ಅತಂತ್ರದಲ್ಲಿ ಕೇಂದ್ರ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿ

KannadaprabhaNewsNetwork |  
Published : Feb 23, 2024, 01:54 AM IST
22ಡಿಡಬ್ಲೂಡಿ22023ರ ಫೆಬ್ರುವರಿ 20ರಂದು ಸೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಆವರಣದಲ್ಲಿ ಕೇಂದ್ರ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಶಿಲಾನ್ಯಾಸದ ಸಂದರ್ಭ. | Kannada Prabha

ಸಾರಾಂಶ

ಜಾಗದ ಸಮಸ್ಯೆಯಿಂದ ಧಾರವಾಡದಲ್ಲಿ ಕೇಂದ್ರ ಸರ್ಕಾರದ ಲಲಿತ ಕಲಾ ಅಕಾಡೆಮಿಯ ಪ್ರಾದೇಶಿಕ ಕಚೇರಿ ಅತಂತ್ರವಾಗಿದೆ. ಜಾಗ ತಮಗೆ ಸೇರಬೇಕು ಎಂದು ಸ್ಕೌಟ್ಸ್‌ ಮತ್ತು ಗೌಡ್ಸ್‌ ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿದೆ.

ಬಸವರಾಜ ಹಿರೇಮಠ

ಧಾರವಾಡ: ಸರಿಯಾಗಿ ಒಂದು ವರ್ಷದ ಹಿಂದೆ ನಗರದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಆವರಣದಲ್ಲಿ ಅದ್ಧೂರಿಯಾಗಿ ಶಿಲಾನ್ಯಾಸಗೊಂಡ ಕೇಂದ್ರ ಸರ್ಕಾರದ ಲಲಿತ ಕಲಾ ಅಕಾಡೆಮಿಯ ಪ್ರಾದೇಶಿಕ ಕಚೇರಿ ಕಾರ್ಯಾರಂಭಕ್ಕೆ ಇನ್ನೂ ಮುಹೂರ್ತ ಕೂಡಿ ಬರುತ್ತಿಲ್ಲ.

ಕೋರ್ಟ್‌ ವೃತ್ತದ ಜಾಗ ತಮಗೇ ಸೇರಬೇಕು ಎಂದು ಆರಂಭದ ದಿನದಿಂದಲೂ ವಾದ ಮಾಡುತ್ತಿದ್ದ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಯಾವಾಗ ತನ್ನ ವಾದವನ್ನು ಕೇಂದ್ರವು ಕಿವಿಗೆ ಹಾಕಿಕೊಳ್ಳಲಿಲ್ಲವೋ ಆಗ, ನ್ಯಾಯಾಲಯದ ಮೊರೆ ಹೋಗಿ ಅಕಾಡೆಮಿಯ ಪ್ರಾದೇಶಿಕ ಕಚೇರಿ ಕಟ್ಟಡ ನಿರ್ಮಾಣಕ್ಕೆ ತಡೆ ತಂದಿದೆ. ಹೀಗಾಗಿ ಅಕಾಡೆಮಿ ಪ್ರಾದೇಶಿಕ ಕಚೇರಿ ಅತಂತ್ರದಲ್ಲಿದೆ. ರಾಜ್ಯ ಸರ್ಕಾರದ ಸ್ಕೌಟ್ಸ್ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ಮಧ್ಯೆ ನಡೆದಿರುವ ನಿ ಕೊಡೆ ನಾ ಬಿಡೆ ಪೈಪೋಟಿ ಮುಂದುವರಿದಿದೆ.

