ಜಗದೀಶ ವಿರಕ್ತಮಠ
ಕನ್ನಡಪ್ರಭ ವಾರ್ತೆ ಬೆಳಗಾವಿಇತ್ತೀಚೆಗೆ ರಾತ್ರಿ ಸಮಯದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸರು ಸಂಚಾರಿ ನಿಯಮ ಪಾಲನೆ ಮಾಡುವ ವಾಹನಗಳ ವಿರುದ್ಧ ಸಮರ ಸಾರಿದ್ದಾರೆ. ಈ ಮೂಲಕ ಅಪಘಾತಗಳನ್ನು ನಿಯಂತ್ರಿಸುವ ಜತೆಗೆ ಅಮಾಯಕರ ಜೀವ ರಕ್ಷಣೆ ಮಾಡುವ ಸಂಕಲ್ಪ ತೊಟ್ಟಿರುವ ಪೊಲೀಸರು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಹೌದು, ರಾತ್ರಿ ಸಮಯದಲ್ಲಿ ರಸ್ತೆ ಬದಿ ನಿಂತಿರುವ ಹಾಗೂ ಸಂಚರಿಸುವ ವಾಹನಗಳಿಗೆ ವೇಗವಾಗಿ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಮೃತಪಟ್ಟ ವರ ಸಂಖ್ಯೆ ಹೆಚ್ಚುತ್ತಿದೆ.ಈ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣ ಬಗ್ಗೆ ಅರಿತಕೊಂಡು ಜಿಲ್ಲಾ ಪೊಲೀಸರು ಆವಲೋಕಿಸಿದಾಗ ಹೆಚ್ಚಿನ ಪ್ರಕರಣ ರಾತ್ರಿ ಸಮಯದಲ್ಲಿ ಹಿಂಬದಿ ಬರುವ ವಾಹನ ಚಾಲಕರಿಗೆ ಸ್ಪಷ್ಟವಾಗಿ ಕಾಣದಿರುವುದರಿಂದ ಹಿಂದಿನಿಂದ ಡಿಕ್ಕಿ ಹೊಡೆದಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಹೀಗಾಗಿ ಈ ಬಗ್ಗೆ ಅರಿತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು, ರಾತ್ರಿ ಸಮಯದಲ್ಲಿನ ಅಪಘಾತ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್, ಲಾರಿ, ಟ್ಯಾಂಕರ್, ಎತ್ತಿನ ಬಂಡಿ, ಟೆಂಪೋ ಸೇರಿದಂತೆ ಇನ್ನಿತರ ಸರಕು ವಾಹನಗಳ ಹಿಂಬದಿಗೆ ರಿಪ್ಲೆಕ್ಟರ್ (ವಾಹನ ಇರುವಿಕೆಯ ಪ್ರತಿಫಲನ) ಬಣ್ಣ ಹಚ್ಚದ ಹಾಗೂ ಹೆಚ್ಚಿನ ಶಬ್ದ ಹೊರಹಾಕುವ (ಸೌಂಡ್ ಸಿಸ್ಟಮ್) ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ರಾತ್ರಿ ಸಮಯದಲ್ಲಿ ಕಬ್ಬು ಲಾರಿಗಳು ಸಂಚರಿಸುವಾಗ ಅಥವಾ ರಸ್ತೆ ಬದಿ ನಿಂತಿರುವ ಸಂದರ್ಭದಲ್ಲಿ ಅಪಘಾತ ನಡೆದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಬೆಳಗಿನ ಜಾವ ವಾಹನ ಚಾಲಕರು ನಿದ್ರೆ ಮಂಪರಿನಲ್ಲಿರುವುದರಿಂದ ಮುಂದೆ ಸಂಚರಿಸುತ್ತಿರುವ ಅಥವಾ ನಿಂತಿರುವ ವಾಹನಗಳ ಬಗ್ಗೆ ಸ್ಪಷ್ಟತೆ ಗೊತ್ತಾಗದೆ ಡಿಕ್ಕಿ ಹೊಡೆದಿರುವ ಪ್ರಕರಣಗಳೇ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಜ.12ರವೆಗೆ ಜಿಲ್ಲೆಯಲ್ಲಿ ಟೇಪ್ ಹಚ್ಚಿಕೊಂಡು ಹೋಗುತ್ತಿರುವ 57 ಟ್ಯಾಕ್ಟರ್‌ಗಳ ವಿರುದ್ಧ ಕ್ರಮ ಜರುಗಿಸಿ ಸೌಂಡ್ ಸಿಸ್ಟಮ್‌ಗಳನ್ನು ಜಪ್ತಿ ಮಾಡಿದ್ದಾರೆ. ಅದರಂತೆ ರಿಪ್ಲೆಕ್ಟರ್ (ವಾಹನ ಇರುವಿಕೆಯ ಪ್ರತಿಫಲನ) ಇಲ್ಲದೇ ಸಂಚರಿಸುವತ್ತಿದ್ದ 28 ವಾಹನಗಳ ವಿರುದ್ಧ ಪ್ರರಕರಣ ದಾಖಲಿಸಿ ₹14000 ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಕ್ಕರೆ ಕಾರ್ಖಾನೆಗಳಿರುವುದರಿಂದ ಎಲ್ಲ ಕಾರ್ಖಾನೆಗಳ ಆಡಳಿತ ಮಂಡಳಿಗಳಿಗೂ ಅಪಘಾತ ಪ್ರಕರಣಗಳ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ. ಅಲ್ಲದೇ ಸಂಚಾರಿ ನಿಯಮಗಳ ಪಾಲನೆ, ಹೆಚ್ಚಿನ ಭಾರ ಹಾಕುವುದರಿಂದ ವಾಗನಗಳ ರಸ್ತೆ ಬದಿ ಕೆಟ್ಟು ಅಥವಾ ಪಂಕ್ಚರಾಗಿ ನಿಲ್ಲುತ್ತಿರುವ ಕುರಿತು, ಕಡ್ಡಾಯವಾಗಿ ವಾಹನಗಳ ವಿಮೆ, ನೊಂದಣಿ, ಚಾಲನಾ ಪರವಾನಿಗೆ ಪತ್ರಗಳನ್ನು ವಾಹನದೊಂದಿಗೆ ಇಟ್ಟುಕೊಳ್ಳುವ ಬಗ್ಗೆ ಹಾಗೂ ಕಾರ್ಖಾನೆಗಳಿಗೆ ಬರುವ ಎಲ್ಲ ವಾಹನಗಳಿಗೆ ರಿಪ್ಲೆಕ್ಟ್‌ರ ಹಚ್ಚುವ ಕುರಿತು ತಿಳುವಳಿಕೆ ನೀಡುವ ಕಾರ್ಯ ಮಾಡುತ್ತಿದ್ದಾರೆ.ಮುಂದಿನ ವಾಹನದ ಕುರಿತು ಸ್ಪಷ್ಟತೆ ಗೊತ್ತಾದೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಜಿಲ್ಲೆಯಲ್ಲಿ ಸಂಚರಿಸುವ ಟ್ಯಾಕ್ಟರ್, ಲಾರಿ, ಟ್ಯಾಂಕರ್ ಸೇರಿದಂತೆ ಇನ್ನೀತರ ಸರಕು ಸಾಗಾಟ ಮಾಡುವ ವಾಹನಗಳಿಗೆ ಹಿಂಬದಿ ರಾತ್ರಿ ಸಮಯದಲ್ಲಿ ಪ್ರಕಾಶಿಸುವ (ರಿಪ್ಲೆಕ್ಟರ್) ಅಳವಡಿಸದ ವಾಹನಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಅಲ್ಲದೇ ಜ.12ರವರೆಗೆ ಜಿಲ್ಲೆಯಲ್ಲಿ 57 ಸೌಂಡ್ ಸಿಸ್ಟಿಮ್ ಜಪ್ತು, ರಿಪ್ಲೆಕ್ಟರ್ 28 ವಾಹನಗಳ ವಿರುದ್ಧ ಪ್ರರಕರಣ ದಾಖಲಿಸಿ ₹14000 ದಂಡ ವಿಧಿಸಲಾಗಿದೆ.-ಡಾ.ಭೀಮಾಶಂಕರ ಗುಳೇದ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೆಳಗಾವಿ.