ಪಂಚೇಂದ್ರಿಯ, ಮನಸ್ಸು ಹಿಡಿತದಲ್ಲಿರಲಿ: ಬ್ರಹ್ಮಾನಂದ ಸರಸ್ವತಿ ಮಹಾರಾಜ

KannadaprabhaNewsNetwork |  
Published : Feb 14, 2026, 02:45 AM IST
ಸಿದ್ದಾಪುರದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಪಂಚೇಂದ್ರಿಯಗಳಿಂದ ಸಿಗುವ ಸುಖವು ನಿಜವಾದ ಸುಖವಲ್ಲ. ಧರ್ಮದಿಂದ ಸಿಗುವ ನೆಮ್ಮದಿಯೇ ನಿಜವಾದ ಸುಖ. ಮನಸ್ಸು ಭಗವಂತನಲ್ಲಿ ಅನುಸಂಧಾನವಾಗಬೇಕು.

ಹಿಂದೂ ಸಮಾವೇಶ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಪಂಚೇಂದ್ರಿಯಗಳಿಂದ ಸಿಗುವ ಸುಖವು ನಿಜವಾದ ಸುಖವಲ್ಲ. ಧರ್ಮದಿಂದ ಸಿಗುವ ನೆಮ್ಮದಿಯೇ ನಿಜವಾದ ಸುಖ. ಮನಸ್ಸು ಭಗವಂತನಲ್ಲಿ ಅನುಸಂಧಾನವಾಗಬೇಕು. ಪಂಚೇಂದ್ರಿಯ ಹಾಗೂ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ಧರ್ಮಸ್ಥಳ ಕನ್ಯಾಡಿಯ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ನೂರು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆ ಹೋಬಳಿ ಮಟ್ಟದಲ್ಲಿ ಪಟ್ಟಣದ ನೆಹರು ಮೈದಾನದಲ್ಲಿ ಸಂಘಟಿಸಲಾಗಿದ್ದ ಹಿಂದೂ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇಂದು ಜಾತಿ, ರಾಜಕೀಯ ವೈಷಮ್ಯ ತಾಂಡವವಾಡುತ್ತಿದೆ. ನಮಗಿಂತ ಕೆಳಗಡೆ ಇದ್ದವರನ್ನು ಕೈಹಿಡಿದು ಮೇಲೆತ್ತುವ ಮನೋಭಾವ ನಮ್ಮಲ್ಲಿ ಬರಬೇಕು. ನಮ್ಮ ಹುಟ್ಟನ್ನು ಸಾರ್ಥಕ ಮಾಡಿಕೊಳ್ಳಲು ನಮ್ಮ ಧರ್ಮವನ್ನು ಅನುಸರಿಸಿಕೊಂಡು ಹೋಗಬೇಕು. ಹೊಟ್ಟೆಗೆ ಕೊಟ್ಟ ಊಟ ಕೆಲವೇ ಸಮಯದಲ್ಲಿ ಜೀರ್ಣವಾಗಿಬಿಡುತ್ತದೆ. ಬುದ್ಧಿಗೂ ನಾವು ಊಟ ಕೊಡಬೇಕು. ಎರಡು ಕಾಲಿನ ಮನುಷ್ಯ ನಾಲ್ಕುಕಾಲಿನ ಪ್ರಾಣಿಗಳಂತೆ ಬಾಳಬಾರದು. ಆಗ ಜೀವನದಲ್ಲಿ ಉತ್ತರೋತ್ತರ ಅಭಿವೃದ್ಧಿ ಕಾಣಬಹುದು. ನಮ್ಮ ಮಕ್ಕಳನ್ನು ಕಾನ್ವೆಂಟಿಗೆ ಕಳಿಸುತ್ತೇವೆ. ನಮ್ಮ ಸಂಸ್ಕೃತಿ, ಪರಂಪರೆಯ ಪಾಠ ಮಾಡುವುದನ್ನು ಕೈಬಿಟ್ಟಿದ್ದೇವೆ. ದೇಶದಲ್ಲಿ ಸನಾತನ ಧರ್ಮದ ಶಿಕ್ಷಣ ಜಾರಿಗೆ ಬಂದಲ್ಲಿ ಮಾತ್ರ ನಮ್ಮ ಧರ್ಮ ಉಳಿಯಲು ಸಾಧ್ಯ. ಯಾವುದೇ ರಾಜಕೀಯ ಪಕ್ಷದವರಿಗೂ ಸನಾತನ ಧರ್ಮದ ಶಿಕ್ಷಣ ನೀಡುವ ಇಚ್ಛಾಶಕ್ತಿಯಿಲ್ಲ. ನಮ್ಮಲ್ಲಿ ವೇದ, ಉಪನಿಷತ್ತು, ಭಗವದ್ಗೀತೆ, ರಾಮಾಯಣ ಎಲ್ಲವೂ ಇದೆ. ವಿದೇಶೀಯರು ಬಂದು ನಮ್ಮ ಮಂತ್ರಗಳನ್ನು ಸಂಶೋಧನೆ ಮಾಡುತ್ತಿದ್ದಾರೆ. ನಾವು ಇತರ ಧರ್ಮಗಳನ್ನು ತಿದ್ದುವುದು ಬೇಡ, ಬದಲಿಗೆ ಅಹಿಂಸೆಯನ್ನೇ ಪ್ರತಿಪಾದಿಸುವ ಹಿಂದೂ ಧರ್ಮವನ್ನು ಬೆಳಗೋಣ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಜಗತ್ತಿನ ಅತ್ಯಂತ ಪ್ರಾಚೀನ ಸಂಸ್ಕೃತಿ ಭಾರತೀಯ ಸಂಸ್ಕೃತಿ. ನಮ್ಮಲ್ಲಿ ಇರುವುದು ಶ್ರೀಮಂತಿಕೆಯಲ್ಲ, ಬದಲಿಗೆ ಇರುವಿಕೆಯ ಅರಿವು ಇರುವುದು ಮುಖ್ಯ. ನಮ್ಮಲ್ಲಿ ಸ್ವಾಭಿಮಾನ ಜಾಗೃತವಾಗಬೇಕು ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಣಿ ಸದಸ್ಯ ರವೀಂದ್ರ ದಿಕ್ಸೂಚಿ ಭಾಷಣದಲ್ಲಿ ಸಮಾವೇಶದ ಉದ್ದೇಶ, ಪಂಚಪರಿವರ್ತನಾ ಕಾರ್ಯಕ್ರಮದ ವಿಚಾರ ಪ್ರಸ್ತುತಪಡಿಸಿದರು.

ಸಿದ್ಧಿವಿನಾಯಕ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಶಿಕ್ಷಕಿ ಪೂರ್ಣಿಮಾ ಭಟ್ಟ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಮಾವೇಶ ಸಮಿತಿಯ ಗೌರವಾಧ್ಯಕ್ಷ ಡಾ. ಕೆ.ಶ್ರೀಧರ ವೈದ್ಯ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ ಪ್ರಾಸ್ತಾವಿಕ ಮಾತನಾಡಿದರು. ಸಂಘಟನೆಯ ಅಧ್ಯಕ್ಷ ಉಮೇಶ ಹೆಗಡೆ ಕೊಡ್ತಗಣಿ, ಉಪಾಧ್ಯಕ್ಷ ಜಯವಂತ ಶಾನಭಾಗ, ಕಾರ್ಯಾಧ್ಯಕ್ಷ ಆನಂದ ಈರಾ ನಾಯ್ಕ ಇತರರು ಉಪಸ್ಥಿತರಿದ್ದರು. ಪದಾಧಿಕಾರಿಗಳಾದ ಎಸ್.ಕೆ. ಮೇಸ್ತ, ಲಕ್ಷ್ಮೀಕಾಂತ ಪೈ, ಶ್ಯಾಮಲಾ ಹೆಗಡೆ ಹೂವಿನಮನೆ, ಸತೀಶ ಹೆಗಡೆ, ಪಿ.ಬಿ. ಹೊಸೂರ, ಗುರುರಾಜ ಶಾನಭಾಗ, ತೋಟಪ್ಪ ನಾಯ್ಕ, ಡಾ. ವಿಶ್ವನಾಥ ಅರಳಿಕಟ್ಟಿ ಇತರರು ಪಾಲ್ಗೊಂಡಿದ್ದರು.

ಅರ್ಚನಾ ಹೆಗಡೆ ದೇವತಾ ಸ್ತುತಿ ಮಾಡಿದರು. ಉಷಾ ಉಲ್ಲಾಸ ಕಿಣಿ ಗೀತೆ ಪ್ರಸ್ತುತ ಪಡಿಸಿದರು. ಎಂ.ಆರ್. ಭಟ್ಟ ಹಾಗೂ ವೀಣಾ ಶೇಟ್ ನಿರ್ವಹಿಸಿದರು. ಸುದರ್ಶನ ಪಿಳ್ಳೆ ವಂದಿಸಿದರು. ಉಪಸ್ಥಿತರಿದ್ದ ವಿವಿಧ ಸಮಾಜಗಳ ಪ್ರಮುಖರನ್ನು ಸಂಘಟನೆಯಿಂದ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಪೂರಕವಾಗಿ ಉಡುಪಿಯ ಶ್ರೀ ಕ್ಷೇತ್ರ ನೀಲಾವರ ಮೇಳ ಶ್ರೀ ಮಹಿಷಮರ್ಧಿನಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಈಶ್ವರಿ ಚೌಡೇಶ್ವರಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಚ್ಚು ತೆರಿಗೆ ಕಟ್ಟಿದ್ದಕ್ಕೆ ಹೆಚ್ಚಿನ ಅನುದಾನ ಸಿಗದು: ನಿರ್ಮಲಾ
ಬಿಡದಿ ಟೌನ್‌ಶಿಪ್‌ : ರಾಹುಲ್‌ ಗಾಂಧಿಗೆ ಬಿವೈವಿ, ನಿಖಿಲ್‌ ಕುಮಾರಸ್ವಾಮಿ ಪತ್ರ