ಕನ್ನಡಪ್ರಭ ವಾರ್ತೆ ರಾಮನಗರ
ಸಚಿವ ಈಶ್ವರ ಬಿ ಖಂಡ್ರೆ ಅವರು ಕಾರಿನಲ್ಲೇ ಜಿಪಂ ಸಿಇಒ ಜೊತೆಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಮಸ್ಯೆಗಳ ಕುರಿತಂತೆ ಸಮಾಲೋಚಿಸುವ ಮೂಲಕ ಸಮಯದ ಸದುಪಯೋಗ ಪಡಿಸಿಕೊಂಡಿದ್ದಾರೆ. ಇಲಾಖೆಯ ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ತೆರಳುವ ಮಾರ್ಗದಲ್ಲಿ ಬೆಂಗಳೂರು ಗಡಿಯಲ್ಲಿ ಸಿಇಒ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡ ಸಚಿವರು ಜಿಲ್ಲಾ ಗಡಿ ಅಂತ್ಯವಾಗುವವರೆಗೆ ಜಿಪಂ, ತಾಪಂ ಹಾಗೂ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಒಂದೊಮ್ಮೆ ಕೆರೆ ಒತ್ತುವರಿ ಪ್ರದೇಶದಲ್ಲಿ ಮನೆಗಳು ನಿರ್ಮಾಣವಾಗಿದ್ದಲ್ಲಿ, ಮನೆ ಹೊರತು ಪಡಿಸಿ ಉಳಿದ ಒತ್ತುವರಿಯ ಸರ್ವೇ ನಡೆಸಿ ಒತ್ತುವರಿ ತೆರವು ಮಾಡಲು ಮತ್ತು ರಾಜಕಾಲುವೆಗಳ ಅಡೆತಡೆ ನಿವಾರಿಸಿ, ಪುನಶ್ಚೇತನಗೊಳಿಸುವಂತೆಯೂ ಸೂಚಿಸಿದರು.ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಮತ್ತು ದಾಖಲೆ ಇಲ್ಲದ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಅಭಿಯಾನ ಆರಂಭಿಸಿದ್ದು, ಅರ್ಜಿಗಳು ಬಂದ ಕೂಡಲೇ ಪಿಡಿಓಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಯಾವುದೇ ವಿಳಂಬವಿಲ್ಲದಂತೆ ಇ-ಸ್ವತ್ತು ವಿತರಿಸಲು ಕ್ರಮ ವಹಿಸುವಂತೆ ಸೂಚಿಸಲು ತಿಳಿಸಿದರು.
ವಿಬಿಜಿ ರಾಮ್ ಜಿ ಅಡಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ದನದ ಕೊಟ್ಟಿಗೆ, ಕುರಿ, ಮೇಕೆ ಕೊಟ್ಟಿಗೆ, ಕೊಳವೆ ಬಾವಿ ಮರುಪೂರಣ ಪಿಟ್, ಕೃಷಿ ಹೊಂಡ ಇತ್ಯಾದಿ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆಯೂ ತಿಳಿಸಿದರು.
ಮುಂದಿನ ಬೇಸಿಗೆಯಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಗಳಿದ್ದು, ಜಲ ಬಜೆಟಿಂಗ್ ಮಾಡಿ, ಯಾವ ಗ್ರಾಮದಲ್ಲಿ ಸಮಸ್ಯೆ ಎದುರಾಗಬಹುದು ಎಂದು ಅಂದಾಜು ಮಾಡಿ, ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ, ಜಲ ಮೂಲಗಳನ್ನು ಗುರುತಿಸುವಂತೆ ಹೇಳಿದರು.
ವಿಬಿಜಿ ರಾಮ್ ಜಿ ಅಡಿಯಲ್ಲಿ ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿ ಆಗಬೇಕು. ಈ ಬಗ್ಗೆ ತಾಲೂಕು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಕೂಲಿ ಪಾವತಿ ಆಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಈಶ್ವರ ಖಂಡ್ರೆ ತಿಳಿಸಿದರು.