ಕನ್ನಡಪ್ರಭ ವಾರ್ತೆ ಮೈಸೂರು
ಅವದೂತ ದತ್ತಪೀಠದ ವತಿಯಿಂದ ಫೆ.14ರಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಾಮೂಹಿಕ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞ ಆಯೋಜಿಸಲಾಗಿದೆ ಎಂದು ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.ನಗರದ ಅವಧೂತ ದತ್ತಪೀಠದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.14ರ ಬೆಳಗ್ಗೆ 9ಕ್ಕೆ ಹನುಮಾನ್ ಚಾಲೀಸ ಪಾರಾಯಣ, ಸಂಜೆ ಕನ್ನಡ ದಿವ್ಯ ನಾಮ ಸಂಕರ್ತಪನ ಆಯೋಜಿಸಲಾಗಿದೆ. ಸಾಮೂಹಿಕ ಪಾರಾಯಣಕ್ಕಾಗಿ ಸುಮಾರು 30 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸುಮಾರು 45 ಸಾವಿರ ಮಂದಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದು, ಭಾಗವಹಿಸಿದವರೆಲ್ಲರಿಗೂ ಹನುಮ ರಕ್ಷೆ ವಿತರಿಸಲಾಗುವುದು ಎಂದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಒಗ್ಗೂಡಿ ಹನುಮಾನ್ ಚಾಲೀಸ ಪಾರಾಯಣ ಮಾಡಲಿದ್ದಾರೆ. ತುಳಸೀದಾಸರು ರಚಿಸಿರುವ ಹನುಮಾನ್ ಚಾಲೀಸ ಅತ್ಯಂತ ಪವಿತ್ರವಾದದ್ದು ಹಾಗೂ ಸುಂದರಕಾಂಡ ಮತ್ತು ಸಂಪೂರ್ಣ ರಾಮಾಯಣದ ಸಾರವನ್ನು ಒಳಗೊಂಡಿದೆ ಎಂದರು.ಈ ಹಿಂದೆ ತೆನಾಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷದಷ್ಟು ಭಕ್ತರು ಪಾಲ್ಗೊಂಡು ವಿಶ್ವ ದಾಖಲೆ ನಿರ್ಮಿಸಿದ್ದರು. ಹನುಮಾನ್ ಚಾಲೀಸ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ಹಾಡಬಹುದಾದ ಸುಲಭ ಹಾಗೂ ಶಕ್ತಿಶಾಲಿ ಸ್ತೋತ್ರ. ಹನುಮಂತನು ರಕ್ಷಕನಾಗಿದ್ದು, ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುತ್ತಾನೆ. ಲೋಕ ಕಲ್ಯಾಣಕ್ಕಾಗಿ ಮತ್ತು ಜಗತ್ತಿನ ಒಳಿತಿಗಾಗಿ ಈ ಸಾಮೂಹಿಕ ಪ್ರಾರ್ಥನೆ ಆಯೋಜಿಸಲಾಗಿದೆ ಎಂದರು.
ಶಿವರಾತ್ರಿಯ ಮಹತ್ವ:
ಫೆ.15ರಂದು ಶಿವರಾತ್ರಿ ಹಬ್ಬವಿರುವುದು ಈ ಕಾರ್ಯಕ್ರಮದ ವಿಶೇಷತೆಯನ್ನು ಹೆಚ್ಚಿಸಿದೆ. ಹನುಮಂತನು ಶಿವನ ಅಂಶ ಹಾಗೂ ರಾಮನ ಪ್ರಿಯ ಭಕ್ತನಾಗಿದ್ದು, ಈ ಸಂದರ್ಭದಲ್ಲಿ ಹನುಮಾನ್ ಚಾಲೀಸ ಪಾರಾಯಣ ಮಾಡುವುದು ಅತ್ಯಂತ ಫಲಪ್ರದ ಎಂದರು.
