ಪರೀಕ್ಷಾ ಅಕ್ರಮ ತಡೆಗೆ ಕೆಇಎ ಮಾಸ್ಟರ್‌ ಪ್ಲಾನ್‌

KannadaprabhaNewsNetwork |  
Published : Sep 29, 2026, 02:00 AM IST
ಒಣಗಿದ ಬೆಳೆಯೊಂದಿಗೆ ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಡಿವಾಣ ಹಾಕಲು ಮೂರು ಪದರ ಇರುವ (ತ್ರಿ ಲೇಯರ್‌) ಓಎಂಆರ್‌ ಶೀಟ್‌ ಪರಿಚಯಿಸುವ ಚಿಂತನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಡಿವಾಣ ಹಾಕಲು ಮೂರು ಪದರ ಇರುವ (ತ್ರಿ ಲೇಯರ್‌) ಓಎಂಆರ್‌ ಶೀಟ್‌ ಪರಿಚಯಿಸುವ ಚಿಂತನೆ ನಡೆದಿದೆ.

ಇತ್ತೀಚೆಗೆ ನಡೆದ ಕೆಎಸ್‌ಆರ್‌ಪಿ ನೇಮಕಾತಿ ಪರೀಕ್ಷೆಯಲ್ಲಿ ನಡೆಸಿದ ಮೂರು ಪದರ ಇರುವ ಓಎಂಆರ್‌ ಶೀಟ್‌ನ ಹೊಸ ಪ್ರಯೋಗ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ, ಮುಂದಿನ ಎಲ್ಲ ನೇಮಕಾತಿ ಪರೀಕ್ಷೆಗಳಿಗೂ ಇದನ್ನು ವಿಸ್ತರಿಸಲು ಪ್ರಾಧಿಕಾರ ಮುಂದಾಗಿದೆ. ಅಭ್ಯರ್ಥಿಗಳ ಓಎಂಆರ್‌ ಶೀಟ್‌ಗಳ ತಿದ್ದುವಿಕೆ ಹಾಗೂ ಹಸ್ತಕ್ಷೇಪಕ್ಕೆ ಅವಕಾಶವಾಗದಂತೆ ತಡೆಯಲು ಈ ಹೊಸ ವ್ಯವಸ್ಥೆ ಸಹಕಾರಿಯಾಗಲಿದೆ ಎಂಬುದು ಕೆಇಎ ಅಧಿಕಾರಿಗಳ ಹೇಳಿದ್ದಾರೆ

ಅಕ್ರಮ ಎಸಗುವ ಉದ್ದೇಶದಿಂದ ಪರೀಕ್ಷಾ ಸಂದರ್ಭದಲ್ಲಿ ತಮ್ಮ ಓಎಂಆರ್‌ ಶೀಟ್‌ ಖಾಲಿ ಬಿಟ್ಟು ನಂತರದ ಹಂತದಲ್ಲಿ ಅವುಗಳನ್ನು ಬೇರೆ ಮಾರ್ಗಗಳ ಮೂಲಕ ಭರ್ತಿ ಮಾಡುವ ಪ್ರಯತ್ನ ನಡೆಸುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ಇಂತಹ ಅಕ್ರಮ ತಡೆಯಲು ಮೂರು ಪದರದ ಓಎಂಆರ್‌ ಶೀಟ್‌ ಉಪಯೋಗವಾಗಲಿದೆ. ಈ ಹಿನ್ನೆಲೆಯಲ್ಲಿ ಓಎಂಆರ್‌ ಶೀಟ್ ನಿರ್ವಹಣೆಯಲ್ಲೇ ಹೆಚ್ಚಿನ ಭದ್ರತೆ ಹಾಗೂ ಪಾರದರ್ಶಕತೆ ತರಲು ಕೆಇಎ ಮುಂದಾಗಿದೆ.