ಚೆನ್ನೈ ಬಿಟ್ಟರೆ ಧಾರವಾಡ:

ದೃಶ್ಯ ಮತ್ತು ಚಿತ್ರಕಲಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಲಲಿತ ಕಲಾ ಅಕಾಡೆಮಿ ಕಾರ್ಯ ಮಾಡುತ್ತಿದೆ. ಇದರ ಪ್ರಾದೇಶಿಕ ಕಚೇರಿ ದಕ್ಷಿಣ ಭಾರತದ ಭಾಗದಲ್ಲಿ ಚೆನ್ನೈ ಬಿಟ್ಟರೆ ಬೇರೆಲ್ಲೂ ಇಲ್ಲ. ಕರ್ನಾಟಕಕ್ಕೂ ಪ್ರಾದೇಶಿಕ ಕಚೇರಿ ಬೇಕು ಎನ್ನುವ ಹೋರಾಟ ನಾಲ್ಕು ದಶಕಗಳಿಂದ ಇತ್ತು. 2023ರಲ್ಲಿ ಅಕಾಡೆಮಿಯ ಪ್ರಾದೇಶಿಕ ಕಚೇರಿಯನ್ನು ಧಾರವಾಡಕ್ಕೆ ಮಂಜೂರಿ ಮಾಡಿತ್ತು. ಆ ಕೂಡಲೇ ರಾಜ್ಯ ಸರ್ಕಾರ ಕೋರ್ಟ್ ವೃತ್ತದ ಬಳಿಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಗುತ್ತಿಗೆ ನೀಡಿರುವ 1.14 ಎಕರೆ ಜಾಗವನ್ನು ಅಕಾಡೆಮಿಗೆ ಮಂಜೂರಿ ಮಾಡಿತ್ತು. ಕಳೆದ 2023ರ ಫೆಬ್ರುವರಿ 20ರಂದು ಕೇಂದ್ರ ಸಂಸ್ಕೃತಿ ಸಚಿವರೇ ಧಾರವಾಡಕ್ಕೆ ಆಗಮಿಸಿ ಇದೇ ಸ್ಥಳದಲ್ಲಿ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಹ ನೆರವೇರಿಸಿದ್ದರು.

ಸೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಕಚೇರಿ ಕಾರ್ಯಕ್ಕೆ ತಡೆ ನೀಡಿದ್ದರಿಂದ ಇಲ್ಲಿ ಪ್ರಾದೇಶಿಕ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿರುವ ಅಡಿಗಲ್ಲು ಅನಾಥವಾಗಿ ಉಳಿದಿದೆ. ಶಂಕುಸ್ಥಾಪನೆಯ ಫ್ಲೆಕ್ಸ್‌ಗಳ ಮೂಲೆ ಸೇರಿದೆ. ಅಕಾಡೆಮಿಗೆ ಪ್ರಾದೇಶಿಕ ಸಂಯೋಜಕರನ್ನು ನೇಮಿಸಲಾಗಿದೆ. ಸಂಯೋಜಕರಿಗೆ ಕಚೇರಿ ಇಲ್ಲ. ಯಾವ ಕಾರ್ಯಗಳನ್ನೂ ಮಾಡುವ ಹಾಗಿಲ್ಲ ಎನ್ನುವುದೇ ಬೇಸರದ ಸಂಗತಿ.

ಲೀಜ್‌ ಅವಧಿ ಮುಗಿದಿದೆ:

