ಧಾರವಾಡ: ಕಾಯಕದಲ್ಲಿ ನಿಸರ್ಗದ ಧರ್ಮವಿದೆ, ಅದುವೇ ಬಸವಣ್ಣನವರ ಕಾಯಕ ಧರ್ಮ ಎಂದು ಸಾಹಿತಿ ಡಾ.ರಂಜಾನ್ ದರ್ಗಾ ಹೇಳಿದರು.
ಜಗತ್ತಿಗೆ ಕಾಯಕದ ಮಹತ್ವ ಸಾರಿರುವ ಬಸವಣ್ಣನವರು, ಕಾಯಕವು ಸೃಷ್ಟಿಗೆ ಪೂರಕವಾಗಿರಬೇಕೆ, ವಿನಃ ಮಾರಕವಾಗಿರಬಾರದು ಎಂದಿದ್ದಾರೆ. ಕಾಯಕ ಮಾಡದೇ ಈ ಸಮಾಜದಲ್ಲಿ ಬದುಕಲು ಅವಕಾಶ ಇಲ್ಲ ಎಂದು ಕಾಯಕ ಧರ್ಮ ಸಾರುತ್ತದೆ. ನಿಸರ್ಗ ಸಹ ಕಾಯಕದ ಮಹತ್ವವನ್ನು ಸಾರಿ ಸಾರಿ ಹೇಳುತ್ತದೆ ಎಂದರು.
ಜಾತಿ, ವರ್ಣ ಪದ್ಧತಿ, ಅಸಮಾನತೆ ವಿರುದ್ಧ ಹೋರಾಡುವ ಮೂಲಕ ಬಸವಣ್ಣ ಮಹಾನ್ ನಾಯಕ ಎನಿಸಿಕೊಂಡಿದ್ದಾರೆ. ದಾನ ಸಿದ್ಧಾಂತವನ್ನು ಬಸವಣ್ಣ ವಿರೋಧಿಸಿದರು, ಅದಕ್ಕೆ ಪೂರಕವಾಗಿ ದಾಸೋಹ ಸಿದ್ಧಾಂತಕ್ಕೆ ಹೆಚ್ಚಿನ ಮಹತ್ವ ನೀಡಿದರು. 12ನೇ ಶತಮಾನದಲ್ಲಿ ಬಸವಣ್ಣ ಜಗತ್ತಿನ ಮೊದಲ ಫಿಲಾಸಫರ್ಸ್ ಆಗಿ ಹೊರಹೊಮ್ಮಿದ್ದಾರೆ. ಬಡವರು, ಅನಕ್ಷರಸ್ಥರು, ದಲಿತರು, ನಿರ್ಗತಿಕರ ಬಗ್ಗೆ ಅವರು ಏಕತೆ ಸಾರಿದರು. ಕಟ್ಟ ಕಡೆಯ ಮನುಷ್ಯನನ್ನು ಗುರುತಿಸುವ ಸಿದ್ಧಾಂತ ಅದು ಬಸವ ತತ್ವವಾಗಿದೆ ಎಂದರು.ಶರಣರ ಷಟ್‌ಸ್ಥಲ- ಒಂದು ವೈಜ್ಞಾನಿಕ ನೋಟ ವಿಷಯ ಕುರಿತು ಚಿಂತಕ ಡಾ. ಅವಿನಾಶ ಕವಿ ಮಾತನಾಡಿ, 800 ವರ್ಷಗಳ ಹಿಂದೆ ಕನ್ನಡ ನಾಡಿನಲ್ಲಿ ಸಾಮಾಜಿಕ, ಆರ್ಥಿಕ, ವೈಚಾರಿಕ ಹಾಗೂ ಸಾಹಿತ್ಯಕ ಕ್ರಾಂತಿ ನಡೆದು, ಇಂದು ಆಚಾರ ವಿಚಾರದ ಮಾರ್ಗಕ್ಕೆ ದಾರಿಯಾಯಿತು. ಆ ಕ್ರಾಂತಿಯ ನೇತೃತ್ವ ವಹಿಸಿದ್ದು ಅಣ್ಣ ಬಸವಣ್ಣನವರು. ಇದೇ ಕ್ರಾಂತಿ ಲಿಂಗಾಯತ ಎಂಬ ಸಿದ್ಧಾಂತದ ಉಗಮಕ್ಕೂ ಕಾರಣವಾಗಿದೆ ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹೊಸದುರ್ಗದ ಶಾಂತವೀರ ಸ್ವಾಮೀಜಿ ಮಾತನಾಡಿದರು. ನಂತರ ಡಾ. ಅಂಬೇಡ್ಕರ್ ಕುರಿತು ಉಪನ್ಯಾಸ ನಡೆಯಿತು. ಅಂಬೇಡ್ಕರ್ ಸಮಾನತೆ ಮತ್ತು ಭಾರತದ ಸಂವಿಧಾನ ಕುರಿತು ಡಾ. ಎಂ. ವಿಶ್ವನಾಥ, ಜಾತಿ ವಿನಾಶ ಮತ್ತು ಅಂಬೇಡ್ಕರ್ ಕುರಿತು ಡಾ. ಸದಾಶಿವ ಮರ್ಜಿ, ಅಂಬೇಡ್ಕರ್ ಮತಾಂತರ ಮತ್ತು ಅದರ ಪರಿಣಾಮಗಳು- ಡಾ. ಸದಾನಂದ ಬಿ. ಸುಗಂದಿ ವಿಷಯ ಮಂಡನೆ ಮಾಡಿದರು. ಕೊನೆಯಲ್ಲಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮಿಜಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಂಜೆ ಸಮಾರೋಪ ನಡೆಯಿತು. ಬಾಗಲಕೋಟದ ಸಿದ್ಧರಾಮೇಶ್ವರ ಸ್ವಾಮೀಜಿ ಸಮಾರೂಪ ನುಡಿಗಳನ್ನಾಡಿದರು. ಡಾ. ಲೋಹಿತ ನಾಯ್ಕರ್ ನಿರ್ವಹಣೆ ಮಾಡಿದರು. ಉಸ್ತುವಾರಿ ಸಚಿವ ಸಂತೋಷ ಲಾಡ್, ಡಿಸಿ ದಿವ್ಯ ಪ್ರಭು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಮಠಾಧೀಶರು, ಉಪನ್ಯಾಸಕರು ಪಾಲ್ಗೊಂಡಿದ್ದರು.