ಒಬ್ಬರೇ ಪ್ರಾರ್ಥಿಸುವುದಕ್ಕಿಂತ ಸಾಮೂಹಿಕವಾಗಿ ಪ್ರಾರ್ಥಿಸುವುದರಲ್ಲಿ ಅಪಾರ ಶಕ್ತಿಯಿದೆ. ಪುರಾಣಗಳ ಪ್ರಕಾರ, ರಾಮಾವತಾರಕ್ಕೆ ಮುನ್ನ 33 ಕೋಟಿ ದೇವತೆಗಳು ಒಗ್ಗೂಡಿ ಪ್ರಾರ್ಥಿಸಿದಾಗ ಭಗವಂತನು ಪ್ರತ್ಯಕ್ಷನಾಗಿ ರಾವಣ ಸಂಹಾರದ ಭರವಸೆ ನೀಡಿದ್ದನು. ಅದೇ ರೀತಿ, ಲಕ್ಷಾಂತರ ಜನರು ಒಟ್ಟಾಗಿ ಸೇರಿ ಹನುಮಾನ್ ಚಾಲೀಸ ಪಾರಾಯಣ ಮಾಡಿದಾಗ ಪ್ರತಿಯೊಬ್ಬರಿಗೂ ಆ ಸಂಪೂರ್ಣ ಪಾರಾಯಣದ ಪುಣ್ಯ ಲಭಿಸುತ್ತದೆ ಎಂದರು.ಫೆ.14 ದಿನದಂದೇ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞಕ್ಕೆ ಏಕೆ ಆದ್ಯತೆ ನೀಡಿದ್ದೇವೆ ಎಂದರೆ ಆ ದಿನ ಸೀತಾ- ರಾಮರು ಒಂದಾದ ದಿನ. ಹೀಗಾಗಿ, ಆ ದಿನವನ್ನು ಆಯ್ಕೆ ಮಾಡಲಾಗಿದೆ. ಹನುಮಾನ್ ಚಾಲೀಸ ಸಂದರ್ಭದಲ್ಲಿ ಪ್ರತಿಯೊಬ್ಬ ಭಕ್ತರಿಗೂ ಅಂದು ಪ್ರಸಾದ ವಿನಿಯೋಗವನ್ನು ಸಹ ಏರ್ಪಡಿಸಿದ್ದೇವೆ. ಈ ಮಹಾಯಜ್ಞಕ್ಕೆ ನಮ್ಮೊಂದಿಗೆ ಮೈಸೂರಿನ ಹಲವಾರು ಸಂಘ ಸಂಸ್ಥೆಗಳು ಸಹ ಕೈಜೋಡಿಸಿವೆ ಎಂದರು.
ಇದೇ ವೇಳೆ ಹನುಮನ ಸ್ತಬ್ಧಚಿತ್ರ, ಪ್ರಚಾರ ವಾಹನಗಳಿಗೆ ಶ್ರೀಗಳು ಚಾಲನೆ ನೀಡಿದರು. ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮೊದಲಾದವರು ಇದ್ದರು.ಕರ್ನಾಟಕವು ಹನುಮನ ನಾಡು. ಇಲ್ಲಿನ ಭಕ್ತರೆಲ್ಲರೂ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಹನುಮಂತನ ಕೃಪೆಗೆ ಪಾತ್ರರಾಗಬೇಕು. ನಿಮ್ಮ ಜೊತೆಯಲ್ಲಿ ನಾನೂ ಇರುತ್ತೇನೆ, ನಾನೂ ಹಾಡುತ್ತೇನೆ. ಹನುಮಂತನ ರಕ್ಷೆ ಎಲ್ಲರಿಗೂ ಸಿಗಲಿ. ಸಾಮೂಹಿಕವಾಗಿ ಎಲ್ಲರೂ ಸೇರಿದಾಗ, ಒಬ್ಬೊಬ್ಬರ ಪ್ರಾರ್ಥನೆಯ ಫಲವೂ ಎಲ್ಲರಿಗೂ ದೊರೆಯುತ್ತದೆ. ಇದುವೇ ಸಾಮೂಹಿಕ ಪ್ರಾರ್ಥನೆಯ ವಿಶೇಷ. ಬನ್ನಿ ಎಲ್ಲರೂ ಸೇರಿ ಹನುಮಾನ್ ಚಾಲೀಸ ಪಾರಾಯಣ ಮಾಡೋಣ.- ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಅವಧೂತ ದತ್ತಪೀಠ