ಸದ್ಯ ಈ ಜಾಗದಲ್ಲಿ ಸೌಟ್ಸ್ ಮತ್ತು ಗೈಡ್ಸ್‌ ಕಾರ್ಯಚಟುವಟಿಕೆ ನಡೆಯುತ್ತಿವೆ. ಅಷ್ಟಕ್ಕೂ ಈ ಜಾಗಕ್ಕಾಗಿ ಸ್ಕೌಟ್ಸ್ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಒಂದು ವರ್ಷದಿಂದ ತಿಕ್ಕಾಟ ನಡದಿದೆ. ಇಲ್ಲಿನ 1.14 ಎಕರೆ ಜಾಗವನ್ನು ಅಕಾಡೆಮಿಗೆ ಕೊಡಲು ಸ್ಕೌಟ್ಸ್ ಸಂಸ್ಥೆ ಮುಂದಾಗಿತ್ತು. ಆದರೆ, ಉಳಿದ ಆರು ಗುಂಟೆ ಜಾಗದಲ್ಲಿ ಪಾರಂಪರಿಕವಾದ ಬ್ರಿಟಿಷ್ ಕಾಲದ ಕಟ್ಟಡವಿದೆ. ಇಲ್ಲಿಯೇ ಸಂಸ್ಥೆಯ ಕಚೇರಿ ನಡೆಯುತ್ತಿದೆ. ಇದನ್ನು ಸಹ ಅಕಾಡೆಮಿಗೆ ಕೊಡುವಂತೆ ಜಿಲ್ಲಾಡಳಿತ ಆದೇಶಿಸಿತ್ತು. ಅಲ್ಲದೇ ಸಂಸ್ಥೆಗೆ ನೀಡಿದ ಲೀಜ್ ಅವಧಿಯೂ ಮುಗಿದಿತ್ತು. ಹೀಗಾಗಿ ಎಲ್ಲವನ್ನೂ ಬಿಟ್ಟು ಕೊಡುವಂತೆ ಹೇಳಲಾಗಿತ್ತು. ಆದರೆ, ಈ ಕಟ್ಟಡಕ್ಕೆ ಅದರದೇಯಾದ ಹಿನ್ನೆಲೆ ಇದೆ. ಸಂಸ್ಥೆಗೂ ಕಟ್ಟಡಕ್ಕೂ ಭಾವನಾತ್ಮಕ ಸಂಬಂಧ ಇದೆ. ಹೀಗಾಗಿ ಸಂಸ್ಥೆ ಕಚೇರಿ ಉಳಿಸಿಕೊಳ್ಳಲು ಸರ್ಕಾರದ ಜತೆ ಹೋರಾಟ ಮಾಡುತ್ತಲೇ ಬಂದಿತ್ತು. ಆದರೆ, ಸರ್ಕಾರವೂ ಸರಿಯಾಗಿ ಸ್ಪಂದಿಸದೇ ಇದ್ದಾಗ, ಈಗ ಹೈಕೋರ್ಟ್‌ಗೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಅಕಾಡೆಮಿ ಪ್ರಾದೇಶಿಕ ಕಚೇರಿ ಏನೆಲ್ಲಾ ಕನಸು ಇಟ್ಟಕೊಂಡು ಶುರುವಾಗಿ ಒಂದು ವರ್ಷವಾದರೂ ಯಾವುದೇ ಕಾರ್ಯಚಟುವಟಿಕೆ ಇಲ್ಲದಿರುವುದು ಕಲಾವಿದರಿಗೆ ನೋವು ತಂದಿದೆ. ಕೊನೆ ಪಕ್ಷ ಬೇರೆ ಸ್ಥಳದಲ್ಲಾದರೂ ತಾತ್ಕಾಲಿಕವಾಗಿ ಕಚೇರಿ ಆರಂಭಿಸಲು ಕೇಂದ್ರ ಸಾಂಸ್ಕೃತಿಕ ಮಂತ್ರಾಲಯ ವ್ಯವಸ್ಥೆ ಮಾಡಬೇಕಿದೆ ಎಂದು ಕಲಾವಿದರು ಆಗ್ರಹಿಸುತ್ತಾರೆ. ಧಾರವಾಡಕ್ಕೆ ಕೇಂದ್ರ ಲಲಿತ ಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿ ಬಂದಿದ್ದೇ ದೊಡ್ಡ ಹೆಮ್ಮೆ. ಆದರೆ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಸರ್ಕಾರದ ಜಾಗ ನೀಡಲು ಮೀನಮೀಷ ಎಣಿಸುತ್ತಿರುವುದು ತಪ್ಪು. ಇಲ್ಲೊಂದು ಅದ್ಭುತ ಅಂತಾರಾಷ್ಟ್ರೀಯ ಮ್ಯೂಸಿಯಂ ಹಾಗೂ ಕಲಾ ಗ್ಯಾಲರಿ ಮಾಡುವುದು ಸೇರಿದಂತೆ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿತ್ತು. ಆದರೆ, ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು ಬರುವ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಪ್ರಾದೇಶಿಕ ಕಚೇರಿ ಸಂಯೋಜಕ ಶ್ರೀನಿವಾಸ ಶಾಸ್ತ್ರಿ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