ಆನೆಗೊಂದಿಯೇ ರಾಮಾಯಣದ ಕಿಷ್ಕಿಂಧ-ಶಾಸನ ಪತ್ತೆ

KannadaprabhaNewsNetwork |  
Published : Apr 07, 2024, 01:47 AM IST
ಗಂಗಾವತಿ ತಾಲೂಕಿನ ಕಡೇಬಾಗಿಲು ಬಳಿ ವಿಜಯನಗರ ಕಾಲದ ಶಾಸನಪತ್ತೆಯಾಗಿರುವುದು. | Kannada Prabha

ಸಾರಾಂಶ

ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿಯ ಕಡೆ ಬಾಗಿಲು ಬೆಟ್ಟದ ಮೇಲ್ಭಾಗದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆಯಾಗಿದೆ. ಗಂಗಾವತಿಯ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು ಬೆಟ್ಟಕ್ಕೆ ಚಾರಣ ಹೋದಾಗ ಈ ಶಾಸನ ಗಮನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗಂಗಾವತಿ

ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿಯ ಕಡೆ ಬಾಗಿಲು ಬೆಟ್ಟದ ಮೇಲ್ಭಾಗದಲ್ಲಿ ವಿಜಯನಗರ ಕಾಲದ ಶಾಸನ ಪತ್ತೆಯಾಗಿದೆ. ಗಂಗಾವತಿಯ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು ಬೆಟ್ಟಕ್ಕೆ ಚಾರಣ ಹೋದಾಗ ಈ ಶಾಸನ ಗಮನಿಸಿದ್ದಾರೆ.

ಮಣ್ಣಿನಲ್ಲಿ ಹೂತು ಹೋಗಿದ್ದ ಶಾಸನವನ್ನು ಪೂರ್ಣ ಸ್ವಚ್ಛಗೊಳಿಸಿದ ನಂತರ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಶಾಸನವನ್ನು ಪರಿಶೀಲಿಸಿ ಓದಿ ಅದರ ಮಹತ್ವ ಗುರುತಿಸಿದ್ದಾರೆ. ಶಾಸನವು 8 ಸಾಲುಗಳಲ್ಲಿದ್ದು, ಸ್ವಸ್ತಿ ಶ್ರೀ ಜಯದ್ ಉದಯ ಶಾಲಿವಾಹನ ಶಕ ವರುಷ 1449ನೇ ಕಾಲ ಉಲ್ಲೇಖಿಸುತ್ತಿದ್ದು, ಅದು ಪ್ರಸಕ್ತ ಶಕ 1527ಕ್ಕೆ ಸರಿಯಾಗುತ್ತದೆ. ಶಾಸನದಲ್ಲಿ ಆನೆಗೊಂದಿಯ ಮಹಾ ಪ್ರಧಾನ ಲಕ್ಕಿ ಶೆಟ್ಟಿಯ ಮಗನಾದ ವಿಜಯನಾಥನು ಬೆಟ್ಟದ ಮೇಲಿನ ವೀರಭದ್ರ ದೇವರನ್ನು ಆರಾಧಿಸಿದ ಸಂಗತಿ ಬರೆಯಲ್ಪಟ್ಟಿದೆ. ಶಾಸನದಲ್ಲಿ ಪ್ರಾಸಂಗಿಕವಾಗಿ ಆನೆಗೊಂದಿಯನ್ನು ಹಸ್ತಿನಾವತಿ ಎಂದು ಅದು ಪಂಚಕೋಶ ಮಧ್ಯದಲ್ಲಿತ್ತೆಂದು ಹೇಳಲಾಗಿದೆ. ಅದಕ್ಕೆ ಕಿಷ್ಕಿಂಧ ಪರ್ವತ ಎಂದು ಕೂಡ ಹೆಸರಿತ್ತು ಎಂದು ಉಲ್ಲೇಖಿಸಲಾಗಿರುವುದು ಗಮನಾರ್ಹವಾದ ಸಂಗತಿಯಾಗಿದೆ. ಆನೆಗೊಂದಿಯೇ ರಾಮಾಯಣ ಕಾಲದ ಕಿಷ್ಕಿಂಧ ಎಂದು ಗುರುತಿಸಲು ನೇರವಾಗಿ ಆನೆಗೊಂದಿಯಲ್ಲಿ ಯಾವ ಶಾಸನಗಳು ದೊರೆತಿರಲಿಲ್ಲ. ಆನೆಗೊಂದಿಯಿಂದ ದೂರದ ದೇವಘಾಟ್ ಮತ್ತು ಹುಲಿಗಿಯ ಶಾಸನಗಳಲ್ಲಿ ಮಾತ್ರ ಕಿಷ್ಕಿಂಧೆಯ ಉಲ್ಲೇಖವಿತ್ತು. ಪ್ರಸ್ತುತ ಆನೆಗೊಂದಿಯ ಈ ಶಾಸನವೇ ಕಿಷ್ಕಿಂಧಾ ಪರ್ವತ ಎಂದು ಉಲ್ಲೇಖಿಸಿರುವುದು ಕಿಷ್ಕಿಂಧ ಮತ್ತು ಆಂಜನೇಯನ ಜನ್ಮಸ್ಥಳಗಳ ಬಗೆಗಿನ ವಾದ ವಿವಾದಗಳ ಸಂದರ್ಭದಲ್ಲಿ ಈ ಉಲ್ಲೇಖ ತುಂಬಾ ಮಹತ್ವ ಪಡೆದುಕೊಂಡಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಳವೆಂದು ಗುರುತಿಸಲು ಈ ಶಾಸನ ಮತ್ತೊಂದು ದಾಖಲೆಯಾಗಿದೆ ಎಂದು ಡಾ. ಕೋಲ್ಕಾರ್ ಅಭಿಪ್ರಾಯಪಟ್ಟಿದ್ದಾರೆ.

ಶಾಸನ ಶೋಧನೆ ಹಾಗೂ ಪ್ರತಿ ಮಾಡಿಕೊಳ್ಳುವಲ್ಲಿ ಕಿಷ್ಕಿಂಧಾ ಚಾರಣ ಬಳಗದ ಹರ ನಾಯಕ್, ಸಂತೋಷ್ ಕುಂಬಾರ್, ಅರ್ಜುನ್ ಆರ್., ಮಂಜುನಾಥ್ ಇಂಡಿ, ವಿಜಯ್ ಬಳ್ಳಾರಿ, ಆನಂದ ಚೌಡಕಿ, ವೀರೇಶ್ ಡಗ್ಗಿ ಹಾಗೂ ಇತರ ಸದಸ್ಯರು ನೆರವಾಗಿದ್ದಾರೆ ಎಂದು ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು