ಹಳಿಯಾಳ ಕ್ಷೇತ್ರದಲ್ಲಿ ಸಾಮರಸ್ಯತೆಗೆ ಧಕ್ಕೆ ತರುವಂತಹ ಪ್ರಯತ್ನವನ್ನು ಸ್ಥಳೀಯ ಬಿಜೆಪಿ ಮತ್ತು ಮಾಜಿ ಶಾಸಕರು ಹಾಗೂ ಬೆಂಬಲಿಗರು ಮಾಡುತ್ತಿದ್ದು ಇದನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ಹಳಿಯಾಳ ಕ್ಷೇತ್ರದಲ್ಲಿ ಸಾಮರಸ್ಯತೆಗೆ ಧಕ್ಕೆ ತರುವಂತಹ ಪ್ರಯತ್ನವನ್ನು ಸ್ಥಳೀಯ ಬಿಜೆಪಿ ಮತ್ತು ಮಾಜಿ ಶಾಸಕರು ಹಾಗೂ ಬೆಂಬಲಿಗರು ಮಾಡುತ್ತಿದ್ದು ಇದನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದು ಹಳಿಯಾಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಉಮೇಶ ಬೊಳಶೆಟ್ಟಿ ಹೇಳಿದರು.
ಬುಧವಾರ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಸರೊಳ್ಳಿ ಗ್ರಾಮದಲ್ಲಿ ಅಮಾಯಕ ಕೃಷಿ ಕಾರ್ಮಿಕರ ಮೇಲೆ ಬಿಜೆಪಿ ಜಿಲ್ಲಾ ಓಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ಗಣಪತಿ ಕರಂಜೇಕರ ನಡೆಸಿದ ಮಾರಣಾಂತಿಕ ಹಲ್ಲೆಯನ್ನು ವಿರೋಧಿಸುತ್ತೇವೆ ಎಂದರು.
ಶಾಸಕರು ಈ ಪ್ರಕರಣದ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯವರಿಗೆ ಸೂಚಿಸಿದ್ದರು. ಸ್ಥಳೀಯ ಬಿಜೆಪಿ ಪಕ್ಷವು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ಮಧ್ಯೆ ಭಿನ್ನಾಭಿಪ್ರಾಯ ತಂದು ಗ್ರಾಮದಲ್ಲಿ ಸಾಮಾಜಿಕ ಸಾಮರಸ್ಯತೆಗೆ ದಕ್ಕೆ ಉಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ಬೊಳಶೆಟ್ಟಿ ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಮತೀಯ ಸಾಮರಸ್ಯತೆಯ ವಾತಾವರಣವನ್ನು ಉಳಿಸಲು ಮತ್ತು ಬೆಳೆಸಲು ಕಾಂಗ್ರೆಸ್ ಸದಾ ಬದ್ಧವಾಗಿದೆ. ಶಾಂತಿ ಕದಡಲು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಪ್ರಯತ್ನಗಳಿಗೆ ನಾವು ಯಾವತ್ತೂ ಅವಕಾಶ ನೀಡುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸತ್ಯಜಿತ ಗಿರಿ, ಬಾಬು ಮಿರಾಶಿ, ಅನಿಲ ಫರ್ನಾಂಡೀಸ್, ರೋಹನ್ ಬೃಗಾಂಜಾ, ಜಮೀಲ ಪಟವೇಕರ, ರಾಹುಲ ಸೋಜ ಇದ್ದರು.
ಸಾಮರಸ್ಯತೆ ಹದಗೆಡಿಸಲು ನಡೆಸಿರುವ ಪ್ರಯತ್ನಕ್ಕೆ ಖಂಡನೆ:
ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಮದಲ್ಲಿ ಕೃಷಿ ಕೂಲಿ ಕಾರ್ಮಿಕನ ಮೇಲೆ ಬಿಜೆಪಿ ಮುಖಂಡ ಗಣಪತಿ ಕರಂಜೇಕರ ತಮ್ಮ ಸಹೋದರರ ಜೊತೆಗೂಡಿ ನಡೆಸಿದ ಮಾರಣಾಂತಿಕ ಹಲ್ಲೆಯ ಪ್ರಕರಣವನ್ನು ಖಂಡಿಸಿ ತಾಲೂಕಾಡಳಿತಕ್ಕೆ ಮನವಿ ನೀಡಿದ್ದೆವು. ಈಗ ಬಿಜೆಪಿಯ ಗುಂಪೊಂದು ರಾಜಕೀಯ ಬಣ್ಣ ನೀಡಿ ಗ್ರಾಮಸ್ಥರಲ್ಲಿರುವ ಸಾಮರಸ್ಯತೆ ಹದಗೆಡಿಸಲು ನಡೆಸಿರುವ ಪ್ರಯತ್ನ ಖಂಡಿಸುವುದಾಗಿ ಎಂದು ಗ್ರಾಮಸ್ಥರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಗ್ರಾಮದಲ್ಲಿ ಗೂಂಡಾ ಚಟುವಟಿಕೆಗಳು ನಡೆಯದಿರಲಿ ಎಂಬ ಸದುದ್ದೇಶದಿಂದ ಗ್ರಾಮದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನ ಧರ್ಮಿಯರು, ಸಮುದಾಯದವರು ಪಕ್ಷಾತೀತವಾಗಿ ಸೇರಿಕೊಂಡು ತಹಸೀಲ್ದಾರ ಮತ್ತು ಪೊಲೀಸ್ ಇಲಾಖೆಗೆ, ಮಾಜಿ ಶಾಸಕ ಸುನೀಲ ಹೆಗಡೆಯವರಿಗೆ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲರಿಗೆ ಮನವಿ ಸಲ್ಲಿಸಲಾಗಿತ್ತು. ಗ್ರಾಮದಲ್ಲಿನ ಐಕ್ಯತೆ ನೋಡಲಾಗದೇ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ ಕೆಸರೊಳ್ಳಿ ಗ್ರಾಮಸ್ಥರ ಮನವಿಯು ಒಂದು ರಾಜಕಾರಣವೆಂದು ಬಿಂಬಿಸಲು ಪ್ರಯತ್ನ ನಡೆಸಿ, ಘಟನೆಯ ಬಗ್ಗೆ ಅಲ್ಪಸಂಖ್ಯಾತರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದ್ದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.