ಕನ್ನಡಪ್ರಭ ವಾರ್ತೆ ಮಂಡ್ಯ
ಶಂಭೂನಹಳ್ಳಿಯ ನಿಂಗೇಗೌಡ ಮತ್ತು ಜಯಮ್ಮರ ರೈತ ದಂಪತಿ ಪುತ್ರನಾಗಿ 1971ರಲ್ಲಿ ಜನಿಸಿದ ಕೆಂಪೇಗೌಡರು ಪ್ರೌಢ ಶಿಕ್ಷಣ ನಂತರ ಐಟಿಐ ಡಿಪ್ಲೋಮಾ ಮುಗಿಸಿದರು. ತಮ್ಮ 16ನೇ ವಯಸ್ಸಿನಲ್ಲೆ ಸಾಹಿತ್ಯದ ಕಡೆ ಒಲವು ಬೆಳೆಸಿಕೊಂಡು ಹನಿ ಕವನ ಸಂಕಲನ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಯುವ ಕವಿಯಾಗಿ ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡು ಚಿಕ್ಕ ವಯಸ್ಸಿನಲ್ಲಿ ಉತ್ತಮ ಸಾಹಿತಿಯಾಗಿ ಗುರುತಿಸಿಕೊಂಡರು.
ನಂತರ ಹಾಸನ ಜಿಲ್ಲೆಯ ಹೊಳೆನರಸೀಪುರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಅತಿಥಿ ಬೋಧಕರಾಗಿ ಸೇವೆ ಸಲ್ಲಿಸುತ್ತಾ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಂತರ ತಮ್ಮ ವೃತ್ತಿಯನ್ನು ರಾಜಧಾನಿ ಬೆಂಗಳೂರಿಗೆ ವರ್ಗಾಯಿಸಿಕೊಂಡು 5 ವರ್ಷಗಳ ಕಾಲ ಶ್ರೀಸಾಯಿದಾಸಂ ಐಟಿಐ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಹಾಗೂ ಪ್ರಸ್ತುತ ಪ್ರತಿಷ್ಠಿತ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಬೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಎಲ್ಲರಿಗೂ ಕವಿಯಾಗುವ ಸೌಭಾಗ್ಯ ಲಭಿಸುವುದಿಲ್ಲ. ಆದರೆ, ಕೆಂಪೇಗೌಡರು ಒಂದೆಡೆ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತು, ಮತ್ತೊಂದೆಡೆ ಕವಿಯಾಗಿ ತಮ್ಮನ್ನು ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹಲವು ಕವನ ಸಂಕಲಗಳನ್ನು ನೀಡಿ ಸಮಾಜಕ್ಕೆ ಅಗತ್ಯ ಸಂದೇಶ ನೀಡುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ ಹಲವು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸಿವೆ.
ಗೌಡರು ಕವಿತೆಯನ್ನು, ಕಥೆಯನ್ನು, ಒಗಟನ್ನ, ಚುಟುಕನ್ನ, ಧ್ವನಿ ಸುರುಳಿಗೆ ಸಾಹಿತ್ಯವನ್ನ, ಸಿನಿಮಾಗೆ ಚಿತ್ರಕತೆಯನ್ನು ಬರೆಯುವ ಜೊತೆಗೆ ಬಹರ, ನಟನೆ, ನೃತ್ಯ, ಆಟ, ನೋಟ ಇವೆಲ್ಲಕ್ಕಿಂತಲೂ ಹೆಚ್ಚಾಗಿ ಸುಂದರ ಜೀವನ ನಡೆಸುವ ಕಲೆಯನ್ನು ತಾವು ಕಲಿತು, ತಮ್ಮ ಶಿಷ್ಯ ವೃಂದಕ್ಕೆ ಹೇಳಿಕೊಟ್ಟ ಗುರುವಾಗಿದ್ದಾರೆ. ಈಗಾಗಲೇ ಇವರ ಶಿಷ್ಯ ವೃದ್ಧ ಹಲವು ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿ ನೌಕರಿ ಗಿಟ್ಟಿಸಿಕೊಂಡು ಅವರ ಭವಿಷ್ಯದ ಬದುಕಿಗೆ ಬೆಳಕಾಗಿದ್ದಾರೆ.