ಧಾರವಾಡ:
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಬ್ಯಾಂಕ್ ತನ್ನ ಕ್ರೋಡೀಕರಿಸಿದ ಠೇವು ಮತ್ತು ಇತರೆ ಸಂಪನ್ಮೂಲಗಳಿಂದ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‌ಗಳ ಪುನರ್ದನ ಸಾಲ ಸೌಲಭ್ಯಗಳಿಂದ ರೈತ ಸದಸ್ಯರಿಗೆ ಬೆಳೆಸಾಲ, ಮಾಧ್ಯಮಿಕ ಸಾಲ, ರೈತರ ಉಪಕಸುಬಗಳಿಗೆ ಕಿಸಾನ್ ಬಳಕೆ ಸಾಲ, ವಿವಿಧ ಸಂಘ-ಸಂಸ್ಥೆ, ವ್ಯಾಪಾರಸ್ಥರು, ವೃತ್ತಿಪರರಿಗೆ ಕೃಷಿಯೇತರ ಸಾಲ, ಸ್ವಸಹಾಯ ಮತ್ತು ಜಂಟಿ ಬಾಧ್ಯತಾ ಗುಂಪುಗಳಿಗೆ ಸಾಲ ನೀಡುತ್ತಿದೆ. ಅಲ್ಲದೇ ಠೇವಣಾತಿಗಳ ಮೇಲೆ ಸ್ಪರ್ಧಾತ್ಮಕ ದರದಲ್ಲಿ ಬಡ್ಡಿ ನೀಡಲಾಗುತ್ತಿದೆ ಎಂದರು.
ಬ್ಯಾಂಕಿನ ಎಲ್ಲ ಶಾಖೆಗಳನ್ನು ಸಿಬಿಎಸ್ ವ್ಯವಸ್ಥೆಯಡಿ ಗಣಕೀಕೃತಗೊಳಿಸಲಾಗಿದೆ. ಗ್ರಾಹಕರಿಗೆ ಆರ್‌ಟಿಜಿಎಸ್, ನೆಫ್ಟ್ ಮತ್ತು ಎಸ್‌ಎಂಎಸ್ ಬ್ಯಾಂಕಿಂಗ್ ಸೌಲಭ್ಯ ಗಳನ್ನು ಕಲ್ಪಿಸಲಾಗಿದೆ. ಬ್ಯಾಂಕು ಪ್ರತಿವರ್ಷ ಲಾಭದಲ್ಲಿ ಮುನ್ನಡೆಯುತ್ತಿದ್ದು, ಈ ವರ್ಷ ₹25 ಕೋಟಿ ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗೆ ಎಲ್ಲರೂ ಸೇರಿ ಶ್ರಮವಹಿಸಬೇಕಿದೆ ಎಂದರು.ಇದೇ ವೇಳೆ ವಸೂಲಾತಿಯನ್ನು ಕೂಡ ಕಟ್ಟುನಿಟ್ಟಾಗಿ ಮಾಡುವ ಮೂಲಕ ಬ್ಯಾಂಕಿನ ಬಂಡವಾಳ ವೃದ್ಧಿಸಲು ಕ್ರಮಕೈಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇನ್ನೂ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದ್ದು, ಸದಸ್ಯ ಸಂಘಗಳು ಬ್ಯಾಂಕಿನಲ್ಲಿಯೇ ಆರ್ಥಿಕ ವಹಿವಾಟು ನಡೆಸುವುದು ಸೇರಿದಂತೆ ಅಗತ್ಯ ಸಹಕಾರ ನೀಡಬೇಕು ಎಂದು ಪಾಟೀಲ ಮನವಿ ಮಾಡಿದರು.
ಸಭೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ವಿವಿಧ ಸಹಕಾರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು. ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುನೀತಾ ಸಿದ್ರಾಮ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಎಸ್.ವಿ.ಹೂಗಾರ ನಿರೂಪಿಸಿದರು.