ಕೆಇಎ ಕಾರ್ಯನಿರ್ವಹಣಾ ನಿರ್ದೇಶಕ ಎಚ್‌.ಪ್ರಸನ್ನ ಅವರು ನೀಡಿದ ಮಾಹಿತಿ ಪ್ರಕಾರ, ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಮೂರು ಪದದ ಓಎಂಆರ್‌ ಜಾರಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಇದಕ್ಕೆ ಎಲ್ಲಾ ಜಿಲ್ಲಾಧಿಕಾರಿಗಳ ಸಹಕಾರವೂ ಬೇಕು. ಸರ್ಕಾರ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಸಮ್ಮತಿ ನೀಡಿದರೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಏನಿದು ತ್ರಿ ಲೇಯರ್‌ ಓಎಂಆರ್‌?:

ಈವರೆಗೆ ಕೆಪಿಎಸ್ಸಿ ಸೇರಿ ವಿವಿಧ ಪರೀಕ್ಷಾ ಸಂಸ್ಥೆಗಳು ಎರಡು ಪದರದ ಓಎಂಆರ್‌ ಶೀಟ್‌ಗಳನ್ನು ಬಳಸುತ್ತಿದ್ದವು. ಈ ಎರಡು ಲೇಯರ್‌ ನಡುವೆ ಒಂದು ಕಾರ್ಬನ್‌ ಪೇಪರ್‌ ಇರುತ್ತದೆ. ಮೂಲ ಓಎಂಆರ್‌ನಲ್ಲಿ ಅಭ್ಯರ್ಥಿ ತುಂಬಿದ ಉತ್ತರದ ವೃತ್ತಗಳು ಮತ್ತೊಂದು ಕೆಳಗಿನ ಮತ್ತೊಂದು ಓಎಂಆರ್‌ನಲ್ಲೂ ನಮೂದಾಗುತ್ತದೆ. ಪರೀಕ್ಷೆಯ ನಂತರ ಮೂಲ ಓಎಂಆರ್‌ ಅನ್ನು ಪರೀಕ್ಷಾ ಸಂಸ್ಥೆ ಪಡೆದುಕೊಳ್ಳುತ್ತಿತ್ತು. ಮತ್ತೊಂದು ಪ್ರತಿಯನ್ನು ಅಭ್ಯರ್ಥಿಗೆ ನೀಡಲಾಗುತ್ತಿತ್ತು. ಇದರಿಂದ ಪರೀಕ್ಷೆಯಲ್ಲಿ ಖಾಲಿ ಬಿಟ್ಟ ಉತ್ತರದ ವೃತ್ತಗಳನ್ನು ಪರೀಕ್ಷೆ ನಂತರ ಬೇರೆ ಮಾರ್ಗಗಳ ಮೂಲಕ ಭರ್ತಿ ಮಾಡುವ ಅಕ್ರಮಗಳಿಗೆ ಅವಕಾಶವಿರುತ್ತಿತ್ತು. ಆದರೆ ಮೂರು ಲೇಯರ್‌ನ ಹೊಸ ವ್ಯವಸ್ಥೆಯಲ್ಲಿ ಮೂಲ ಓಎಂಆರ್‌ ಜತೆ ಎರಡು ಹೆಚ್ಚುವರಿ ಓಎಂಆರ್‌ ಪ್ರತಿಗಳಿರುತ್ತವೆ. ಪ್ರತಿ ಓಎಂಆರ್‌ ನಡುವೆ ಕಾರ್ಬನ್‌ ಶೀಟ್‌ ಇರುವುದರಿಂದ ಮೂಲ ಓಎಂಆರ್‌ನಲ್ಲಿ ತುಂಬಿದ ಉತ್ತರದ ವೃತ್ತಗಳು ಉಳಿದೆರಡು ಪ್ರತಿಗಳಲ್ಲೂ ನಮೂದಾಗುತ್ತದೆ. ಇವುಗಳಲ್ಲಿ ಮೂರನೇ ಪ್ರತಿಯನ್ನು ಪರೀಕ್ಷೆ ನಡೆಯುವ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಸ್ಟ್ರಾಂಗ್ ರೂಂನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ. ಇದರಿಂದ ಓಎಂಆರ್‌ ತಿದ್ದುಪಡಿ, ಟ್ಯಾಂಪರಿಂಗ್‌ನಂಥ ಅಕ್ರಮ ನಡೆದರೆ ಸುಲಭವಾಗಿ ತನಿಖೆಯಲ್ಲಿ ಪತ್ತೆಯಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಖಾನೆ ವಿಸ್ತರಣೆ, ಮಾಲಿನ್ಯ ವಿರೋಧಿಸಿ 48 ಗಂಟೆ ಕೊಪ್ಪಳ ಬಂದ್ ಕರೆ
ಸುರಕ್ಷಿತ ಗರ್ಭಪಾತ, ಶ್ರವಣದೋಷ ತಡೆಗೆ ಅರಿವು ಅಗತ್ಯ: ಡಾ. ರಾಜೇಶ್