- ಮುಂದಿನ ಚುನಾವಣೆಗೆ ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಯತ್ನ: ಮಾಡಾಳ ಮಲ್ಲಿಕಾರ್ಜುನ - - -
ಮುಂಬರುವ ಚುನಾವಣೆಗೆ ಬೇಕಾದ ಆರ್ಥಿಕ ಸಂಪನ್ಮೂಲ ಸಂಗ್ರಹಣೆಗಾಗಿ ಗುಟ್ಕಾ ಬ್ಯಾನ್ ಹೇಳಿಕೆಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ನೀಡುತ್ತಿದ್ದಾರೆ. ರೈತರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಬೇಡಿ ಎಂದು ಚನ್ನಗಿರಿಯ ಅಡಕೆ ಬೆಳೆಗಾರ, ಬಿಜೆಪಿ ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಟ್ಕಾ, ಪಾನ್ ಮಸಾಲ ಬ್ಯಾನ್ ಮಾಡುವ ಬದಲಿಗೆ ಸಿಗರೇಟ್, ಡ್ರಗ್ಸ್, ಮದ್ಯ ಮಾರಾಟ, ಜೂಜಾಟ, ಕ್ಯಾಸಿನೋಗಳನ್ನು ಮೊದಲು ಬ್ಯಾನ್ ಮಾಡಬೇಕು. ಅದನ್ನು ಬಿಟ್ಟು, ಜನರ ಜೀವನದಲ್ಲಿ ಹಾಸು ಹೊಕ್ಕಿರುವ ಅಡಕೆ ವಿಚಾರಕ್ಕೆ ಕೈ ಹಾಕಬೇಡಿ ಎಂದರು.ಚನ್ನಗಿರಿಯನ್ನು ಹಿಂದೆ ಅಡಕೆ ನಾಡು ಎಂಬುದಾಗಿ ಕರೆಯುತ್ತಿದ್ದರು. ಈಗ ಇಡೀ ರಾಜ್ಯದ 142 ತಾಲೂಕುಗಳಲ್ಲಿ ಅಡಕೆ ವಾಣಿಜ್ಯ ಬೆಳೆಯಾಗಿದೆ. ಅಡಕೆಗೆ ಬೆಲೆ ಇದೆಯೆಂದು ರೈತರೂ ಅಡಕೆ ತೋಟ ಮಾಡಿಕೊಂಡಿದ್ದಾರೆ. ಈ ಹಿಂದೆ ಯುಪಿಎ ಸರ್ಕಾರ ಗುಟ್ಕಾ ಬ್ಯಾನ್ ಅನ್ನುತ್ತಿತ್ತು. ಒಂದುವೇಳೆ ಗುಟ್ಕಾ ಬ್ಯಾನ್ ಆದರೆ ರೈತರಿಗೆ ತೀವ್ರ ಅನ್ಯಾಯವಾಗುತ್ತದೆ ಎಂದು ಅವರು ತಿಳಿಸಿದರು.
ಉಡ್ತಾ ಪಂಜಾಬ್‌ನಂತೆ ಉಡ್ತಾ ಬೆಂಗಳೂರು, ಉಡ್ತಾ ದಾವಣಗೆರೆ, ಉಡ್ತಾ ಕರ್ನಾಟಕ ಆಗುವುದನ್ನು ತಡೆಯಲು ಆರೋಗ್ಯ ಸಚಿವ ಖಾದರ್ ಗಮನಹರಿಸಲಿ. ಡ್ರಗ್ಸ್ ಬ್ಯಾನ್ ಮಾಡಿ, ಸಿಗರೇಟ್ ಬ್ಯಾನ್ ಮಾಡಿ. ಮದ್ಯ ಮಾರಾಟವನ್ನು ಬ್ಯಾನ್ ಮಾಡಿ. ಕ್ಯಾಸಿನೋ, ಜೂಜಾಟದ ಅಡ್ಡೆಗಳನ್ನು ಬ್ಯಾನ್ ಮಾಡಿ. ಆದರೆ, ಅಮಾಯಕ ರೈತರ ಮೇಲೆ ಗಧಾ ಪ್ರಹಾರವನ್ನು ಆರೋಗ್ಯ ಸಚಿವ ಖಾದರ್ ಮಾಡಬಾರದು. ಈ ಬಗ್ಗೆ ಸರ್ಕಾರ ಗಮನಹರಿಸಲಿ ಎಂದು ತಿಳಿಸಿದರು.
- - -