ಕನ್ನಡಪ್ರಭ ವಾರ್ತೆ ಧಾರವಾಡ ಭಾರತದ ಮಾಜಿ ಡೆವಿಸ್ ಕಪ್ ಆಟಗಾರ ಮತ್ತು ಒಲಿಂಪಿಕ್ ಪಟು ವಿಷ್ಣುವರ್ಧನ ಸೇರಿದಂತೆ ಪ್ರಮುಖ ಆಟಗಾರರು ಭಾನುವಾರ ಇಲ್ಲಿಯ ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ ರಾಜಾಧ್ಯಕ್ಷ ಪೆವಿಲಿಯನ್ ಅಂಗಣಗಳಲ್ಲಿ ಪ್ರಾರಂಭವಾದ ಐಟಿಎಫ್ ಧಾರವಾಡ ಪುರುಷರ ವಿಶ್ವ ಟೆನಿಸ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಮೊದಲ ಪಂದ್ಯಗಳನ್ನು ಸುಲಭವಾಗಿ ಗೆದ್ದು ಮುಂದಿನ ಸುತ್ತಿಗೆ ಪ್ರವೇಶಿಸಿದರು. ಅಗ್ರ ಶ್ರೇಯಾಂಕ ಪಡೆದಿರುವ ವಿಷ್ಣುವರ್ಧನ ತಮ್ಮ ಎದುರಾಳಿ ಪಾರ್ಥ ಅಗರವಾಲ್ ಅವರನ್ನು 6-3, 6-2ರಿಂದ ಸುಲಭವಾಗಿ ಪರಾಭವಗೊಳಿಸಿದರು. ಇನ್ನೊಂದು ಪಂದ್ಯದಲ್ಲಿ ಸೂರಜ ಪ್ರಬೋಧ ಆರನೇ ಶ್ರೇಯಾಂಕಿತ ಅಥರ್ವ ಶರ್ಮಾ ವಿರುದ್ಧ 6-2, 6-3ರ ಸುಲಭ ಜಯ ಸಾಧಿಸಿದರು. ಅರ್ಹತಾ ಪಂದ್ಯಗಳಿಗೆ ನೇರವಾಗಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಸ್ಥಳೀಯ ಯುವ ಆಟಗಾರ ಅಮರ ಧರೆಣ್ಣವರ ಆರಂಭದಲ್ಲಿ ಉತ್ತಮ ಪ್ರತಿರೋಧ ತೋರಿದರೂ ಆನಂತರ ಎದುರಾಳಿ ವಿಯೆಟ್ನಾಂನ ಹಾ ಮಿನ್ಹ್ ಡುಕ್ ವು ಅವರ ಬಿರುಸಿನ ಆಟಕ್ಕೆ ಮಣಿಯಬೇಕಾಯಿತು. ಹಾ ಮಿನ್ಹ್ 6-2, 6-0 ಅಂಕಗಳಿಂದ ಜಯಶಾಲಿಯಾದರು. ದೀಪಕ ಅನಂತರಾಮು ಇತ್ತೀಚೆಗೆ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದು, 3ನೇ ಶ್ರೇಯಾಂಕಿತ ಫೈಸಲ್ ಕಮರ್ ಅವರಿಗೆ 6-0, 6-4ರಿಂದ ಸುಲಭದ ತುತ್ತಾದರು. ಮಧ್ಯಾಹ್ನ 2ರಿಂದ ಸುರಿದ ಮಳೆಯಿಂದಾಗಿ ಪಂದ್ಯಗಳಿಗೆ ವ್ಯತ್ಯಯ ಉಂಟಾಗಿ ಭಾನುವಾರ ನಡೆಯಬೇಕಿದ್ದ ಐದು ಪಂದ್ಯಗಳು ಸೋಮವಾರಕ್ಕೆ ಮುಂದೂಡಲ್ಪಟ್ಟವು. ಮುಖ್ಯ ಡ್ರಾ ಪಂದ್ಯಗಳು ಮಂಗಳವಾರದಿಂದ ಆರಂಭವಾಗಲಿವೆ. ಅರ್ಹತಾ ಸುತ್ತಿನಿಂದ ಎಂಟು ಆಟಗಾರರು, ವೈಲ್ಡ್ ಕಾರ್ಡ್ ಪ್ರವೇಶ ಮೂಲಕ ನಾಲ್ವರು ಹಾಗೂ ಈಗಾಗಲೇ ಮುಖ್ಯ ಡ್ರಾದಲ್ಲಿರುವ 20 ಆಟಗಾರರು ಮೇನ್ ಡ್ರಾನಲ್ಲಿ ಪಾಲ್ಗೊಳ್ಳಲಿದ್ದಾರೆ. ಅರ್ಹತಾ ಸುತ್ತಿನ ಪ್ರಥಮ ಪಂದ್ಯಗಳ ಫಲಿತಾಂಶಗಳು 1-ವಿಷ್ಣುವರ್ಧನ ವಿರುದ್ಧ ಪಾರ್ಥ ಅಗರವಾಲ್ 6-3, 6-2 3-ಫೈಸಲ್ ಕಮರ್ ವಿರುದ್ಧ ದೀಪಕ ಅನಂತರಾಮು 6-0, 6-4 12-ಹಾ ಮಿನ್ಹ್ ಡುಕ್ ವು (ವಿಯೆಟ್ನಾಂ) ವಿರುದ್ಧ ಅಮರ ಧರೆಣ್ಣವರ 6-2, 6-0 5- ರಣಜೀತ ವಿರಾಳಿ ಮುರುಗೇಶನ್ ವಿರುದ್ಧ ಯಶ್ ಚೌರಾಸಿಯಾ 6-1, 6-2 2- ಲೂಕ್ ಸೋರೆನ್‌ಸೆನ್ (ಆಸ್ಟ್ರೇಲಿಯಾ) ವಿರುದ್ಧ ಅರ್ಜುನ್ ಮಹಾದೇವನ್ 7-6 (4), 6-3 4-ಜಾಕ್ ಕಾರ್ಲಸನ್ ವಿಸ್ಟ್ರಾಂಡ (ಸ್ವೀಡನ್) ವಿರುದ್ಧ ಧೀರಜ್ ಕೋಡಂಚಾ ಶ್ರೀನಿವಾಸನ್ 6-2, 6-3 9-ಎನ್ರಿಕೋ ಗೀಯಾಕೋಮೆನಿ (ಇಟಲಿ) ವಿರುದ್ಧ ಜೇಕ್ ಭಾಂಗಡಿಯಾ (ಅಮೆರಿಕ) 6-1, 6-3 11-ಮಾಧ್ವಿನ್ ಕಾಮತ್ ವಿರುದ್ಧ ಮ್ಯಾಥ್ಯೂ ಓರ್ಯಾಂಡಲ್ (ಆಸ್ಟ್ರೇಲಿಯಾ) 7-6 (2), 6-1 ಸೂರಜ್ ಪ್ರಬೋಧ ವಿರುದ್ಧ ಅಥರ್ವ ಶರ್ಮಾ 6-2, 6-3