ಮಕ್ಕಳು ಆಸಕ್ತಿ, ಪ್ರೀತಿಯಿಂದ ಶಿಕ್ಷಣವನ್ನು ಕಲಿಯಲಿ: ಜಿ. ಪ್ರಭು

KannadaprabhaNewsNetwork | Published : Feb 23, 2024 1:54 AM

ಸಾರಾಂಶ

ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರಾಥಮಿಕ ಶಾಲಾ ಶಿಕ್ಷಣ ಮಹತ್ವದ ಘಟ್ಟ. ಈ ಹಂತದಲ್ಲಿ ಮಕ್ಕಳು ಆಸಕ್ತಿ ಮತ್ತು ಪ್ರೀತಿಯಿಂದ ಶಿಕ್ಷಣ ಕಲಿಯಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಜಿ. ಪ್ರಭು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರಾಥಮಿಕ ಶಾಲಾ ಶಿಕ್ಷಣ ಮಹತ್ವದ ಘಟ್ಟ. ಈ ಹಂತದಲ್ಲಿ ಮಕ್ಕಳು ಆಸಕ್ತಿ ಮತ್ತು ಪ್ರೀತಿಯಿಂದ ಶಿಕ್ಷಣ ಕಲಿಯಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಜಿ. ಪ್ರಭು ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆ.ಎಂ.ಎಫ್, ಸಹಯೋಗದಲ್ಲಿ ನಗರದ ಶಿರಾಗೇಟ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆದ ಸಾಯಿ ಶ್ಯೂರ್‌ ರಾಗಿ ಹೆಲ್ತ್ ಮಿಕ್ಸ್‌ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಮಗು ಅಪೌಷ್ಠಿಕತೆಯಿಂದ ಬಳಲಬಾರದು ಎಂಬ ದೃಷ್ಠಿಯಿಂದ ಸರ್ಕಾರ ಬಿಸಿ ಊಟ, ಕ್ಷೀರ ಭಾಗ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಮತ್ತೊಂದು ಭಾಗವಾಗಿ ಪೌಷ್ಠಿಕ ಆಹಾರ ಪೂರೈಸುವ ಉದ್ದೇಶದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ೧ ರಿಂದ ೧೦ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸಾಯಿ ಶೂರ್‌ ರಾಗಿ ಹೆಲ್ತ್ಮಿಕ್ಸ್ ನೀಡುತ್ತಿದ್ದು, ಮಕ್ಕಳು ಈ ಹೆಲ್ತ್‌ಮಿಕ್ಸ್‌ ಕುಡಿಯುವ ಮೂಲಕ ಆರೋಗ್ಯವಂತರಾಗಬೇಕು ಎಂದರು.

ಒಂದು ದೇಶದ ಸಂಪತ್ತು ಎಂದರೆ ಅದು ಆ ದೇಶದ ಮಕ್ಕಳು. ಮಕ್ಕಳು ದೇಶದ ಸಂಪತ್ತಾಗಿ ಬೆಳೆಯಬೇಕೆಂದರೆ ಅವರಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು. ಮಕ್ಕಳಿಗೆ ಆಂತರಿಕ ಶಿಕ್ಷಣದ ಜೊತೆಗೆ ಬಾಹ್ಯ ಕಲೆಯು ಅತ್ಯಗತ್ಯ. ಹೊರಗಿನ ಪ್ರಪಂಚದ ಜ್ಞಾನ ಮಕ್ಕಳಿಗೆ ತಿಳಿಯಬೇಕು. ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಮಕ್ಕಳಲ್ಲಿ ನಾಯಕತ್ವದ ಗುಣಗಳನ್ನು ಕಲಿತು ಉತ್ತಮ ನಾಯಕರಾಗಬೇಕು ಎಂದರು.

ಮಕ್ಕಳಲ್ಲಿ ಮೌಲ್ಯಾಧಾರಿತ ಶಿಕ್ಷಣ ದೊರಕಿಸಿಕೊಡುವಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಮಹತ್ತರವಾದದ್ದು. ಪ್ರಾಥಮಿಕ ಶಿಕ್ಷಣವೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯವಾಗಿದೆ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ ಮಾತನಾಡಿ, ಮಕ್ಕಳಿಗೆ ಹಾಲಿನ ಜೊತೆ ಪೌಷ್ಠಿಕ ಆಹಾರ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಎಲ್ಲಾ ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳು ಹಾಲು ಕುಡಿಯುವುದನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಲಾ, ಡಯಟ್ ಪ್ರಾಂಶುಪಾಲ ಮಂಜುನಾಥ್, ಶಿಕ್ಷಣ ಇಲಾಖೆಯ ಶಿವಸ್ವಾಮಿ, ಟಿ. ಓಬಯ್ಯ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article