ಭಟ್ಕಳ: ಇಲ್ಲಿನ ಮುಟ್ಠಳ್ಳಿಯ ಮೂಡಭಟ್ಕಳದ ಪುರಾತನ ಕೇತಪೈ ನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾ.೨ರಿಂದ ಮಾ.೪ರ ತನಕ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಅಭಿವೃದ್ಧಿ ಮಂಡಳಿಯ ಗೌರವಾಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.
ಅವರು ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ೧೫೪೫ರಲ್ಲಿ ಗೋವಾದ ಕುಡತಿರಿಯಿಂದ ಭಟ್ಕಳಕ್ಕೆ ಬಂದಿದ್ದ ಚಿನ್ನದ ವ್ಯಾಪಾರಿ ಕೇತಪೈ ಎನ್ನುವವರು ಈ ಸುಂದರವಾದ ದೇವಸ್ಥಾನವನ್ನು ನಿರ್ಮಿಸಿದರು ಎನ್ನುವುದು ಇತಿಹಾಸ ಹೇಳುತ್ತದೆ. ಈ ಸಂದರ್ಭದಲ್ಲಿ ರಾಣಿ ಚೆನ್ನಬೈರಾದೇವಿ ಈ ದೇವಾಲಯಕ್ಕೆ ಅನುದಾನ ನೀಡಿದ್ದಾಳೆ ಎಂಬ ಶಾಸನವಿದೆ. ದೇವಾಲಯದ ಕುರಿತು ಆರು ಶಾಸನಗಳ ದಾಖಲೆ ಇದೆ. ಈ ಭಾಗದಲ್ಲಿ ಸಾರಸ್ವತರು ಈ ದೇವಸ್ಥಾನವಲ್ಲದೆ ೧೨ ದೇವಸ್ಥಾನ ನಿರ್ಮಿಸಿದ್ದಾರೆ. ಅತಿ ಪುರಾತನ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಎಲ್ಲ ಸಮಾಜದ ಜನರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿದ್ದೇವೆ. ಮಾ.೩ರಂದು ೧೧:೪೪ಕ್ಕೆ ಸಲ್ಲುವ ವೃಷಭ ಲಗ್ನ ಮುಹೂರ್ತದಲ್ಲಿ ನಾರಾಯಣ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ನೆರವೇರಿಸಲಾಗುವುದು. ನಂತರ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ರಾಜಶೇಖರಾನಂದ ಸ್ವಾಮೀಜಿಗಳಿಂದ ಧಾರ್ಮಿಕ ಪ್ರವಚನೆ ಹಾಗೂ ಆಶೀರ್ವಚನ ನಡೆಯಲಿದೆ. ಶ್ರೀದೇವರಿಗೆ ಬೆಳ್ಳಿ ಕವಚ ಅರ್ಪಿಸಲಾಗುತ್ತದೆ. ಮಾ.೨, ೩ರಂದು ಸಂಜೆ ಧರ್ಮರಕ್ಷಣೆ, ಧರ್ಮಪ್ರಚಾರ ಸಭಾ ಕಾರ್ಯಕ್ರಮ ನಡೆಯಲಿದೆ.ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟ್ರಮಣ ನಾಯ್ಕ, ಶ್ರೀನಿವಾಸ ನಾಯ್ಕ, ಈಶ್ವರ ನಾಯ್ಕ, ರವಿಚಂದ್ರ ನಾಯ್ಕ, ನಾಗರಾಜ ಶೆಟ್ಟಿ, ಕುಮಾರ ನಾಯ್ಕ, ತಿರುಮಲ ನಾಯ್ಕ, ಕೃಷ್ಣ ನಾಯ್ಕ, ಪ್ರಶಾಂತ ಶೆಟ್ಟಿ, ಮೋಹನ ನಾಯ್ಕ ಇದ್ದರು.