ಕಿರಾತಕ ಎಚ್ ಡಿಕೆಯೇ ವಿನಃ ನಮ್ಮ ನಾಯಕರಲ್ಲ!; ಶಾಸಕ ಇಕ್ಬಾಲ್ ಹುಸೇನ್

KannadaprabhaNewsNetwork |  
Published : Mar 13, 2024, 02:06 AM IST
12ಕೆಆರ್ ಎಂಎನ್ 1.ಜೆಪಿಜಿಶಾಸಕ ಇಕ್ಬಾಲ್ ಹುಸೇನ್  | Kannada Prabha

ಸಾರಾಂಶ

ಜನ ಅವರ (ಜೆಡಿಎಸ್​​) ಸ್ಥಾನಮಾನ ಎಲ್ಲಿದೆ ಎಂದು ತೋರಿಸಿದ್ದಾರೆ. ಒಂದು ಕಾಲದಲ್ಲಿ‌ ಜನರು ಅವರಿಗೆ ಒಳ್ಳೆಯ ಸ್ಥಾನವನ್ನೇ ಕೊಟ್ಟಿದ್ದರು. ಈಗ ಹತಾಶೆಯಿಂದ ಹೀಗೆಲ್ಲ ಮಾತನಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ನಮ್ಮ ನಾಯಕರು ಕಿರಾತಕರಲ್ಲ, ನೀವು ಕಿರಾತಕರು. ಆ‌ ಪದ‌ ನಿಮಗೆ ಅನ್ವಯಿಸುತ್ತದೆಯೇ ವಿನಃ ನಮ್ಮ ನಾಯಕರಿಗಲ್ಲ. ನಾನೊಬ್ಬ ಅಲ್ಪಸಂಖ್ಯಾತ, ಜನ ನನಗೆ ಪ್ರೀತಿ ಮತ್ತು ನೀತಿಯ ಮೇಲೆ‌ ಗೆಲ್ಲಿಸಿದ್ದಾರೆಯೇ ಹೊರತು ಜಾತಿ ನೋಡಿಯಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿಯವರು ಕಿರಾತಕ ಪದ ಬಳಕೆ ಮಾಡಿದ್ದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

ಹಳ್ಳಿಗಳಲ್ಲಿ‌ ನಡೆಯುತ್ತದೆಯೆಂದು ನೀವು ನಿಮ್ಮ ಚೇಲಾಗಳಿಗೆ ಹೇಳಿ ಕಿತಾಪತಿ ಮಾಡಬಹುದು. ಜನ ನನ್ನ ಕ್ಷೇತ್ರದಲ್ಲಿ ನೆಮ್ಮದಿಯಿಂದ ಇದ್ದಾರೆ. ಚುನಾವಣೆಯ ಬಳಿಕ ಪಕ್ಷ, ಜಾತಿ‌ ಭೇದ ಮರೆತು ಕೆಲಸ‌‌ ಮಾಡುತ್ತಿದ್ದೇವೆ. ಬಹಳಷ್ಟು ನಾಯಕರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ನಮ್ಮ ಕೆಲಸ, ನಮ್ಮ ಪ್ರೀತಿ, ವಿಶ್ವಾಸ ನೋಡಿ ಅವರು ಬರುತ್ತಿದ್ದಾರೆ ಎಂದು ಹೇಳಿದರು.

ರಾಮನಗರದಲ್ಲಿ ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಇಕ್ಬಾಲ್ ರವರು, ನಿಮ್ಮ ಸರ್ಕಾರ ಇದ್ದಾಗ‌ ಏನೇನು ಮಾಡಿದ್ದೀರಿ ನೋಡಿದ್ದೇವೆ. ಪಿಡಿಒ ಮಟ್ಟದಲ್ಲಿ ಹಣದ ವವ್ಯಹಾರ ಮಾಡಿದ್ದೀರಿ. ಅಧಿಕಾರಿಗಳ ಜೊತೆ ಹೇಗೆ ನಡೆದುಕೊಂಡಿದ್ದೀರಿ ಎಂಬುದನ್ನು ಅಧಿಕಾರಿಗಳೇ ಹೇಳಿದ್ದಾರೆ. ಜಮೀನ್ದಾರರ ಮಕ್ಕಳು ನಾವು, ನಮಗೆ ಬೇಕಾದಷ್ಟು ದೇವರು ಕೊಟ್ಟಿದ್ದಾನೆ. ಒಂದು ಟೀ ನೂ ಕುಡಿದವರಲ್ಲ, ಮದ್ಯಪಾನ ಮಾಡಿದವರೂ ಅಲ್ಲ. ಕಮಿಷನ್ ಆರೋಪ ಒಂದೇ‌ ಒಂದು ಸಾಬೀತಾದರೆ ರಾಜಕಾರಣ ಬಿಟ್ಟು,‌ ನಿಮ್ಮ ಮುಖನೂ ನೋಡಲ್ಲ ಎಂದು ಸವಾಲು ಹಾಕಿದರು.

