ಬೆಂಗಳೂರು : ಕಾರಿನ ಮಿರರ್‌ಗೆ ದ್ವಿಚಕ್ರ ವಾಹನ ತಾಕಿದ ಕಾರಣಕ್ಕೆ ರೊಚ್ಚಿಗೆದ್ದು ಸುಮಾರು ಎರಡು ಕಿ.ಮೀ. ದ್ವಿಚಕ್ರ ವಾಹನವನ್ನು ಹಿಂಬಾಲಿಸಿ ಕಾರಿನಿಂದ ಗುದ್ದಿಸಿ ಸವಾರನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ದಂಪತಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರಕೆರೆ ನಿವಾಸಿಗಳಾದ ಮನೋಜ್ (32) ಮತ್ತು ಆತನ ಪತ್ನಿ ಆರತಿ ಶರ್ಮಾ (29) ಬಂಧಿತರು. ಅ.25ರಂದು ತಡರಾತ್ರಿ ಸುಮಾರು 12 ಗಂಟೆಗೆ ನಟರಾಜ ಲೇಔಟ್ ಈ ಘಟನೆ ನಡೆದಿದೆ. ಕೆಂಬತ್ತಹಳ್ಳಿ ನಿವಾಸಿಯಾದ ದರ್ಶನ್ (22) ಹತ್ಯೆಯಾದ ದ್ವಿಚಕ್ರ ವಾಹನ ಸವಾರ. ಈತನ ಸ್ನೇಹಿತ ವರುಣ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಮೃತ ದರ್ಶನ್ ಸಹೋದರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ ಮೂಲದ ಮನೋಜ್ ಮತ್ತು ಜಮ್ಮುಕಾಶ್ಮೀರ ಮೂಲದ ಆರತಿ ಶರ್ಮಾ ಪರಸ್ಪರ ಪ್ರೀತಿಸಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಮನೋಜ್ ಕಲಾರಿಪಯಟ್ಟು ತರಬೇತುದಾರನಾದರೆ, ಪತ್ನಿ ಆರತಿ ಶರ್ಮಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿ ಕಳೆದ ಎಂಟು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಕೆಂಬತ್ತಹಳ್ಳಿಯ ದರ್ಶನ್ ಮತ್ತು ಉತ್ತರಹಳ್ಳಿಯ ವರುಣ್ ಸ್ನೇಹಿತರಾಗಿದ್ದು, ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು.
ಮನೋಜ್ ಮತ್ತು ಆರತಿ ಶರ್ಮಾ ದಂಪತಿ ಅ.25ರಂದು ತಡರಾತ್ರಿ ತಮ್ಮ ಕಾರಿನಲ್ಲಿ ನಟರಾಜ ಲೇಔಟ್ ಮಾರ್ಗವಾಗಿ ಮನೆ ಕಡೆಗೆ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ಎದುರಿನಿಂದ ದರ್ಶನ್ ಮತ್ತು ವರುಣ್ ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಹೊರಟಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ದರ್ಶನ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಮನೋಜ್ ಅವರ ಕಾರಿನ ಮಿರರ್‌ಗೆ ತಾಕಿದೆ. ಅದಕ್ಕಾಗಿ ದರ್ಶನ್ ಕ್ಷಮೆ ಕೇಳಿ ದ್ವಿಚಕ್ರ ವಾಹನ ನಿಲ್ಲಿಸದೆ ಮುಂದಕ್ಕೆ ಹೊರಟ್ಟಿದ್ದಾರೆ.
ಕಾರಿನ ಮಿರರ್‌ಗೆ ದ್ವಿಚಕ್ರ ವಾಹನ ತಾಕಿದ್ದರಿಂದ ರೊಚ್ಚಿಗೆದ್ದ ಮನೋಜ್ ದಂಪತಿ ಕಾರನ್ನು ಯು ಟರ್ನ್ ಮಾಡಿ ಸುಮಾರು 2 ಕಿ.ಮೀ. ದೂರ ಹಿಂಬಾಲಿಸಿ ದರ್ಶನ್ ಹಾಗೂ ವರುಣ್ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ದರ್ಶನ್ ಮತ್ತು ವರುಣ್ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ದರ್ಶನ್‌ಗೆ ಗಂಭೀರವಾಗಿ ಗಾಯಗೊಂಡರೆ, ವರುಣ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಆರೋಪಿ ದಂಪತಿ ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ. ಈ ವೇಳೆ ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ರಕ್ತಸ್ರಾವಾಗಿ ಚಿಕಿತ್ಸೆ ಫಲಿಸದೆ ದರ್ಶನ್ ಮೃತಪಟ್ಟಿದ್ದಾನೆ. ವರುಣ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಿಸಿಟಿವಿಯಲ್ಲಿ ಕೃತ್ಯ ಬಯಲು:
ಈ ಸಂಬಂಧ ದರ್ಶನ್ ಸಹೋದರಿ ನೀಡಿದ ದೂರಿನ ಮೇರೆಗೆ ಜೆ.ಪಿ.ನಗರ ಸಂಚಾರ ಠಾಣೆ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಸಂಚಾರ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಈ ವೇಳೆ ಉದ್ದೇಶಪೂರ್ವಕವಾಗಿಯೇ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದಿರುವುದು ಬೆಳಕಿಗೆ ಬಂದಿದೆ. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳ ವಿಳಾಸ ಪತ್ತೆ ಹಚ್ಚಿ ಮನೋಜ್ ಮತ್ತು ಆತನ ಪತ್ನಿ ಆರತಿ ಶರ್ಮಾರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಉದ್ದೇಶ ಪೂರ್ವವಾಗಿಯೇ ಅಪಘಾತ ಎಸಗಿದ್ದಾಗಿ ದಂಪತಿ ಹೇಳಿಕೆ ನೀಡಿದ್ದಾರೆ. ಅದರಂತೆ ಈ ಪ್ರಕರಣವನ್ನು ಪುಟ್ಟೇನಹಳ್ಳಿ ಠಾಣೆಗೆ ವರ್ಗಾಯಿಸಿದ್ದು, ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖಕ್ಕೆ ಮಾಸ್ಕ್ ಧರಿಸಿ ಮತ್ತೆ ಬಂದರು!
ದ್ವಿಚಕ್ರ ವಾಹನಕ್ಕೆ ಕಾರಿನಿಂದ ಗುದ್ದಿ ಸುಮಾರು ಸುಮಾರು ಎರಡು ಕಿ.ಮೀ. ಮುಂದೆ ಹೋಗಿದ್ದ ಮನೋಜ್ ದಂಪತಿ ಬಳಿಕ ಮುಖಕ್ಕೆ ಮಾಸ್ಕ್ ಧರಿಸಿ ಘಟನಾ ಸ್ಥಳಕ್ಕೆ ನಡೆದುಕೊಂಡು ಬಂದಿದ್ದರು. ಅಪಘಾತದ ವೇಳೆ ನೆಲಕ್ಕೆ ಬಿದ್ದಿದ್ದ ತಮ್ಮ ಕಾರಿನ ಬಿಡಿ ಭಾಗಗಳನ್ನು ಆಯ್ದುಕೊಂಡು ಎಸ್ಕೇಪ್ ಆಗಿದ್ದರು. ಈ ದೃಶ್ಯವೂ ಸಹ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.