‘ಕೆಂಬಟ್ಟಿ’ ಸಮುದಾಯ ಪ.ಜಾ. ಆದಿಕರ್ನಾಟಕ ಜಾತಿ ಪಟ್ಟಿಯಲ್ಲಿ ಸೇರಿಸಲು ಮನವಿ

KannadaprabhaNewsNetwork | Published : Jul 2, 2025 11:50 PM
ಚಿತ್ರ :  29ಎಡಿಕೆ1 : ಶಾಸಕರಿಗೆ ಮನವಿ ಸಲ್ಲಿಸಿದ ನಿಯೋಗ.  | Kannada Prabha

ಕೊಡಗಿನ ಮೂಲ ನಿವಾಸಿ ಕೆಂಬಟ್ಟಿ ಸಮುದಾಯವನ್ನು ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಜಾತಿ ಪಟ್ಟಿಯಲ್ಲಿ ಸೇರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನ ಮೂಲನಿವಾಸಿ ‘ಕೆಂಬಟ್ಟಿ’ ಸಮುದಾಯವನ್ನು ಪರಿಶಿಷ್ಟ ಜಾತಿಯ ಆದಿಕರ್ನಾಟಕ ಜಾತಿ ಪಟ್ಟಿಯಲ್ಲಿ ಸೇರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕೊಡವ ಭಾಷಿಕ ಸಮುದಾಯಗಳ ಕೂಟದ ನಿಯೋಗ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿತು.ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರ ನೇತೃತ್ವದಲ್ಲಿ ಎ.ಎಸ್.ಪೊನ್ನಣ್ಣ ಅವರನ್ನು ಇಂದು ಭೇಟಿಯಾದ ‘ಕೆಂಬಟ್ಟಿ’ ಸಮುದಾಯದ ಪ್ರಮುಖರು ರಾಜ್ಯದ ಬೇರೆಲ್ಲೂ ಕಾಣದ ಕೊಡಗಿನ ಪ್ರಾಚೀನ "ಕೆಂಬಟ್ಟಿ " ಸಮುದಾಯವನ್ನು ಪರಿಶಿಷ್ಟ ಜಾತಿಯ ಆದಿಕರ್ನಾಟಕ ಜಾತಿ ಪಟ್ಟಿಯಲ್ಲಿ ನಮೂದಿಸಬೇಕು ಎಂದು ಕೋರಿದರು. ಪೂರ್ವಿಕರ ಮಾಹಿತಿಯಂತೆ ಹಾಗೂ ಬ್ರಿಟಿಷರ The Manual of coorg written by G.Richter and published in1870ರ ಸಮೀಕ್ಷೆಯ ವರದಿಯನ್ವಯ ‘ಕೆಂಬಟ್ಟಿ’ ಸಮುದಾಯ ಅನಾದಿ ಕಾಲದಿಂದಲೂ ಕೊಡಗಿನಲ್ಲಿ ಜೀವಿಸಿಕೊಂಡು, ಕೊಡವ ಭಾಷಾ ಜನಪದ ಪದ್ಧತಿ ಪರಂಪರೆ ಮೈಗೂಡಿಸಿಕೊಂಡು ಬಂದಿರುವ ಮೂಲನಿವಾಸಿಗಳಾಗಿದ್ದಾರೆ. ಇವರನ್ನು ಪರಿಶಿಷ್ಟ ಜಾತಿಯ ಆದಿಕರ್ನಾಟಕ ಜಾತಿ ಪಟ್ಟಿಯಲ್ಲಿ ಸೇರಿಸಬೇಕೆನ್ನುವುದು ಹಲವು ದಿನಗಳ ಬೇಡಿಕೆಯಾಗಿದೆ. ಅಲ್ಲದೆ ಈ ಕುರಿತು ಜಿಲ್ಲಾಡಳಿತದ ಮೂಲಕ ಸರ್ಕಾರದ ಗಮನವನ್ನು ಕೂಡ ಸೆಳೆಯಲಾಗಿದೆ ಎಂದು ಡಾ.ಮೇಚಿರ ಸುಭಾಷ್ ನಾಣಯ್ಯ ವಿವರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕ ಎ.ಎಸ್.ಪೊನ್ನಣ್ಣ ಅವರು ನಮ್ಮ ಬೇಡಿಕೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಈಗಾಗಲೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸರ್ಕಾರ ಸಮಿತಿಯನ್ನು ರಚಿಸಿದ್ದು, ರಾಜ್ಯಾದ್ಯಂತ ಜಾತಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ನಾಗಮೋಹನ್ ದಾಸ್ ಅವರು ಸುದ್ದಿಗೋಷ್ಠಿಯಲ್ಲಿ ಕೊಡಗಿನ ಕೆಂಬಟ್ಟಿ ಸಮುದಾಯದ ಹೆಸರನ್ನು ಸ್ವತ: ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ.ಶಾಸಕರು ನಾಗಮೋಹನ್ ದಾಸ್ ಅವರಿಗೆ ಖುದ್ದು ಕರೆ ಮಾಡಿ ವಿಚಾರಿಸಿದ ಸಂದರ್ಭ ಪರಿಶಿಷ್ಟ ಜಾತಿಯ ಆದಿಕರ್ನಾಟಕ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತು ಕೇಂದ್ರ ಸಮಿತಿಗೆ ಶಿಫಾರಸ್ಸು ಮಾಡಿರುವುದಾಗಿ ಮಾಹಿತಿ ಲಭಿಸಿದೆ. ಇದರಿಂದ ‘ಕೆಂಬಟ್ಟಿ’ ಸಮುದಾಯದ ಬಹುಕಾಲದ ಬೇಡಿಕೆ ಈಡೇರುತ್ತದೆ ಎನ್ನುವ ವಿಶ್ವಾಸ ಮೂಡಿದೆ ಎಂದು ಡಾ.ಮೇಚಿರ ಸುಭಾಷ್ ನಾಣಯ್ಯ ತಿಳಿಸಿದರು.ನಿಯೋಗದಲ್ಲಿ ಬಿಲ್ಲರಿ ಕುಟ್ಟಡ ಪ್ರಭು ಐಯ್ಯಪ್ಪ, ಮೊಳ್ಳೆ ಕುಟ್ಟಡ ಭೋಜಮ್ಮ, ಚಟ್ಟ ಕುಟ್ಟಡ ಸುಬ್ಬಕ್ಕಿ ಮುತ್ತಪ್ಪ, ಬಾಳೆ ಕುಟ್ಟಡ ಉದಯ್ ಮಾದಪ್ಪ, ಕುವಲೆ ಕುಟ್ಟಡ ಗಿರೀಶ್, ಚವರೆ ಕುಟ್ಟಡ ಸುಬ್ರಮಣಿ, ಕೂಪರೆ ಕುಟ್ಟಡ ಸಾಗರ್ ಪೂವಣ್ಣ, ಜೋಕುಟ್ಟಡ ಸಂತೋಷ್, ಬಿದ್ದಣ ಕುಟ್ಟಡ ರೋಹಿಣಿ ಪುಷ್ಪ, ಉಮ್ಮಣ ಕುಟ್ಟಡ ಕಿಶೋರ್ ಪೂವಯ್ಯ, ಚವರೆ ಕುಟ್ಟಡ ನೀಲ, ಮೂಳೆ ಕುಟ್ಟಡ ದಿನೇಶ್ ಪೆಗ್ಗೋಲಿ ಮುಂತಾದವರಿದ್ದರು.