ಜನ ಅವರ (ಜೆಡಿಎಸ್​​) ಸ್ಥಾನಮಾನ ಎಲ್ಲಿದೆ ಎಂದು ತೋರಿಸಿದ್ದಾರೆ. ಒಂದು ಕಾಲದಲ್ಲಿ‌ ಜನರು ಅವರಿಗೆ ಒಳ್ಳೆಯ ಸ್ಥಾನವನ್ನೇ ಕೊಟ್ಟಿದ್ದರು. ಈಗ ಹತಾಶೆಯಿಂದ ಹೀಗೆಲ್ಲ ಮಾತನಾಡುತ್ತಿದ್ದಾರೆ. ಜನರ ಬಗ್ಗೆ ಆಲೋಚನೆ‌ ಮಾಡುತ್ತಿಲ್ಲ. ನಿಮ್ಮ ಹತಾಶೆ ಬಗ್ಗೆ ಆಲೋಚನೆ ಇದೆ. ಕಿರಾತಕರು, ಲೂಟಿಕೋರರೆಂದೆಲ್ಲ ಪದ ಬಳಸುತ್ತೀರಲ್ಲ, ಅದೆಲ್ಲ ನಿಮ್ಮಲ್ಲಿ ಅಡಗಿರುವ ವಿಷ. ನಮ್ಮಲ್ಲಿ ಅದೆಲ್ಲ ಇಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಅಷ್ಟೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ರಾಜ್ಯಕ್ಕೆ, ಇಡೀ ದೇಶಕ್ಕೆ ನಿಮ್ಮನ್ನು ಪರಿಚಯಿಸಿದವರೇ ರಾಮನಗರದ ಜನ. ಆದರೆ, ನೀವು ಅವರಿಗೆ ಸರಿಯಾಗಿ ಸ್ಪಂದಿಸಲೇ ಇಲ್ಲ. ನೀವು ಅಧಿಕಾರ ಸಿಕ್ಕಿದಾಗ ತೋರಿಸಿರುವ ಅಹಂ ನಿಮ್ಮನ್ನು ತಿಂದು‌ ಹಾಕಿದೆ, ಬೇರೇನಿಲ್ಲ. ನಿಮ್ಮನ್ನು ಮುಖ್ಯಮಂತ್ರಿ ಮಾಡಿ ಅರ್ಕಾವತಿಯ ಕೊಳಕು ನೀರು ಕುಡಿಯಬೇಕಾ? ಬೆಂಗಳೂರು ಸ್ಯಾನಟಿರಿ ನೀರು ಫಿಲ್ಟರ್ ಮಾಡಿ ಕುಡಿಯಬೇಕು ಎನ್ನಲು ನಿಮಗೆ ಹುದ್ದೆ ಕೊಡಬೇಕಾ? ಮುಖ್ಯಮಂತ್ರಿ ಆಗಿ ಒಂದು ಸೈಟ್ ಕೊಡೋದಕ್ಕೆ ಆಗಿರಲಿಲ್ಲ. ನಿಮ್ಮ ಪೆನ್ನು ಪೇಪರ್ ಬಳಸಿ ರಾಮನಗರವನ್ನು ಮಾದರಿ ಮಾಡಬಹುದಾಗಿತ್ತು. ಒಂದೇ‌ ಒಂದು ರಸ್ತೆಯನ್ನೂ ಮಾಡಿಲ್ಲ ಎಂದು ಕಿಡಿ ಕಾರಿದರು.

ಅನಿತಾ ಕುಮಾರಸ್ವಾಮಿ ತಂದ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗಲಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇಲ್ಲಿಗೆ ಬಂದು ಒಂದೇ ಅವರ ಒಂದು ಕೆಲಸ ತೋರಿಸಲಿ. ರಾಜಕಾರಣಕ್ಕೋಸ್ಕರ ಏನೇನೋ ಮಾತನಾಡಬಾರದು. ರಾಜಕಾರಣಕ್ಕಾಗಿ ಯಾರನ್ನೋ ತಬ್ಬಿಕೊಂಡು ಯಾರದ್ದೋ ಶಾಲು ಹಾಕಿಕೊಂಡಿದ್ದಾರೆ. ಬಿಜೆಪಿ ವಕ್ತಾರರಂತೆ ಮಾತನಾಡುತ್ತಿದ್ದಾರೆ. ನಿಮ್ಮ ಪಕ್ಷ, ನಿಮ್ಮ ಸಿದ್ಧಾಂತವನ್ನೇ ಮರೆತು ಬಿಟ್ಟದ್ದೀರಿ ಎಂದು ಇಕ್ಬಾಲ್ ಹುಸೇನ್ ಕುಹಕವಾಡಿದರು.

PREV

Recommended Stories

ನೌಕರರ ಮುಂಬಡ್ತಿಗೆ ತರಬೇತಿ ಕಡ್ಡಾಯ
ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