ಕನ್ನಡಪ್ರಭ ವಾರ್ತೆ ಮೈಸೂರು
ಕೃತಕ ಬುದ್ಧಿಮತ್ತೆ (ಎಐ) ಜೀವನವನ್ನು ಹೆಚ್ಚು ಚತುರ, ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸುವ ಯುಗದಲ್ಲಿ ನಾವಿದ್ದೇವೆ. ಅದು ಮೋಸವನ್ನೂ ಹಿಂದಿನಿಗಿಂತ ಹೆಚ್ಚು ನಂಬಿಕೆ ಮೂಡಿಸುವಂತೆ ಮಾಡಬಹುದು. ಹೀಗಾಗಿ, ಅಧಿಕೃತ ಆಪ್ ಸ್ಟೋರ್ ಗಳಿಂದ ಮಾತ್ರ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ನಗರ ಸೆನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನಂದೀಶ್ ಕುಮಾರ್ ತಿಳಿಸಿದರು.ನಗರದ ಜಿಪಂ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮದಲ್ಲಿ ಅವರು, ಇಂಟರ್ನೆಟ್ ದಿನ ಸ್ಮಾರ್ಟ್ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು, ಎಐನ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಅನ್ವೇಷಿಸುವುದರ ಕುರಿತು ಮಾತನಾಡಿದರು.
ಇನ್ಸ್ಟಾಗ್ರಾಮ್, ಫೇಸ್ ಬುಕ್ ಅಂತಹ ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಅತಿ ಹೆಚ್ಚು ಜನರು ಮೋಸ ಹೋಗುತ್ತಿದ್ದಾರೆ. ಹೀಗಾಗಿ, ಜನರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಸೈಬರ್ ಕ್ರೈಂ ಬಗ್ಗೆ ಶಾಲಾ ಮಟ್ಟದಿಂದಲೂ ಸೋಷಿಯಲ್ ಮೀಡಿಯಾ ಎಐನ ಬಗ್ಗೆ ಮಾಹಿತಿ ತಿಳಿಸಬೇಕು ಎಂದರು.ಸೋಷಿಯಲ್ ಮೀಡಿಯಾಗಳಲ್ಲಿ ಪರ್ಸನಲ್ ವಿಷಯಗಳನ್ನು ಹಂಚಿಕೊಳ್ಳಬಾರದು. ಎಐನಿಂದ ಇನ್ಸ್ಟಾಗ್ರಾಮ್ ನಲ್ಲಿ ಬರುವ ರೀಲ್ಸ್ ಗಳ ಮೂಲಕ ಲಿಂಕ್ ಗಳನ್ನು ಅತಿ ಹೆಚ್ಚು ಫಾರ್ ವರ್ಡ್ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿ ಆಗುತ್ತಿದೆ ಎಂದರು.
ಪ್ಲೇ ಸ್ಟೋರ್ ಮತ್ತು ಆಪ್ ಲ್ ಸ್ಟೋರ್ ಮೂಲಕ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಬೇರೆ ಇನ್ಯಾವುದೇ ಅಪ್ಲಿಕೇಶನ್ ಗಳಲ್ಲಿ ಅಪ್ ಡೌನ್ಲೋಡ್ ಮಾಡಬಾರದು. ದೇಶದಲ್ಲಿ ಕಡಿಮೆ ಸೈಬರ್ ಕ್ರೈಂ ಅಪರಾಧದಲ್ಲಿ ತಮಿಳುನಾಡು 1 ಸ್ಥಾನದಲ್ಲಿದೆ ಕರ್ನಾಟಕ 5ನೇ ಸ್ಥಾನದಲ್ಲಿದೆ ಎಂದರು.
ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ 48 ಕೋಟಿ ವಂಚನೆಯಾಗಿದೆ. ಹೀಗಾಗಿ, ಯಾವುದೇ ಒಟಿಪಿ ಅಥವಾ ರಹಸ್ಯ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬಾರದು. ಆನ್ ಲೈನ್ ನಲ್ಲಿ ಅತಿಯಾದ ಹಂಚಿಕೆಯನ್ನು ತಪ್ಪಿಸುವುದು, ಆ್ಯಪ್ ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಗೌಪ್ಯತಾ ಸೆಟ್ಟಿಂಗ್ ಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ ಮಾತನಾಡಿ, ಇಂಟರ್ನೆಟ್ ಮತ್ತು ಅದರ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯ ಬಗ್ಗೆ ಬಳಕೆದಾರರನ್ನು ಜಾಗೃತಗೊಳಿಸಬೇಕು. ಸೈಬರ್ ನೈರ್ಮಲ್ಯಕ್ಕಾಗಿ ಉತ್ತಮ ಅಭ್ಯಾಸಗಳನ್ನು ಉತ್ತೇಜಿಸಿ ಪ್ರಮುಖ ಸೈಬರ್ ಬೆದರಿಕೆಗಳು ಮತ್ತು ತಗ್ಗಿಸುವಿಕೆ ತಂತ್ರಗಳ ಬಗ್ಗೆ ಬಳಕೆದಾರರಿಗೆ ಶಿಕ್ಷಣ ನೀಡಬೇಕು ಎಂದರು.ಜಿಪಂ ಉಪ ಕಾರ್ಯದರ್ಶಿಗಳಾದ ಬಿ.ಎಂ. ಸವಿತಾ, ಭೀಮಪ್ಪ, ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ, ಮುಖ್ಯ ಲೆಕ್ಕಧಿಕಾರಿ ಸಿದ್ದಗಂಗಮ್ಮ, ಸೈಬರ್ ಕ್ರೈಂ ಇನ್ಸ್ ಪೆಕ್ಟರ್ ಮಹೇಶ್ ಕುಮಾರ್ ಮೊದಲಾದವರು ಇದ್ದರು.