, ಇದನ್ನೂ ಪರಿಶೀಲಿಸಲಾಗುತ್ತಿದೆ. ವರದಿ ಬಂದ ನಂತರ ಯಾರ ವಿರುದ್ಧ ಕ್ರಮ ಜರುಗಿಸಬೇಕು ಎಂಬುದನ್ನು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜಾತ್ರೆ ಮತ್ತಿತರೆ ಧಾರ್ಮಿಕ ಸಮಾರಂಭಗಳು ಸೇರಿದಂತೆ ಹೆಚ್ಚು ಜನರು ಸೇರಿ ಪ್ರಸಾದ ಹಂಚುವ ಸಂದರ್ಭದಲ್ಲಿ ಜಿಲ್ಲಾಡಳಿತ ಮುಲಾಜಿಲ್ಲದೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಜನರ ಆರೋಗ್ಯ ರಕ್ಷಣೆಗೆ ಸದಾ ಆರೋಗ್ಯ ಇಲಾಖೆ ಮುಂದಡಿ ಇಡಬೇಕು ಎಂದರು.ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಗ್ರಾಮದಲ್ಲಿ ಇಂತಹ ಘಟನೆಗಳು ಎಂದು ಸಂಭವಿಸಿರಲಿಲ್ಲ. ಯಾರು ಎದೆಗುಂದಬೇಡಿ, ಧೈರ್ಯವಾಗಿರಿ. ಈ ಘಟನೆಗೆ ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ವರದಿ ಬಂದ ನಂತರ ಘಟನೆಗೆ ಕಾರಣ ತಿಳಿಯಲಿದೆ. ಈಗಾಗಲೇ ಗ್ರಾಮಸ್ಥರಿಗೆ ಹೊರಗಿನಿಂದ ಶುದ್ಧ ಕುಡಿವ ನೀರು ತಂದು ಮನೆ ಮನೆಗೂ ವಿತರಿಸಲಾಗುತ್ತಿದೆ. ಆದರೂ ಸಮರ್ಥವಾಗಿ ಕೆಲಸ ಮಾಡುತ್ತಿದ್ದ ಗ್ರಾಮೀಣ ಕುಡಿವ ನೀರು ಸರಬರಾಜು ಅಧಿಕಾರಿ ಲೋಕೇಶ್ವರನ್ನು ಒತ್ತಡ ತಂದು ಅಮಾನತು ಮಾಡಿರುವುದು ಸರಿಯಲ್ಲ ಎಂದರು.
ಗ್ರಾಮಸ್ಥರ ಆರೈಕೆ ವಿಚಾರದಲ್ಲಿ ಜಿಲ್ಲಾಡಳಿತ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ವೈದ್ಯರು ಜನರಿಗೆ ಅಗತ್ಯ ಚಿಕಿತ್ಸೆ ನೀಡಲು ಹಗಲಿರುಳು ಶ್ರಮ ವಹಿಸುತ್ತಿದ್ದು, ನಗರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಕೆಲಸವೇ ಇರುವುದಿಲ್ಲ. ಅಂತಹ ವೈದ್ಯರನ್ನು ಗ್ರಾಮೀಣರ ಆರೋಗ್ಯ ಸೇವೆಗೆ ನಿಯೋಜಿಸಿದರೆ ಅನುಕೂಲವಾಗಲಿದೆ ಎಂದರು.ಈ ಭಾಗದಲ್ಲಿ 20 ಹಳ್ಳಿಗಳಿದ್ದು, ನಮ್ಮ ಗ್ರಾಮದಲ್ಲಿ ಒಂದು ಆಸ್ಪತ್ರೆ ತೆರೆಯಬೇಕು ಎಂದು ಸಚಿವರಲ್ಲಿ ಗ್ರಾಮಸ್ಥರು ಮನವಿ ಮಾಡಿದರು. ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿ, ನಮ್ಮ ಕ್ಲಿನಿಕ್ ತೆರೆದು ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಿ ಎಂದು ಡಿಎಚ್‌ಒಗೆ ಸೂಚಿಸಿದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಒ ಜಿ.ಪ್ರಭು, ಡಿಎಚ್‌ಒ ಮಂಜುನಾಥ್, ಟಿಎಚ್‌ಒ ಶ್ರೀನಿವಾಸ್, ಎಸಿ ಶಿವಪ್ಪ, ತಹಸೀಲ್ದಾರ್ ಸಿಬ್ಗತ್‌ವುಲ್ಲಾ, ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್‌ಗೌಡ, ಮುಖಂಡರಾದ ಮುರುಳಿಧರ ಹಾಲಪ್ಪ, ಎಂ.ಜಿ.ಶ್ರೀನಿವಾಸಮೂರ್ತಿ, ರೇಷ್ಮೆ ಸಹಾಯಕ ನಿರ್ದೇಶಕ ಟಿ.ಲಕ್ಷ್ಮೀನರಸಯ್ಯ, ವಲಯ ಅರಣ್ಯಾಧಿಕಾರಿ ಸುರೇಶ್ ಆರೋಗ್ಯ ಸಿಬ್ಬಂದಿ ಇದ್ದರು.