ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ ದಾಖಲಾಯ್ತು ಕಿಶೋರ್ ಕುಮಾರ್ ಸಿನಿಮಾ ಹಾಡುಗಳ 40 ಗಂಟೆಗಳ ಗಾಯನ

KannadaprabhaNewsNetwork |  
Published : Nov 22, 2025, 03:00 AM IST
ಗೋಲ್ಡನ್‌ ಬುಕ್‌ ಆಫ್‌ ರೆಕಾರ್ಡ್‌ಗೆ ದಾಖಲಾದ 40 ಗಂಟೆಗಳ ಗಾಯನ | Kannada Prabha

ಸಾರಾಂಶ

ಬಾಲಿವುಡ್‌ನ ಲೆಜೆಂಡರಿ ಗಾಯಕ ಕಿಶೋರ್ ಕುಮಾರ್ ಹಾಡಿರುವ ಸಿನಿಮಾ ಹಾಡುಗಳನ್ನು ಮಂಗಳೂರಿನಲ್ಲಿ ತಂಡವೊಂದು 40 ಗಂಟೆಗಳ ಕಾಲ ನಿರಂತರ ಹಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು ಬಾಲಿವುಡ್‌ನ ಲೆಜೆಂಡರಿ ಗಾಯಕ ಕಿಶೋರ್ ಕುಮಾರ್ ಹಾಡಿರುವ ಸಿನಿಮಾ ಹಾಡುಗಳನ್ನು ಮಂಗಳೂರಿನಲ್ಲಿ ತಂಡವೊಂದು 40 ಗಂಟೆಗಳ ಕಾಲ ನಿರಂತರ ಹಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದಿದೆ.

ಷೋಡಶಿ ಫೌಂಡೇಶನ್ ನೇತೃತ್ವದಲ್ಲಿ ‘ಗಾತಾ ರಹೇ ಮೇರಾ ದಿಲ್’ ಎಂಬ ಹೆಸರಿನಲ್ಲಿ ಈ ದಾಖಲೆ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆದಿದೆ.

ನ.18ರಂದು ನಸುಕಿನ ಜಾವ 2 ಗಂಟೆಗೆ ವಿಶ್ವ ದಾಖಲೆ ಪ್ರಯತ್ನ ಆರಂಭವಾಗಿ ನ.19 ರಂದು ಸಂಜೆ 6 ಗಂಟೆಗೆ ನಿರಂತರ 40 ಗಂಟೆಗಳ ಕಾಲ ಹಾಡಿ ತಂಡ ದಾಖಲೆ ಬರೆದಿದೆ. ಹೈದರಾಬಾದ್‌ನಲ್ಲಿ 36 ಗಂಟೆಗಳ ಕಾಲ ಕಿಶೋರ್‌ ಕುಮಾ‌ರ್ ಹಾಡುಗಳನ್ನು ಹಾಡಿ ದಾಖಲೆ ಬರೆಯಲಾಗಿತ್ತು‌. ಅದನ್ನು ಮುರಿದು ಮಂಗಳೂರಿನ ತಂಡ ಈ ದಾಖಲೆ ಬರೆದಿದೆ. 130ರಷ್ಟು ಗಾಯಕರು ‘ಕರೋಕೆ’ ಸ್ವರೂಪದಲ್ಲಿ ಕಿಶೋರ್ ಕುಮಾರ್‌ರವರ 400ಕ್ಕೂ ಅಧಿಕ ಅಮರ ಗೀತೆಗಳನ್ನು ಹಾಡಿದ್ದಾರೆ. ವಿಶೇಷವೆಂದರೆ ಕಿಶೋರ್ ಕುಮಾರ್ ಹಾಡಿರುವ ಏಕೈಕ ಕನ್ನಡ ಸಿನಿಮಾ ಹಾಡು ‘ಆಡೂ ಆಟ ಆಡು..’ ಹಾಡನ್ನೂ ಹಾಡಲಾಗಿತ್ತು.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಹಾಡುಗಳನ್ನು ನಿರಂತರ 24 ಗಂಟೆ ಹಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದ ಗಾಯಕ ಯಶವಂತ್ ಎಂ.ಜಿ.ಯವರ ಮಾರ್ಗದರ್ಶನದಲ್ಲಿ ಈ ದಾಖಲೆ ಬರೆಯಲಾಗಿದೆ. ಗಾಯಕರ 9 ತಂಡಗಳನ್ನು ಮಾಡಲಾಗಿದೆ. ಒಂದೊಂದು ತಂಡದಲ್ಲಿ ಹತ್ತಾರು ಗಾಯಕರಿದ್ದು, ತಂಡವೊಂದಕ್ಕೆ ಎರಡೆರಡು ಗಂಟೆಗಳ ಕಾಲ ಹಾಡಲು ಅವಕಾಶ ನೀಡಲಾಗಿತ್ತು. ಇಲ್ಲಿ ಬೆರಳೆಣಿಕೆಯಷ್ಟು ಮಂದಿ ಪ್ರೊಫೆಷನಲ್, ಸೆಲೆಬ್ರಿಟಿ ಹಾಡುಗಾರರಿದ್ದರು ಬಿಟ್ಟರೆ, ಬೇರೆಲ್ಲರೂ ಹಾಡುವಿಕೆಯ ಅಭಿರುಚಿ ಉಳ್ಳವರು ಭಾಗವಹಿಸಿದ್ದರು. ದಾಖಲೆ ಬರೆದ ತಂಡಕ್ಕೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯನ್ ಹೆಡ್ ಡಾ.ಮನೀಷ್ ಬಿಷ್ಣೋಯ್ ಸಾಂಕೇತಿಕವಾಗಿ ಪ್ರಶಸ್ತಿಯನ್ನು ಪ್ರದಾನಿಸಿದರು. ಈ ಸಂದರ್ಭ ಷೋಡಶಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಭರತ್ ಕಾಮತ್‌ ಇದ್ದರು.

------------------

PREV

Recommended Stories

ಸಾಮಾಜಿಕ ಸಮಸ್ಯೆ ಬಗ್ಗೆ ಕವಿತೆ ಮೂಡಿ ಬರಲಿ
ವಿವಾಹ ವಿಚ್ಛೇದನದಿಂದ ಕುಟುಂಬ ವ್ಯವಸ್ಥೆಯ ಮೇಲೆ ಪೆಟ್ಟು: ಸ್ವರ್ಣವಲ್ಲೀ ಶ್ರೀ